* ಇನ್ನೊಬ್ಬ ಕನ್ನಡಿಗ ಪ್ರಧಾನಿಯಾಗುವುದು ಸುಲಭವಲ್ಲ
* ಜೂ.1 ಕನ್ನಡಿಗರ ಸೌಭಾಗ್ಯದ ದಿನ
* ಭ್ರಷ್ಟಾಚಾರ, ಗಲಭೆ, ಭಯೋತ್ಪಾದನೆಗೆ ಅವಕಾಶ ನೀಡದೆ ಆಡಳಿತ ನಡೆಸಿದ್ದರು
* ಕರುನಾಡಿಗೆ ಅಪಾರ ಕೊಡುಗೆ ನೀಡಿದ್ದರು
ಬೆಂಗಳೂರು(ಜೂ.01): ಇಪ್ಪತ್ತೈದು ವರ್ಷಗಳ ಹಿಂದೆ ಆ ದಿನ ದೇವೇಗೌಡರು ಪ್ರಧಾನ ಮಂತ್ರಿಯಾಗಲಿದ್ದಾರೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಬಹುಶಃ ದೇವೇಗೌಡ ಅವರಿಗೂ ಇರಲಿಲ್ಲ. ಅಲ್ಲಿ ನಡೆದ ಹಲವು ರಾಜಕೀಯ ಬೆಳವಣಿಗೆಗಳೇ ಇದಕ್ಕೆಲ್ಲ ಕಾರಣ. ದೈವಕೃಪೆಯೂ ಕಾರಣವಾಗಿದೆ.
ನಮ್ಮ ತಾಯಿಗೂ ಸಹ ದೇವೇಗೌಡರು ಕರ್ನಾಟಕ ಬಿಟ್ಟು ದೆಹಲಿಗೆ ಹೋಗುವುದು ಇಷ್ಟಇರಲಿಲ್ಲ. ನಾವು ಇಲ್ಲೇ ಇರೋಣ ಎಂದು ತಾಯಿ ಹೇಳುತ್ತಿದ್ದುದ್ದು ನನಗೆ ಇನ್ನೂ ನೆನಪಿನಲ್ಲಿದೆ. ಒಂದು ಕಡೆ ಪ್ರಧಾನಿಯಾದ ಸಂತೋಷ, ಮತ್ತೊಂದು ಕಡೆ ಪ್ರಾಮಾಣಿಕವಾದ ಸಿದ್ಧಾಂತಗಳನ್ನು ಇಟ್ಟುಕೊಂಡು ಅಲ್ಲಿ ನಿಭಾಯಿಸಲು ಸಾಧ್ಯವೇ ಎಂಬ ಆತಂಕ ನಮ್ಮನ್ನು ಕಾಡುತ್ತಿತ್ತು.
ಈಗಿನ ಪ್ರಧಾನಿ ಹೊರದೇಶದಿಂದ ಕಪ್ಪು ಹಣ ತರುತ್ತೇನೆ ಎಂದು ಘೋಷಣೆ ಮಾಡಿದರು. ಆದರೆ, ದೇವೇಗೌಡ ಅವರು ಇಂತಹ ಘೋಷಣೆ ಮಾಡಲು ಹೋಗಲಿಲ್ಲ. ಕಪ್ಪು ಹಣ ಇರುವವರು ತಾವೇ ಸ್ವತಃ ಮುಂದೆ ಬಂದು ಅದನ್ನು ಘೋಷಣೆ ಮಾಡಿಕೊಂಡರೆ ಅವರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಸೂಚಿಸಿದರು. ಅಂದಿನ ದಿನಕ್ಕೆ 30 ಸಾವಿರ ಕೋಟಿ ರು. ಕಪ್ಪು ಹಣವನ್ನು ಕಾಳಧನಿಕರು ಘೋಷಣೆ ಮಾಡಿಕೊಂಡರು. ಈ ದೇಶ ಬಡದೇಶವಲ್ಲ, ಪ್ರತಿಯೊಬ್ಬರೂ ಶಕ್ತಿಯುತವಾಗಿ ಬದುಕುವ ಜೀವನ ಕೊಡಬಹುದು. ಅವರ ಮಗನಾಗಿ ಹುಟ್ಟಿದ್ದು, ಯಾವುದೋ ಜನ್ಮದ ಪುಣ್ಯ.
ನಾನೂ ಸಹ ಒಬ್ಬ ಲೋಕಸಭಾ ಸದಸ್ಯನಾಗಿ ಅವರ ಕಾರ್ಯವೈಖರಿಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಒಟ್ಟು 11 ತಿಂಗಳ ಅವಧಿಯಲ್ಲಿ ದೇವೇಗೌಡ ಅವರು ದೆಹಲಿಯಲ್ಲಿ ಮಾತ್ರ ಕುಳಿತು ಕೆಲಸ ಮಾಡಲಿಲ್ಲ. ದೇಶದ ಉದ್ದಗಲಕ್ಕೂ ಪ್ರವಾಸ ಕೈಗೊಂಡು ನಾನಾ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡಿದರು. ಅವೆಲ್ಲಾ ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಬರಲಿಲ್ಲ. ಆದರೂ, ಕನ್ನಡಿಗನಾಗಿ ಅವರು ದೇಶಕ್ಕೆ ಕೊಟ್ಟಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.
ಪ್ರಧಾನಿ ಸ್ಥಾನದಿಂದ ನಿರ್ಗಮಿಸಿದ ನಂತರವೂ ದೇಶದ ಸಮಸ್ಯೆಗಳ ಬಗ್ಗೆ ಅವರು ಹೋರಾಟ ಮಾಡುತ್ತಿದ್ದಾರೆ. ಅಂತಹ ಬೇರೆ ಯಾವುದೇ ವ್ಯಕ್ತಿ ದೇಶದಲ್ಲಿ ಇಲ್ಲ. ಅವರು ಯಾವುದೇ ತಪ್ಪು ಮಾಡದಿದ್ದರೂ ಅಂದಿನ ಕುತಂತ್ರ ರಾಜಕಾರಣಕ್ಕೆ ಬಲಿಯಾಗಬೇಕಾಯಿತು. ಪ್ರಧಾನಿಯಾಗಿ ದೇವೇಗೌಡ ಅವರು ಜಮ್ಮು-ಕಾಶ್ಮೀರ ಸಮಸ್ಯೆ, ಕರ್ನಾಟಕದ ನೀರಾವರಿ ಯೋಜನೆ, ರೈಲ್ವೆ, ಹೆದ್ದಾರಿ ಅಭಿವೃದ್ಧಿ, ಬೆಂಗಳೂರು ನಗರ ಅಭಿವೃದ್ಧಿಗೆ ಸಾಕಷ್ಟುಕೊಡುಗೆ ನೀಡಿದ್ದಾರೆ. ಮತ್ತೊಬ್ಬ ಕನ್ನಡಿಗ ಪ್ರಧಾನಿಯಾಗುವುದು ಸುಲಭದ ಮಾತಲ್ಲ. ಜೂ.1 ಪ್ರತಿ ಕನ್ನಡಿಗನ ಸೌಭಾಗ್ಯದ ದಿನ.
ದೇವೇಗೌಡ ಅವರಂತಹ ರಾಜಕಾರಣಿ ಐದೋ, ಹತ್ತೋ ವರ್ಷ ನಿರಂತರವಾಗಿ ಅಧಿಕಾರ ನಡೆಸಿದ್ದಿದ್ದರೆ ರಾಜ್ಯದ ಹಲವಾರು ಸಮಸ್ಯೆಗಳಿಗೆ ಉತ್ತರ ದೊರಕುತ್ತಿತ್ತು. ಕೃಷಿಕರು, ಶ್ರಮಿಕ ವರ್ಗ ಸೇರಿ ಎಲ್ಲರೂ ನೆಮ್ಮದಿಯ ಜೀವನ ನಡೆಸಬೇಕು ಎಂಬಂತಹ ಬದ್ಧತೆ ದೇವೇಗೌಡ ಅವರಲ್ಲಿತ್ತು. 69 ವರ್ಷದ ರಾಜಕೀಯ ಜೀವನದಲ್ಲಿ ಅವರು ಅಧಿಕಾರ ಕಂಡದ್ದು ಕೇವಲ ನಾಲ್ಕೂವರೆ ವರ್ಷ ಮಾತ್ರ. ಅವರು ಎಂದೂ ಅಧಿಕಾರವನ್ನು ಹುಡುಕಿ ಹೋದವರಲ್ಲ, ಅಧಿಕಾರ ಇದ್ದಂಥ ಕಡಿಮೆ ಸಮಯದಲ್ಲಿ ಐದು ವರ್ಷಗಳ ಸರ್ಕಾರಗಳು ಮಾಡದಿರುವಂತಹ ಕೆಲಸಗಳನ್ನು ಮಾಡಿದ್ದಾರೆ. ಜಮ್ಮು- ಕಾಶ್ಮೀರ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಅಲ್ಲಿನ ಜನರ ವಿಶ್ವಾಸ ಗಳಿಸಿದ್ದರು. ಈಶಾನ್ಯ ರಾಜ್ಯಗಳಿಗೆ ಅಂದಿನ ಕಾಲಕ್ಕೆ ಆರೂವರೆ ಸಾವಿರ ಕೋಟಿ ರು. ಹಣವನ್ನು ಅಭಿವೃದ್ಧಿಗೆ ಖರ್ಚು ಮಾಡಿದ್ದರು. ಅಂದಿನ ಆರೂವರೆ ಸಾವಿರ ಕೋಟಿ ರು. ಇಂದು ಎಷ್ಟೋ ಲಕ್ಷ ಕೋಟಿ ರು.ಗಳಿಗೆ ಸಮ. ಜನತೆಗೆ ಬೇಕಾದ ವಿಚಾರಗಳಲ್ಲಿ ತಡ ಮಾಡದೆ ತೀರ್ಮಾನ ತೆಗೆದುಕೊಳ್ಳುತ್ತಿದ್ದ ಅಪರೂಪದ ರಾಜಕಾರಣಿ ಅವರು.
ರೈತರ ಗೊಬ್ಬರದ ಬೆಲೆ ಇಂದು ದಿನೇ ದಿನೇ ಹೆಚ್ಚಳವಾಗುತ್ತಿದೆ. ಅಂದು ದೇವೇಗೌಡ ಅವರು ಪ್ರಧಾನಿ ಆಗಿದ್ದ ಮೊದಲಿಗೆ ರೈತರ ಗೊಬ್ಬರಕ್ಕೆ ಎರಡೂವರೆ ಸಾವಿರ ಕೋಟಿ ರು. ಸಬ್ಸಿಡಿ ಘೋಷಣೆ ಮಾಡಿದರು. ದೆಹಲಿಯಲ್ಲಿ ರಾಜಕಾರಣ ಮಾಡಿದ್ದ 11 ತಿಂಗಳು ಯಾವುದೇ ಭ್ರಷ್ಟಾಚಾರ ಮಾಡದೇ ಆಡಳಿತ ನಡೆಸಿದ್ದಾರೆ. ಕಾಶ್ಮೀರಕ್ಕೆ ಹಲವು ವರ್ಷಗಳ ಕಾಲ ಯಾವುದೇ ಪ್ರಧಾನಿ ಭೇಟಿ ಕೊಟ್ಟಿರಲಿಲ್ಲ, ದೇವೇಗೌಡ ಅವರು ಹೋಗಿ ಬಂದರು. ಅವರ ಆಡಳಿತಾವಧಿಯಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ಆಗಲಿಲ್ಲ, ಯಾವುದೇ ಕೋಮು ಗಲಭೆಗಳು ಆಗಲಿಲ್ಲ. ಕೆಲವರು ದೇವೇಗೌಡ ಅವರನ್ನು ಕೇವಲ ಕರ್ನಾಟಕದ ಪ್ರಧಾನಮಂತ್ರಿ ಎಂದು ಅಪಪ್ರಚಾರ ಮಾಡಿದರು. ಆದರೆ, ದೇವೇಗೌಡ ಅವರು ಯಾವುದೇ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಕೆಲಸ ಮಾಡಿದರು.
ದೇವೇಗೌಡ ಅವರಂತಹ ರಾಜಕಾರಣಿ ಐದೋ, ಹತ್ತೋ ವರ್ಷ ನಿರಂತರವಾಗಿ ಅಧಿಕಾರ ನಡೆಸಿದ್ದಿದ್ದರೆ ರಾಜ್ಯದ ಹಲವಾರು ಸಮಸ್ಯೆಗಳಿಗೆ ಉತ್ತರ ದೊರಕುತ್ತಿತ್ತು. 69 ವರ್ಷದ ರಾಜಕೀಯ ಜೀವನದಲ್ಲಿ ಅವರು ಅಧಿಕಾರ ಕಂಡದ್ದು ಕೇವಲ ನಾಲ್ಕೂವರೆ ವರ್ಷ ಮಾತ್ರ.
- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ