
ಪಣಜಿ(ಜು.26): ಗೋವಾದ ಮಹದಾಯಿ ವನ್ಯಜೀವಿ ಅಭಯಾರಣ್ಯ ಮತ್ತು ಸುತ್ತಲಿನ ಪ್ರದೇಶವನ್ನು ‘ಹುಲಿ ಸಂರಕ್ಷಿತ ಪ್ರದೇಶ’ ಎಂದು ಘೋಷಿಸುವಂತೆ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಬಾಂಬೆ ಹೈಕೋರ್ಟ್ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗೋವಾದ ಬಿಜೆಪಿ ಶಾಸಕಿ ದೇವಿಯ ರಾಣೆ, ‘ಇದರಿಂದ ಆ ಭಾಗದಲ್ಲಿ ವಾಸಿಸುವ ಸುಮಾರು 15,000 ಜನರು ಸಂಕಷ್ಟಕ್ಕೀಡಾಗುತ್ತಾರೆ’ ಎಂದಿದ್ದಾರೆ. ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಸೋಮವಾರ ಈ ಆದೇಶ ನೀಡಿತ್ತು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ ‘ಹುಲಿಗಳನ್ನು ಮತ್ತು ಮಹದಾಯಿ ಅಭಯಾರಣ್ಯವನ್ನು ಸಂರಕ್ಷಿಸುವುದು ಎಷ್ಟುಮುಖ್ಯವೋ ಅಲ್ಲಿ ವಾಸಿಸುವ ಜನರನ್ನು ರಕ್ಷಿಸುವುದು ಕೂಡ ಅಷ್ಟೇ ಮುಖ್ಯ. ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ನೀಡದೇ ಉಳಿಸಿಕೊಳ್ಳಲು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಅಗತ್ಯವಿದೆ ಎಂದು ಹೇಳುವುದು ಸರಿಯಲ್ಲ. ನದಿಯನ್ನು ರಕ್ಷಿಸಿಕೊಳ್ಳಲು ರಾಜ್ಯ ಸರ್ಕಾರ ಹಲವಾರು ಕಾನೂನಿನ ಆಲೋಚನೆ ಮಾಡುತ್ತಿದೆ’ ಎಂದಿದ್ದಾರೆ.
ಮಹದಾಯಿ ಯೋಜನೆಗೆ ಮತ್ತೊಂದು ವಿಘ್ನ?: ಕೋರ್ಟ್ ಹೇಳಿದ್ದೇನು...
ಇನ್ನು ಬಾಂಬೆ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಲಿದೆ ಎಂದು ರಾಜ್ಯ ಅರಣ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ. 208 ಚದರ ಕಿ.ಮೀ ವ್ಯಾಪ್ತಿಯಲ್ಲಿ ಮಹದಾಯಿ ಅಭಯಾರಣ್ಯ ಹರಡಿಕೊಂಡಿದೆ. ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಗೋವಾ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಭಾರೀ ತಿಕ್ಕಾಟವಿದೆ.
ಮಹದಾಯಿ, ರಾಜ್ಯದ ರೈತರಿಗೆ ಅನ್ಯಾಯವಾಗಲು ಬಿಡಲ್ಲ- ಸಿದ್ದರಾಮಯ್ಯ
ಹಾವೇರಿ: ಮಹದಾಯಿ ಯೋಜನೆ ವಿಷಯದಲ್ಲಿ ಕರ್ನಾಟಕದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
‘ಮಹದಾಯಿ ವನ್ಯಜೀವಿ ಅಭಯಾರಣ್ಯ’ವನ್ನು ‘ಹುಲಿ ಸಂರಕ್ಷಿತ ಭಯಾರಣ್ಯ’ಪ್ರದೇಶವೆಂದು ಘೋಷಣೆ ಮಾಡುವಂತೆ ಮುಂಬೈ ಹೈಕೋರ್ಚ್‌ನ ಗೋವಾ ಪೀಠ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿರು ಬಗ್ಗೆ ಪ್ರತಿಕ್ರೀಯಿಸಿದ ಅವರು, ಮಹದಾಯಿ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಆಗಿದೆ. ಪರಿಸರ ಇಲಾಖೆಯ ಕ್ಲಿಯರೆನ್ಸ್ ಆಗಿಲ್ಲ. ಇದೇ ವೇಳೆ ಗೋವಾ ಸರ್ಕಾರ ಯೋಜನೆಗೆ ತಕರಾರು ಮಾಡುತ್ತಿದೆ. ಡಬಲ್ ಎಂಜಿನ್ ಸರ್ಕಾರ ಇದ್ದಾಗ ಅವರು ಯಾಕೆ ಮಾಡಲಿಲ್ಲ? ಗೋವಾದಲ್ಲೂ ಅವರದೇ ಸರ್ಕಾರವಿತ್ತು. ಈಗಲೂ ನಾವು ಯೋಜನೆ ಜಾರಿಗೆ ಪ್ರಯತ್ನ ಮಾಡುತ್ತೇವೆ. ಕರ್ನಾಟಕದ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ