22 ಮಂದಿ ಸಾವು: ಆರ್‌ಟಿಐ ಅಡಿ ಕೇಂದ್ರ ಮಾಹಿತಿ, ಯುಪಿಎ ಕಾಲದಲ್ಲಿ 42 ದಾಳಿ, 871 ಜನರು ಸಾವು
ನವದೆಹಲಿ(ಆ.28): ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾದ ನಂತರ ಭಾರತದ ಒಳನಾಡಿನಲ್ಲಿ (ಕಾಶ್ಮೀರ-ಈಶಾನ್ಯ ಹೊರತಾದ ರಾಜ್ಯಗಳು) ಕೇವಲ 7 ಭಯೋತ್ಪಾದಕ ದಾಳಿಗಳು ನಡೆದಿದ್ದು, 11 ನಾಗರಿಕರು, 11 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆದರೆ 2004ರಿಂದ 2014ರವರೆಗೆ ದೇಶವನ್ನು ಆಳಿದ ಯುಪಿಎ ಸರ್ಕಾರದ ಅವಧಿಯಲ್ಲಿ 42 ಉಗ್ರ ದಾಳಿಗಳು ಸಂಭವಿಸಿದ್ದವು ಹಾಗೂ 853 ನಾಗರಿಕರು, 18 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು ಎಂಬ ಅಂಕಿ-ಅಂಶಗಳು ಮಾಹಿತಿ ಹಕ್ಕಿನ ಅಡಿ ಬಹಿರಂಗವಾಗಿವೆ.
ಪುಣೆ ನಿವಾಸಿ ಪ್ರಫುಲ್ಲ ಶಾರದಾ ಎಂಬುವವರು 2004ರಿಂದ 2014ರವರೆಗಿನ (ಮನಮೋಹನ ಸಿಂಗ್ ಅವಧಿಯ) ಹಾಗೂ 2014ರಿಂದ 2022ರವರೆಗಿನ (ಮೋದಿ ಅವಧಿಯ) ದೇಶದಲ್ಲಿನ ಭಯೋತ್ಪಾದನೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಮಾಹಿತಿ ಹಕ್ಕಿನಲ್ಲಿ ಬಯಸಿದ್ದರು. ಇದಕ್ಕೆ ಈಗ ಕೇಂದ್ರ ಗೃಹ ಸಚಿವಾಲಯ ಉತ್ತರ ನೀಡಿದೆ.
ದುಷ್ಕೃತ್ಯಕ್ಕೆ ಬಂದ ಪಾಕ್ ಉಗ್ರನಿಗೆ ರಕ್ತ ನೀಡಿ ಜೀವ ಉಳಿಸಿದ ಸೇನೆ!
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜಿದಾರರಾದ ಶಾರದಾ, ‘ಕೇಂದ್ರ ಏಕೆ ಕೇವಲ ಒಳನಾಡಿನ ಮಾಹಿತಿ ಮಾತ್ರ ನೀಡಿದೆ ಎಂಬುದು ಆಶ್ಚರ‍್ಯದ ವಿಷಯ. ಆದರೆ, ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳ ಮಾಹಿತಿಯನ್ನೂ ಸಚಿವಾಲಯವು ಆಯಾ ರಾಜ್ಯಗಳಿಂದ ಕ್ರೋಡೀಕರಿಸುತ್ತಿದೆ’ ಎಂದು ಮಾಹಿತಿ ನೀಡಲಾಗಿದೆ ಅರ್ಜಿದಾರರು ಹೇಳಿದ್ದಾರೆ.
2006, 2008 ಭೀಕರ:
ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ 2006 ಹಾಗೂ 2008ನೇ ಇಸವಿಗಳು ದೇಶದ ಒಳನಾಡಿನ ಭಯೋತ್ಪಾದನೆ ದೃಷ್ಟಿಯಿಂದ ಭೀಕರ ವರ್ಷಗಳಾಗಿವೆ. 2006ರಲ್ಲಿ 238 ಹಾಗೂ 2008ರಲ್ಲಿ 306 ಜನರು ಸಾವಿಗೀಡಾದರು. ಕ್ರಮವಾಗಿ 1266 ಹಾಗೂ 833 ಜನರು ಈ 2 ವರ್ಷಗಳಲ್ಲಿ ಗಾಯಗೊಂಡರು ಎಂಬ ಸಂಗತಿ ಮಾಹಿತಿಯಲ್ಲಿದೆ.
2008ರಲ್ಲಿ ನಡೆದ ಮುಂಬೈ ದಾಳಿ (26/11) ವೇಳೆ 18 ಭದ್ರತಾ ಸಿಬ್ಬಂದಿ ಹಾಗೂ 9 ಉಗ್ರರು ಸಾವಿಗೀಡಾದರು. 2008ರಲ್ಲಿ ಇತರ ಭಯೋತ್ಪಾದಕ ದಾಳಿಗಳು ಉತ್ತರ ಪ್ರದೇಶದ ರಾಂಪುರ, ಜೈಪುರ, ಬೆಂಗಳೂರು, ದಿಲ್ಲಿ, ಮೆಹರೌಲಿ, ಮಾಲೇಗಾಂವ್ ಗುಜರಾತ್‌ನಲ್ಲಿ ನಡೆದವು. 2006ರಲ್ಲಿ ಅಹಮದಾಬಾದ್ ರೈಲು ನಿಲ್ದಾಣ, ಮುಂಬೈನ 7/11 ಸಬರ್ಬನ್ ರೈಲ್ವೆ ಸರಣಿ ದಾಳಿ, ಮಾಲೇಗಾಂವ್ ಸ್ಫೋಟ ಆಗಿದ್ದವು ಎಂದು ತಿಳಿಸಿದೆ.