* ಲಡಾಖ್‌ನಲ್ಲಿ ಸೇನಾ ವಾಹನ ಅಪಘಾತ
* ನದಿಗುರುಳಿದ ಬಸ್, 7 ಯೋಧರು ಸಾವು
* 26 ಸೈನಿಕರನ್ನು ಕರೆದೊಯ್ಯುತ್ತಿದ್ದ ಬಸ್
ಲಡಾಖ್(ಮೇ.27): ಲಡಾಖ್‌ನಲ್ಲಿ 26 ಸೈನಿಕರನ್ನು ಕರೆದೊಯ್ಯುತ್ತಿದ್ದ ಬಸ್ ನದಿಗೆ ಬಿದ್ದಿದೆ. ಈ ಅವಘಡದಲ್ಲಿ ಸೇನೆಯ ಏಳು ಯೋಧರು ಸಾವನ್ನಪ್ಪಿದ್ದು, ಹಲವು ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಯೋಧರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅಪಘಾತದಲ್ಲಿ ಏಳು ಸೈನಿಕರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಅನೇಕರಿಗೆ ಗಂಭೀರ ಗಾಯಗಳಾಗಿವೆ.
ಥೋಯಿಸ್‌ನಿಂದ ಸುಮಾರು 25 ಕಿಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಸೇನೆಯ ಬಸ್ ಸುಮಾರು 50-60 ಅಡಿ ಆಳದಲ್ಲಿ ಶ್ಯೋಕ್ ನದಿಗೆ ಬಿದ್ದಿದೆ. ಇದರಲ್ಲಿ ಸೇನೆಯ ಎಲ್ಲಾ ಯೋಧರು ಗಾಯಗೊಂಡಿದ್ದಾರೆ. ಎಲ್ಲಾ ಜವಾನರನ್ನು ಪಾರ್ತಾಪುರದ 403 ಫೀಲ್ಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಮತ್ತು ಶಸ್ತ್ರಚಿಕಿತ್ಸಕ ತಂಡಗಳನ್ನು ಲೇಹ್‌ನಿಂದ ಪರ್ತಾಪುರಕ್ಕೆ ಕಳುಹಿಸಲಾಗಿದೆ. ಆದರೆ, ಈ ಪೈಕಿ ಏಳು ಯೋಧರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಸೇನೆಯ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ
ಗಂಭೀರವಾಗಿ ಗಾಯಗೊಂಡ ಯೋಧರ ಸಹಾಯಕ್ಕಾಗಿ ವಾಯುಸೇನೆಯನ್ನೂ ಸಂಪರ್ಕಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ವೆಸ್ಟರ್ನ್ ಕಮಾಂಡ್‌ಗೆ ಕಳುಹಿಸಬಹುದು. ಸೇನಾ ಬಸ್ ಯಾವ ಕಾರಣಕ್ಕೆ ರಸ್ತೆಯಿಂದ ಜಾರಿ ನದಿಗೆ ಬಿದ್ದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆ ಕುರಿತು ಸೇನೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೈನಿಕರ ಬಸ್ ಟ್ರಾನ್ಸಿಟ್ ಕ್ಯಾಂಪ್‌ನಿಂದ ಸಬ್ ಸೆಕ್ಟರ್ ಹನೀಫ್‌ನ ಮುಂದಿನ ಸ್ಥಳಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.