ದೇಶದಲ್ಲಿ ಕೊರೋನಾ ಸೋಂಕು ಮಹಾ ಸ್ಫೋಟ!| ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 352 ಕೇಸ್, ಯಾವ ರಾಜ್ಯದಲ್ಲೂ ಒಂದೇ ದಿನ ಇಷ್ಟುಕೇಸಿಲ್ಲ| ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2334ಕ್ಕೆ , ಮುಂಬೈನಲ್ಲಿ 100ಕ್ಕೇರಿದ ಸಾವಿನ ಸಂಖ್ಯೆ
ಮುಂಬೈ(ಏ.14): 21 ದಿನಗಳ ಲಾಕ್‌ಡೌನ್ ಮುಕ್ತಾಯಗೊಳ್ಳಲು ಕೇವಲ ಒಂದು ದಿನ ಬಾಕಿ ಇರುವಾಗಲೇ ಮಾರಕ ಕೊರೋನಾ ವೈರಸ್ ದೇಶದಲ್ಲಿ ಮಹಾ ಸ್ಫೋಟದ ರೂಪ ತಳೆಯುತ್ತಿರುವ ಲಕ್ಷಣಗಳು ಕಂಡುಬಂದಿವೆ. ಮಹಾರಾಷ್ಟ್ರವೊಂದರಲ್ಲೇ ಸೋಮವಾರ ದಾಖಲೆಯ 352 ಸೋಂಕಿತರು ಪತ್ತೆಯಾಗಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲೂ ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ದೃಢಪಟ್ಟನಿದರ್ಶನ ಇಲ್ಲದ ಕಾರಣ ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 98 ಪ್ರಕರಣಗಳು ದೃಢಪಟ್ಟಿವೆ.
ಇನ್ನು ಕೆಲವೇ ದಿನಗಳಲ್ಲಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಅದಾದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಇದಕ್ಕೆ ಕಡಿವಾಣ ಹಾಕದೇ ಹೋದರೆ ಕೊರೋನಾ ವೈರಸ್ ದೇಶದಲ್ಲಿ 3ನೇ ಹಂತಕ್ಕೆ ವಿಸ್ತರಿಸಿ, ಸಮುದಾಯಕ್ಕೆ ಹರಡುವ ಭೀತಿಯೂ ಎದುರಾಗಿದೆ.
ಮಹಾರಾಷ್ಟ್ರದಲ್ಲಿ 352 ಪ್ರಕರಣಗಳು ವರದಿಯಾಗುವುದರೊಂದಿಗೆ ಆ ರಾಜ್ಯದಲ್ಲಿ ಕೊರೋನಾಪೀಡಿತರ ಸಂಖ್ಯೆ 2334ಕ್ಕೆ ಏರಿಕೆಯಾಗಿದೆ. ಇದೇ ವೇಳೆ 24 ತಾಸುಗಳ ಅವಧಿಯಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ಹೀಗಾಗಿ ಆ ರಾಜ್ಯವೊಂದರಲ್ಲೇ ಕೊರೋನಾದಿಂದ ಪ್ರಾಣ ತೆತ್ತವರ ಸಂಖ್ಯೆ 160ಕ್ಕೆ ಹೆಚ್ಚಳವಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನಾಳೆಯಿಂದ ಸರಳ, ಸ್ಮಾರ್ಟ್ ಲಾಕ್‌ಡೌನ್?: ಯಾರಿಗೆಲ್ಲಾ ಇರುತ್ತೆ ರಿಯಾಯಿತಿ?
ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ 352 ಪ್ರಕರಣಗಳ ಪೈಕಿ ಮುಂಬೈ ಮಹಾನಗರಿಯೊಂದರ ಪಾಲೇ 242. ಇದಲ್ಲದೇ ಸೋಮವಾರ ವರದಿಯಾಗಿರುವ 11 ಸಾವಿನ ಪ್ರಕರಣಗಳಲ್ಲಿ ಮುಂಬೈನವರೇ 9 ಜನರಿದ್ದಾರೆ. ಮುಂಬೈನಲ್ಲಿ ಒಟ್ಟು ಮೃತರ ಸಂಖ್ಯೆ ಬರೋಬ್ಬರಿ 100ಕ್ಕೆ ಹೆಚ್ಚಳವಾಗಿದೆ. ಹೀಗಾಗಿ ಮುಂಬೈನಲ್ಲಿ ಈ ಮಹಾಮಾರಿ ವ್ಯಾಪಕವಾಗಿ ಹಬ್ಬಿರುವ ಭೀತಿ ಆವರಿಸತೊಡಗಿದೆ.
ಈ ಮಧ್ಯೆ ತಮಿಳುನಾಡಿನಲ್ಲಿ ಸೋಮವಾರ 98 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಆ ರಾಜ್ಯದಲ್ಲಿ ಕೊರೋನಾಪೀಡಿತರ ಸಂಖ್ಯೆ 1173ಕ್ಕೆ ಹೆಚ್ಚಳವಾಗಿದೆ. ಸೋಂಕಿತರು ಹೆಚ್ಚಿದ್ದರೂ ಸಾವಿನ ಸಂಖ್ಯೆ 11ರಷ್ಟಿರುವುದು ಆಶಾದಾಯಕ ಬೆಳವಣಿಗೆ ಎಂಬುದು ತಜ್ಞರ ವಿಶ್ಲೇಷಣೆ.
ಪೊಲೀಸರಿಗೆ 'ಬೆತ್ತಲೆ' ಸವಾಲು, ಬಟ್ಟೆ ಕಳಚಿ ಕಿತ್ತೆಸೆದು ಮಹಿಳೆಯ ಹುಚ್ಚಾಟ!
10 ಸಾವಿರ ಗಡಿ ಸನಿಹಕ್ಕೆ ದೇಶದಲ್ಲಿ ಸೋಂಕಿತರು
ನವದೆಹಲಿ: ದೇಶದಲ್ಲಿ ಸೋಮವಾರ 839 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ವೈರಸ್‌ಪೀಡಿತರ ಸಂಖ್ಯೆ ಭಾರತದಲ್ಲಿ 9975ಕ್ಕೆ ಹೆಚ್ಚಳವಾಗಿದೆ. ತನ್ಮೂಲಕ 10 ಸಾವಿರದ ಗಡಿಗೆ ಸಮೀಪಿಸಿದೆ. ಇದೇ ವೇಳೆ, 19 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 346ಕ್ಕೆ ಹೆಚ್ಚಳವಾಗಿದೆ.
ಮೊದಲ ಬಾರಿಗೆ 24 ತಾಸಲ್ಲಿ 51 ಸಾವು: ಕೇಂದ್ರ ಸರ್ಕಾರ
ನವದೆಹಲಿ: ಕೊರೋನಾ ವೈರಸ್ ತುತ್ತಾಗಿದ್ದ 51 ಮಂದಿ ಕಳೆದ 24 ತಾಸುಗಳಲ್ಲಿ ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದಾರೆ. ಒಂದೇ ದಿನ ಇಷ್ಟೊಂದು ಮಂದಿ ಸಾವಿಗೀಡಾಗಿರುವುದು ಭಾರತದಲ್ಲಿ ಇದೇ ಮೊದಲು.