ಕೊರೋನಾ ಎಫೆಕ್ಟ್: 179 ವೃತ್ತಿಪರ ಕಾಲೇಜು ಬಂದ್‌!

By Suvarna News  |  First Published Jul 29, 2020, 5:41 PM IST

ಕೊರೋನಾ ಎಫೆಕ್ಟ್: 179 ವೃತ್ತಿಪರ ಕಾಲೇಜು ಬಂದ್‌| ಇನ್ನೂ 134 ಕಾಲೇಜುಗಳು ತರಗತಿ ಆರಂಭಿಸಲು ಅನುಮತಿ ಕೇಳಿಲ್ಲ


ನವದೆಹಲಿ(ಜು.29): ಕೊರೋನಾ ವೈರಸ್‌ನಿಂದಾಗಿ ದೇಶದಲ್ಲಿ ಉದ್ಯೋಗಾವಕಾಶಗಳು ಕುಸಿದಿರುವುದರಿಂದ ಮತ್ತು ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದಿರುವುದರಿಂದ ಈ ವರ್ಷ ದೇಶಾದ್ಯಂತ ಎಂಜಿನಿಯರಿಂಗ್‌ ಕಾಲೇಜುಗಳು, ಬಿಸಿನೆಸ್‌ ಸ್ಕೂಲ್‌ಗಳೂ ಸೇರಿದಂತೆ 179 ವೃತ್ತಿಪರ ಕಾಲೇಜುಗಳು ಬಾಗಿಲು ಮುಚ್ಚಿವೆ. ಅದರೊಂದಿಗೆ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೂ ಕೊರೋನಾ ದುಷ್ಪರಿಣಾಮ ಗಾಢವಾಗಿ ಉಂಟಾಗಿರುವುದು ಖಚಿತವಾಗಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಈ ಕುರಿತು ಮಾಹಿತಿ ಬಿಡುಗಡೆ ಮಾಡಿದ್ದು, 2020-21ನೇ ಸಾಲಿನಲ್ಲಿ 179 ವೃತ್ತಿಪರ ಕಾಲೇಜುಗಳು ಬಂದ್‌ ಆಗಿವೆ. ಇನ್ನೂ 134 ಕಾಲೇಜುಗಳು ಈ ವರ್ಷದ ತರಗತಿ ಆರಂಭಿಸಲು ಅನುಮತಿಯನ್ನೇ ಕೇಳಿಲ್ಲ. ಈ ವರ್ಷ ಬಾಗಿಲು ಮುಚ್ಚಿದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಒಂಭತ್ತು ವರ್ಷದಲ್ಲೇ ಅಧಿಕವಾಗಿದೆ ಎಂದು ತಿಳಿಸಿದೆ.

Latest Videos

ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಎಐಸಿಟಿಇ ಸರಳಗೊಳಿಸಿದೆ. ನೋಂದಣಿ ಪ್ರಕ್ರಿಯೆ ಜೂನ್‌ ಅಂತ್ಯಕ್ಕೆ ಮುಗಿದಿದೆ. ಈ ವೇಳೆ, 762 ಕಾಲೇಜುಗಳು ಹಲವು ವಿಭಾಗ ಅಥವಾ ಕೋರ್ಸ್‌ಗಳನ್ನು ಸ್ಥಗಿತಗೊಳಿಸಿ, 70,000 ಸೀಟುಗಳನ್ನು ಕಡಿತಗೊಳಿಸಿವೆ. ಆದರೆ, ಸಮಾಧಾನಕರ ಸಂಗತಿಯೆಂದರೆ ಈ ವರ್ಷ 164 ಹೊಸ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ತಲೆಯೆತ್ತಿವೆ. 1300 ಶಿಕ್ಷಣ ಸಂಸ್ಥೆಗಳು 1,40,000 ಹೆಚ್ಚುವರಿ ಸೀಟುಗಳಿಗೆ ಅನುಮತಿ ಪಡೆದಿವೆ. ಕಳೆದ ವರ್ಷ ದೇಶದಲ್ಲಿ 92 ಹಾಗೂ 2018ರಲ್ಲಿ 89 ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಿದ್ದವು. ಸದ್ಯ ದೇಶಾದ್ಯಂತ ಎಐಸಿಟಿಇ ಅಡಿ ಎಂಜಿನಿಯರಿಂಗ್‌ ಕಾಲೇಜುಗಳು, ಬಿಸಿನೆಸ್‌ ಸ್ಕೂಲ್‌ಗಳೂ ಸೇರಿದಂತೆ 9691 ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ.

click me!