ಉಕ್ರೇನ್ ಯುದ್ಧದ ಬಗ್ಗೆ ಕಳವಳ ಸೇರಿದಂತೆ 73 ಘೋಷಣೆಗಳನ್ನು ಒಳಗೊಂಡ ದೆಹಲಿ ಡಿಕ್ಲರೇಷನ್ (ದೆಹಲಿ ಘೋಷಣೆ) ಅನ್ನು ಜಿ20 ಶೃಂಗಸಭೆಯು ಪೂರ್ಣ ಸಹಮತದೊಂದಿಗೆ ಅಂಗೀಕರಿಸಲು ಕಾರಣವಾದ ಅಧ್ಯಕ್ಷ ದೇಶ ಭಾರತ, ಶನಿವಾರ ಹೊಸ ಚರಿತ್ರೆ ಸೃಷ್ಟಿಸಿತ್ತು. ಆದರೆ ಇಂಥದ್ದೊಂದು ಸಾಧನೆಯ ಹಿಂದೆ ಭಾರತದ ರಾಜತಾಂತ್ರಿಕ ಅಧಿಕಾರಿಗಳ 200 ತಾಸಿನ ಸತತ ಶ್ರಮ ಇದೆ ಎಂಬ ವಿಷಯವನ್ನು ಜಿ20ಯಲ್ಲಿ ಭಾರತದ ಶೆರ್ಪಾ ಆಗಿದ್ದ ಹಿರಿಯ ಐಎಎಸ್ ಅಧಿಕಾರಿ ಅಮಿತಾಭ್ ಕಾಂತ್ ಬಹಿರಂಗಪಡಿಸಿದ್ದಾರೆ.
ನವದೆಹಲಿ: ಉಕ್ರೇನ್ ಯುದ್ಧದ ಬಗ್ಗೆ ಕಳವಳ ಸೇರಿದಂತೆ 73 ಘೋಷಣೆಗಳನ್ನು ಒಳಗೊಂಡ ದೆಹಲಿ ಡಿಕ್ಲರೇಷನ್ (ದೆಹಲಿ ಘೋಷಣೆ) ಅನ್ನು ಜಿ20 ಶೃಂಗಸಭೆಯು ಪೂರ್ಣ ಸಹಮತದೊಂದಿಗೆ ಅಂಗೀಕರಿಸಲು ಕಾರಣವಾದ ಅಧ್ಯಕ್ಷ ದೇಶ ಭಾರತ, ಶನಿವಾರ ಹೊಸ ಚರಿತ್ರೆ ಸೃಷ್ಟಿಸಿತ್ತು. ಆದರೆ ಇಂಥದ್ದೊಂದು ಸಾಧನೆಯ ಹಿಂದೆ ಭಾರತದ ರಾಜತಾಂತ್ರಿಕ ಅಧಿಕಾರಿಗಳ 200 ತಾಸಿನ ಸತತ ಶ್ರಮ ಇದೆ ಎಂಬ ವಿಷಯವನ್ನು ಜಿ20ಯಲ್ಲಿ ಭಾರತದ ಶೆರ್ಪಾ ಆಗಿದ್ದ ಹಿರಿಯ ಐಎಎಸ್ ಅಧಿಕಾರಿ ಅಮಿತಾಭ್ ಕಾಂತ್ ಬಹಿರಂಗಪಡಿಸಿದ್ದಾರೆ.
ಈ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ಕಾಂತ್ ‘ಇಡೀ ಜಿ20 ಶೃಂಗದಲ್ಲಿ (G20 summit) ಅತ್ಯಂತ ಸಂಕೀರ್ಣ ವಿಷಯ ಇದ್ದಿದ್ದು, ಭೌಗೋಳಿಕ ರಾಜಕೀಯ (ರಷ್ಯಾ- ಉಕ್ರೇನ್) (Russia-Ukraine)ವಿಷಯ ಕುರಿತಂತೆ ಎಲ್ಲಾ ದೇಶಗಳ ಸಹಮತ ಪಡೆಯುವುದಾಗಿತ್ತು. ಇದು ಸಾಧ್ಯವಾಗಿದ್ದು, 200 ಗಂಟೆಗಳ ಎಡೆಬಿಡದ ಚರ್ಚೆ, 300 ದ್ವಿಪಕ್ಷೀಯ ಮಾತುಕತೆ ಮತ್ತು 15 ಕರಡು ಪ್ರಸ್ತಾಪಗಳಿಂದ. ಈ ವಿಷಯದಲ್ಲಿ ನನಗೆ ಅತ್ಯಂತ ನೆರವು ನೀಡಿದ್ದು ಇಬ್ಬರು ಅತ್ಯಂತ ಮೇಧಾವಿ ವಿದೇಶಾಂಗ ಅಧಿಕಾರಿಗಳಾದ ಈನಂ ಗಂಭೀರ್ (Eenam Gambhir) ಮತ್ತು ಕೆ.ನಾಗರಾಜ್ ನಾಯ್ಡು’ (K. Nagaraj Naidu)ಎಂದು ಹೇಳಿದ್ದಾರೆ.
ಯಾವ ವಿಷಯದಲ್ಲಿ ಸಂದಿಗ್ಧತೆ ಇತ್ತು?:
ರಷ್ಯಾ- ಉಕ್ರೇನ್ ಕುರಿತು ಮೊದಲಿನಿಂದಲೂ ತಟಸ್ಥ ನಿಲುವು ತಳೆದಿದ್ದ ಭಾರತ, ‘ಇದು ಯುದ್ಧದ ಸಮಯವಲ್ಲ. ಶಾಂತಿಯುತ ಮಾರ್ಗಗಳ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ವಾದಿಸುತ್ತಲೇ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೊದಲ ಬಾರಿಗೆ ಬಳಸಿದ್ದ ಈ ಪದವು ಕಳೆದ ವರ್ಷ ಇಂಡೋನೇಷ್ಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಅಂಗೀಕರಿಸಲಾದ ‘ಬಾಲಿ ಘೋಷಣೆ’ಯಲ್ಲೂ (Bali Declaration)ಪ್ರಮುಖವಾಗಿ ಸ್ಥಾನ ಪಡೆದಿತ್ತು.
ಈ ವರ್ಷದ ಶೃಂಗಸಭೆಯಲ್ಲೂ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬರುವುದು ಖಚಿತವಿತ್ತು. ಈ ವಿಷಯದಲ್ಲಿ ರಷ್ಯಾವನ್ನು ಖಂಡಿಸಬೇಕೆಂಬ ಬಲವಾದ ಒತ್ತಡವಿದ್ದರೂ, ಅದನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಬದಿಗಿರಿಸಿದ ಭಾರತ, ದೆಹಲಿ ಘೋಷಣೆಯಲ್ಲಿ ‘ಇದು ಯುದ್ಧದ ಕಾಲವಲ್ಲ. ಭೌಗೋಳಿಕ ಸಮಗ್ರತೆ ಹಾಗೂ ಸಾರ್ವಭೌಮತೆ ಒಳಗೊಂಡಂತೆ ಅಂತಾರಾಷ್ಟ್ರೀಯ ಕಾನೂನಿನ ತತ್ವಗಳನ್ನು ಎಲ್ಲ ದೇಶಗಳು ಎತ್ತಿ ಹಿಡಿಯಬೇಕು. ಬಿಕ್ಕಟ್ಟಿಗೆ ಶಾಂತಿಯುತ ನಿರ್ಣಯಗಳು, ರಾಜತಾಂತ್ರಿಕತೆ ಹಾಗೂ ಸಂಧಾನಗಳು ಅತ್ಯಂತ ಮಹತ್ವದ್ದಾಗಿವೆ’ ಎಂದು ಪ್ರಸ್ತಾಪಿಸಿತ್ತು. ಈ ಮೂಲಕ ಪರೋಕ್ಷವಾಗಿ ರಷ್ಯಾ ದಾಳಿಯನ್ನು ಖಂಡಿಸಲಾಗಿತ್ತು.
ಭಾರತ ಮಾಡಿದ್ದೇನು?:
ಇಂಥದ್ದೊಂದು ಕ್ಲಿಷ್ಟ ವಿಷಯದಲ್ಲಿ ಎಲ್ಲಾ ದೇಶಗಳ ಸಹಮತ ಪಡೆಯುವುದು ಸುಲಭವಾಗಿರಲಿಲ್ಲ. ಹೀಗಾಗಿಯೇ ಈ ವಿಷಯದಲ್ಲಿ ಕಳೆದ 2 ವಾರಗಳಿಂದ ಸತತವಾಗಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಸತತ ಮಾತುಕತೆ, ಸಮಾಲೋಚನೆ, ಚೌಕಾಸಿ ನಡೆಸಿತ್ತು. ಈ ಸಂಬಂಧ 300ಕ್ಕೂ ಹೆಚ್ಚು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿ ತನ್ನ ಪ್ರಭಾವ ಬಳಸಿ ಘೋಷಣೆಗೆ ಎಲ್ಲರ ಸಹಮತ ಪಡೆಯಿತು. ಅದರಲ್ಲೂ ಘೋಷಣೆಯಲ್ಲಿನ ಪ್ರತಿ ಪದಗಳ ಬಗ್ಗೆ ಅತ್ಯಂತ ಕಠಿಣ ನಿಲುವುಗಳನ್ನು ಹೊಂದಿದ್ದ ಚೀನಾ ಮತ್ತು ರಷ್ಯಾ ದೇಶಗಳ ಜೊತೆಗೆ ಜಿ20 ಶೃಂಗಸಭೆ ಆರಂಭದ ಹಿಂದಿನ ದಿನ ತಡರಾತ್ರಿಯವರೆಗೂ ಮಾತುಕತೆ, ಚೌಕಾಸಿ ನಡೆಸಿ ಅವುಗಳನ್ನು ಒಪ್ಪಿಸಲಾಗಿತ್ತು.
Thanks to Sherpas who helped us clinch the geopolitical paras and arrive at consensus. Great partnership with Mauricio of Brazil, Djani of Indonesia and Zane of S. Africa. From my team & played a key role. They are the real heroes . pic.twitter.com/TyWEwE7gQ8
— Amitabh Kant (@amitabhk87)
ನಾನೊಬ್ಬ ಹೆಮ್ಮೆಯ ಹಿಂದು: ರಿಷಿ
ನವದೆಹಲಿ: ನಾನೊಬ್ಬ ಹೆಮ್ಮೆಯ ಹಿಂದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಆಗಮಿಸಿದ ಅವರು ಮಾಧ್ಯಮವೊಂದರ ಜೊತೆ ಮಾತನಾಡುವಾಗ ಈ ವಿಷಯ ತಿಳಿಸಿದ್ದಾರೆ. ನಾನೊಬ್ಬ ಹೆಮ್ಮೆಯ ಹಿಂದೂ ಆಗಿದ್ದೇನೆ. ನಾನು ಹಿಂದುವಾಗಿಯೇ ಬೆಳೆದಿದ್ದೇನೆ. ಭಾರತದಲ್ಲಿರುವ 2 ದಿನಗಳ ಅವಧಿಯಲ್ಲಿ ನಾನು ದೇವಸ್ಥಾನಕ್ಕೆ ಭೇಟಿ ನೀಡಲಿದ್ದೇನೆ ಎಂದರು. ಇದೇ ವೇಳೆ ಲಂಡನ್‌ನಲ್ಲಿ ನಡೆಯುತ್ತಿರುವ ಖಲಿಸ್ತಾನಿ ಕೃತ್ಯಗಳನ್ನು ಖಂಡಿಸಿದ ಅವರು, ಭಾರತದ ನೆರವಿನೊಂದಿಗೆ ಖಲಿಸ್ತಾನಿ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.