
ದೆಹಲಿ: ಕಸದಿಂದ ರಸ ಎನ್ನುವ ಮಾತು ಕೇಳಿಯೇ ಇರುತ್ತೇವೆ. ಆದರೆ ನಿಜಕ್ಕೂ ತ್ಯಾಜ್ಯಗಳಿಂದ ಸಾವಿರಾರು ಕೋಟಿ ರೂಪಾಯಿ ದುಡಿಯಬಹುದು ಎಂದರೆ ನಂಬುವಿರಾ? ಇದು ಸಾಮಾನ್ಯ ಜನರಿಗೆ ಅಸಾಧ್ಯವಾದ ಮಾತೇ ಬಿಡಿ. ಆದರೆ, ಒಂದು ಸರ್ಕಾರ ಮನಸ್ಸು ಮಾಡಿದರೆ ಹೇಗೆ ತಾಜ್ಯಮುಕ್ತ ಮಾಡುವುದರ ಜೊತೆಗೆ, ಇದೇ ಕಸದಿಂದ ಸಹಸ್ರಾರು ಕೋಟಿ ರೂಪಾಯಿ ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ ಕೇಂದ್ರ ಸರ್ಕಾರ. ಕಳೆದ 5 ವರ್ಷಗಳಲ್ಲಿ, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ 6 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಹರಿದು ಬಂದಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಂದು ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ನಡೆದ ವಿಶೇಷ ಸ್ವಚ್ಛತಾ ಅಭಿಯಾನ 6.0ರ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ ಎಂಬುದನ್ನು ಈ ವರ್ಷಗಳಲ್ಲಿ ಕಲಿತಿದ್ದೇವೆ; ತ್ಯಾಜ್ಯವು ವ್ಯರ್ಥವಾಗದಂತೆ ತಡೆದು, ಅದನ್ನು ಮಾರುಕಟ್ಟೆಗೆ ತರುವ ಮೂಲಕ ಆದಾಯವನ್ನಾಗಿ ಪರಿವರ್ತಿಸುತ್ತಿದ್ದೇವೆ ಎಂದು ಹೇಳಿದರು.
"2014ರಲ್ಲಿ ಪ್ರಧಾನಿಯಾದ ತಕ್ಷಣ, ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದು ಶೀಘ್ರದಲ್ಲೇ ಒಂದು ಜನ ಚಳವಳಿಯಾಗಿ ಮಾರ್ಪಟ್ಟಿತು. ನಾವು ಹಿಂದಿನ ಅನುಭವಗಳನ್ನು ಆಧರಿಸಿ, ಪ್ರತಿ ವರ್ಷವೂ ಇದನ್ನು ಮುಂದುವರಿಸಿಕೊಂಡು ಬಂದಿದ್ದೇವೆ ಎಂದ ಸಚಿವರು, ಈ ವರ್ಷವೂ ಈ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ಪ್ರತಿ ವರ್ಷವೂ ಕಾರ್ಯಕ್ಷಮತೆಯನ್ನು ಸುಧಾರಿಸುವ ಗುರಿಯೊಂದಿಗೆ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಕಳೆದ 6 ವರ್ಷಗಳಿಂದ ಒಂದು ತಿಂಗಳ ಕಾಲ ವಿಶೇಷ ಸ್ವಚ್ಛತಾ ಅಭಿಯಾನವನ್ನು ನಡೆಸಬೇಕೆಂದು ನಿರ್ಧರಿಸಲಾಯಿತು. ಅಕ್ಟೋಬರ್ 2ರ ಗಾಂಧಿ ಜಯಂತಿಯಿಂದ ಅಕ್ಟೋಬರ್ 31ರ ಪಟೇಲ್ ಜಯಂತಿ ವರೆಗಿನ ಅವಧಿಯನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಉಪಕ್ರಮವನ್ನು ಕಾಲಕಾಲಕ್ಕೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಹಿಂದಿನ ಅಭಿಯಾನಗಳಿಂದ ಪಡೆದ ಒಳನೋಟಗಳನ್ನು ಬಳಸಿಕೊಂಡು ಹೊಸ ಆಯಾಮಗಳನ್ನು ಸೇರಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ