ಮುಂಬೈನ ಕೋವಿಡ್‌ ಆಸ್ಪತ್ರೆಯಲ್ಲಿ ಬೆಂಕಿ ದುರಂತ: 10 ಬಲಿ!

By Kannadaprabha NewsFirst Published Mar 27, 2021, 7:35 AM IST
Highlights

ಮುಂಬೈನ ಕೋವಿಡ್‌ ಆಸ್ಪತ್ರೆಯಲ್ಲಿ ಬೆಂಕಿ ದುರಂತ: 10 ಬಲಿ| ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ: ಸಿಎಂ ಠಾಕ್ರೆ

ಮುಂಬೈ(ಮಾ.27): ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಢದಲ್ಲಿ 10 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಘಟನೆ ನಡೆದಾಗ ಆಸ್ಪತ್ರೆಯಲ್ಲಿ 76 ರೋಗಿಗಳಿದ್ದು, ಈ ಪೈಕಿ ಬಹುತೇಕ ಜನರು ಕೊರೋನಾ ಸೋಂಕಿತರು ಎನ್ನಲಾಗಿದೆ.

ದುರ್ಘಟನೆ ಕುರಿತು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ‘ಈ ದುರ್ಘಟನೆಯಲ್ಲಿ ಸಾವಿಗೀಡಾದ ಕುಟುಂಬಸ್ಥರ ಕ್ಷಮಾಪಣೆ ಕೋರುತ್ತೇನೆ. ಜೊತೆಗೆ ಸಾವಿಗೀಡಾದವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಆದರೆ ಈ ಘಟನೆಗೆ ಕಾರಣೀಭೂತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದ್ದಾರೆ.

Latest Videos

ಏನಾಯ್ತು:

ಮುಂಬೈನ ಬಂದಪ್‌ ಪ್ರದೇಶದಲ್ಲಿ 4 ಅಂತಸ್ತಿನ ‘ಡ್ರೀಮ್ಸ್‌’ ಎಂಬ ಮಾಲ್‌ ಇದೆ. ಇದರ 4ನೇ ಮಹಡಿಯಲ್ಲಿ ಸನ್‌ರೈಸ್‌ ಎಂಬ ಆಸ್ಪತ್ರೆ ಇದೆ. ಅಲ್ಲಿ ಶುಕ್ರವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಸುದ್ದಿ ತಿಳಿಯುತ್ತಲೇ 22 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿ ಅವಘಡಕ್ಕೆ ಏನು ಕಾರಣ ಎಂದು ತಿಳಿದುಬಂದಿಲ್ಲ. ಅಗ್ನಿ ಸುರಕ್ಷತಾ ಕ್ರಮಗಳನ್ನು ಹೊಂದಿಲ್ಲ ಎಂದು ಕಳೆದ ವರ್ಷ ಇದೇ ಮಾಲ್‌ಗೆ ನೋಟಿಸ್‌ ನೀಡಲಾಗಿತ್ತು. ಅದರ ಹೊರತಾಗಿಯೂ ಈ ಘಟನೆ ನಡೆದಿದೆ.

ಘಟನೆ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಆಸ್ಪತ್ರೆ, ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ಹೊಗೆ ಎಲ್ಲಾ ಮಹಡಿಗಳಿಗೂ ಹಬ್ಬಿತ್ತು. ತಕ್ಷಣವೇ ಎಲ್ಲಾ ರೋಗಿಗಳನ್ನು ಸ್ಥಳಾಂತರ ಮಾಡಲಾಯಿತು ಎಂದು ಹೇಳಿದೆ.

ಈ ಹಿಂದೆ 2020ರ ಆ.6ರಂದು ಅಹಮದಾಬಾದ್‌ನ ಕೋವಿಡ್‌ ಆಸ್ಪತ್ರೆ ದುರ್ಘಟನೆಯಲ್ಲಿ 8 ಜನ, ಆ.9ರಂದು ತೆಲಂಗಾಣದ ವಿಜಯವಾಡದಲ್ಲಿ ನಡೆದ ಕೋವಿಡ್‌ ಆಸ್ಪತ್ರೆ ದುರಂತದಲ್ಲಿ 10, ಅಕ್ಟೋಬರನಲ್ಲಿ ಮುಂಬೈನ ಅಪೆಕ್ಸ್‌ ಆಸ್ಪತ್ರೆ ದುರ್ಘಟನೆಯಲ್ಲಿ ಇಬ್ಬರು, ನ.27ರಂದು ಗುಜರಾತ್‌ನ ರಾಜ್‌ಕೋಟ್‌ ಆಸ್ಪತ್ರೆ ದುರಂತದಲ್ಲಿ 5 ಸೋಂಕಿತರು ಸಾವನ್ನಪ್ಪಿದ್ದರು.

click me!