
ನವದೆಹಲಿ(ಮೇ.12): ದೇಶದಲ್ಲಿ ನಿತ್ಯದ ಸೋಂಕಿನ ಪ್ರಮಾಣ 4 ಲಕ್ಷ ದಾಟಿ, ಸಾವಿನ ಪ್ರಮಾಣ 4000 ಮೀರಿ ಭಾರೀ ಆತಂಕ ಸೃಷ್ಟಿಯಾಗಿರುವಾಗಲೇ ಕೊರೋನಾ 2ನೇ ಅಲೆ ಇಳಿಕೆಯಾಗುವ ಆರಂಭಿಕ ಸುಳಿವು ಸಿಗಲಾರಂಭಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದಲ್ಲಿ ಸೋಂಕಿನ ಪ್ರಮಾಣ ಸತತ 3 ದಿನದಿಂದ ಇಳಿಕೆಯಾದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಈ ಶುಭ ಸುದ್ದಿ ನೀಡಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 3,39,942 ಪ್ರಕರಣ ದೃಢಪಟ್ಟಿದ್ದು, 3876 ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ ದಾಖಲಾದ ಸೋಂಕಿನ ಪ್ರಮಾಣವು 14 ದಿನಗಳಲ್ಲೇ ಕನಿಷ್ಠ ಪ್ರಮಾಣದ್ದಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್, ‘ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ ಸೇರಿದಂತೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಕೆಯಾಗುತ್ತಿದೆ ಇಲ್ಲವೇ ಸ್ಥಿರವಾಗಿದೆ. ಇನ್ನು ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ 16 ರಾಜ್ಯಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಇನ್ನೂ ಏರುಗತಿಯಲ್ಲಿದೆ’ ಎಂದು ತಿಳಿಸಿದ್ದಾರೆ.
ಜೊತೆಗೆ, ‘ಜಿಲ್ಲೆಗಳಲ್ಲಿ ವಾರದಿಂದ ವಾರಕ್ಕೆ ಪರೀಕ್ಷೆ ಪ್ರಮಾಣ ಏರಿಕೆ ಮತ್ತು ಅವುಗಳಲ್ಲಿ ಪಾಸಿಟಿವಿಟಿ ಪ್ರಮಾಣವೂ ಹೆಚ್ಚಳವಾಗಿದೆ. ಏ.15-21ರ ಅವಧಿಯಲ್ಲಿ ಇಂಥ ಜಿಲ್ಲೆಗಳ ಸಂಖ್ಯೆ 73 ಇದ್ದರೆ, ಏ.29-ಮೇ 5ರ ಅವಧಿಯಲ್ಲಿ ಅದು 182ಕ್ಕೆ ಏರಿದೆ. ಇವೆಲ್ಲವೂ ದೇಶದಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಕೆಯಾಗುತ್ತಿರುವ ಆರಂಭಿಕ ಸುಳಿವು ನೀಡಿವೆ’ ಎಂದು ತಿಳಿಸಿದ್ದಾರೆ.
ದಾಖಲೆ ಏರಿಕೆ:
ಇದೇ ವೇಳೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳಲ್ಲಿ 30,016 ಕೇಸ್‌ಗಳು ತಗ್ಗಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಳೆದ 61 ದಿನಗಳಲೇ ಮೊದಲು.
"
ಸೋಂಕು ಏರಿಕೆ: ಇಡೀ ದೇಶದಲ್ಲೇ ಬೆಂಗಳೂರು ನಂ.1
ಕಳೆದ 2 ವಾರದಿಂದ ಸೋಂಕು ಏರಿಕೆಯಾಗುತ್ತಿರುವ ದೇಶದ ಟಾಪ್ 15 ಜಿಲ್ಲೆಗಳಲ್ಲಿ ಬೆಂಗಳೂರು ನಂ.1 ಸ್ಥಾನದಲ್ಲಿದೆ. ಮೈಸೂರು 9ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಸೋಂಕು ಇಳಿಕೆಯ ರಾಜ್ಯಗಳು
ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ರಾಜಸ್ಥಾನ, ಛತ್ತೀಸ್‌ಗಢ, ಬಿಹಾರ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ, ಉತ್ತರಾಖಂಡ, ಜಾರ್ಖಂಡ್, ಚಂಡೀಗಢ, ಲಡಾಖ್, ದಮನ್ ಮತ್ತು ದಿಯು, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್, ಇತರೆ
ಏರಿಕೆಯ ರಾಜ್ಯಗಳು
ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಒಡಿಶಾ, ಪಂಜಾಬ್, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಗೋವಾ, ಹಿಮಾಚಲಪ್ರದೇಶ, ಪುದುಚೇರಿ, ಮಣಿಪುರ, ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್, ಅರುಣಾಚಲಪ್ರದೇಶ, ಇತರೆ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ