ಬಾದಾಮಿ: ಪಾದಯಾತ್ರೆಗೆ ಸಿದ್ದರಾಮಯ್ಯ ಚಿಂತನೆ, ಕಾಂಗ್ರೆಸ್​​ನಲ್ಲಿ ಹೆಚ್ಚಿದ ಹುರುಪು

By Girish Goudar  |  First Published Jul 24, 2022, 11:00 PM IST

ದೇಶಾದ್ಯಂತ ಕಾಂಗ್ರೆಸ್​ನಿಂದ ಭಾರತ ಜೋಡೋ ಪಾದಯಾತ್ರೆ ಹಿನ್ನೆಲೆ ಸಿದ್ದರಾಮಯ್ಯ ಪಾದಯಾತ್ರೆ ಪ್ಲ್ಯಾನ್​


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಜು.24):  ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಪಾದಯಾತ್ರೆ ಮೂಲಕ ಆಗಾಗ ಹವಾ ಮಾಡೋದನ್ನ ನೋಡಿದಿವಿ, ಆದರೆ ಈಗ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರದಲ್ಲಿಯೇ ಮತ್ತೊಂದು ಪಾದಯಾತ್ರೆಗೆ ಸಜ್ಜಾಗಲು ಚಿಂತನೆ ನಡೆಸಿದ್ದಾರೆ. ಇದು ಈಗ ಸ್ವಕ್ಷೇತ್ರದ ಜಿಲ್ಲೆಯ ಕೈ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತಂದಿದ್ದು, ಈ ಮಧ್ಯೆ ಎರಡು ದಿನದ ಸಿದ್ದರಾಮಯ್ಯನವರ ಪಾದಯಾತ್ರೆಗೆ ಪ್ಲ್ಯಾನ್​ ರೆಡಿಯಾಗಿದ್ದು, ಸಿದ್ದು ಗ್ರೀನ್ ಸಿಗ್ನಲ್​ವೊಂದೇ ಬಾಕಿ ಉಳಿದಿದೆ. 

Tap to resize

Latest Videos

undefined

ಸಿದ್ದರಾಮಯ್ಯ ಅಂದ್ರೆ ಹಾಗೇನೆ, ಅವರು ಹೋದಲ್ಲಿ ಬಂದಲ್ಲಿ ಹತ್ತು ಹಲವು ಕಾರ್ಯಕ್ರಮ ಆಯೋಜನೆ ಆಗೋದು, ಕಾರ್ಯಕರ್ತರು ಅವರನ್ನ ನೋಡೋಕೆ ಮುಗಿ ಬೀಳೋದು ಒಂದೆಡೆಯಾದ್ರೆ, ತಮ್ಮ ಮಾತಿನ ಖದರ್ ಮೂಲಕ ಹವಾ ಮಾಡೋದು ಇವರ ರೂಢಿ. ಇವುಗಳ ಮಧ್ಯೆ ಇದೀಗ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ಜಿಲ್ಲೆಯಲ್ಲಿ ಇದೀಗ ಎರಡು ದಿನಗಳ ಪಾದಯಾತ್ರೆಗೆ ಸಜ್ಜಾಗುವಂತೆ ಸಂದೇಶವನ್ನ ನೀಡಿದ್ದಾರೆ. ಹೌದು. ದೇಶದೆಲ್ಲೆಡೆ ಈ ಬಾರಿ ಸ್ವಾತಂತ್ರ್ಯೋತ್ಸವ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಲ್ಲೆಡೆ ಭಾರತ ಜೋಡೋ ಹೆಸರಿನಲ್ಲಿ ಪಾದಯಾತ್ರೆ ನಡೆಯುತ್ತಿರುವುದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರದ ಜಿಲ್ಲೆಯಲ್ಲಿ ಎರಡು ದಿನಗಳ ಪಾದಯಾತ್ರೆಗೆ ಮುಂದಾಗಿದ್ದಾರೆ. ಈ ಕುರಿತು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ ಪಕ್ಷದ ಜಿಲ್ಲಾಧ್ಯಕ್ಷ ಎಸ್​.ಜಿ.ನಂಜಯ್ಯನಮಠ ಅವರಿಗೆ ಮಾಹಿತಿ ನೀಡಿರೋ ಸಿದ್ದರಾಮಯ್ಯನವರು ಎರಡು ದಿನಗಳ ಪಾದಯಾತ್ರೆ ಸಿದ್ದತೆ ಮಾಡಿಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ. 

India@75: ಬ್ರಿಟನ್‌ನಿಂದ 75 ವಿದ್ಯಾರ್ಥಿ ವೇತನ!

ಎರಡು ದಿನ ಪಾದಯಾತ್ರೆಗೆ ಸಿದ್ಧತೆ

ಇನ್ನು ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಿರೋ ಬೆನ್ನಲ್ಲೆ ಕಾಂಗ್ರೆಸ್​ ಪಕ್ಷದ ಜಿಲ್ಲಾಧ್ಯಕ್ಷ ಎಸ್​.ಜಿ. ನಂಜಯ್ಯನಮಠ ಅವರು ಪ್ರಾಥಮಿಕವಾಗಿ ಆ. 9 ಮತ್ತು 10 ರಂದು ಅಂದರೆ ಎರಡು ದಿನಗಳ ಕಾಲ 35 ಕಿಮೀ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ಅಂದರೆ ಬಾದಾಮಿಯಿಂದ ಸಿದ್ದರಾಮಯ್ಯನವರ ಪಾದಯಾತ್ರೆ ಆರಂಭಿಸಿ ಬಾಗಲಕೋಟೆಯಲ್ಲಿ ಬಹಿರಂಗ ಸಮಾವೇಶವನ್ನ ಆಯೋಜಿಸುವ ಮೂಲಕ ಪ್ಲ್ಯಾನ್​ವೊಂದನ್ನು ರೆಡಿ ಮಾಡಿಕೊಂಡಿದ್ದು, ಇದಕ್ಕೆ ಸಿದ್ದರಾಮಯ್ಯನವರ ಗ್ರೀನ್​ ಸಿಗ್ನಲ್​ವೊಂದೇ ಬಾಕಿ ಇದೆ. ಹೀಗಾಗಿ ಇನ್ನೆರಡು ದಿನದಲ್ಲಿ ಬೆಂಗಳೂರಿಗೆ ತೆರಳಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ನಡೆಸಿ ಪಾದಯಾತ್ರೆ ಕಾರ್ಯಕ್ರಮ ನಡೆಸುತ್ತೇವೆ, ಇದೊಂದು ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ಯ ನಡೆಯುವ ಪಾದಯಾತ್ರೆಯಾಗಿರುವುದರಿಂದ ಎಲ್ಲರವೂ ಹೆಮ್ಮೆಪಡುವಂತಾಗಿದೆ ಎಂದು ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ , ಮಾಜಿ ಶಾಸಕ ಎಸ್​.ಜಿ.ನಂಜಯ್ಯನಮಠ ಹೇಳಿದ್ದಾರೆ. 

ಬಾದಾಮಿಯಿಂದ ಬಾಗಲಕೋಟೆವರೆಗೆ 35 ಕಿಮಿ ಪಾದಯಾತ್ರೆ

ಇನ್ನು ಈಗ ಸಿದ್ದಗೊಂಡಿರೋ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎರಡು ದಿನಗಳ ಪಾದಯಾತ್ರೆ ಪ್ರಕಾರ ಆ. 9ರಂದು ಸ್ವಕ್ಷೇತ್ರ ಬಾದಾಮಿಯಿಂದ ಪಾದಯಾತ್ರೆಯನ್ನ ಆರಂಭಿಸೋದು ಅಲ್ಲಿಂದ ಬಾದಾಮಿ ರೈಲ್ವೆ ಸ್ಟೇಷನ್​, ಮುಚ್ಚಳಗುಡ್ಡ, ಹಲಕುರ್ಕಿ, ಕೊಂಕಣಕೊಪ್ಪ ಮಾರ್ಗವಾಗಿ ಬಂದು ಕಟಗೇರಿಯಲ್ಲಿ ವಾಸ್ತವ್ಯ ಹೂಡುವುದು ಬಳಿಕ ಮರುದಿನ ಆ. 10ರಂದು ಕಟಗೇರಿಯಿಂದ ಸೂಳಿಕೇರಿ, ಶಿಕ್ಕೇರಿ, ನವನಗರ ಮಾರ್ಗವಾಗಿ ಹಳೆ ಬಾಗಲಕೋಟೆ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ, ಬಳಿಕ ಬಸವೇಶ್ವರ ವೃತ್ತದ ಬಳಿಯ ಹೊಳೆ ಆಂಜನೇಯ ದೇವಸ್ಥಾನದ ಹತ್ತಿರ ಆಯೋಜಿಸುವ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯನವರು ಭಾಷಣ ಮಾಡುವುದು ಎಂಬ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. 

ಕಾಂಗ್ರೆಸ್​​ ನಾಯಕರಲ್ಲಿ ಹೆಚ್ಚಿದ ಉತ್ಸಾಹ, ಹುಮ್ಮಸ್ಸು 

ಕಾಂಗ್ರೆಸ್​ ಪಕ್ಷ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ಯ ಭಾರತ ಜೋಡೋ ಹೆಸರಿನಲ್ಲಿ  ಎಲ್ಲೆಡೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಸ್ವಕ್ಷೇತ್ರದ ಜಿಲ್ಲೆಯ ಬಾಗಲಕೋಟೆಯಲ್ಲಿ ಎರಡು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಳ್ಳಲು ರೆಡಿಯಾಗಿದ್ದೇ ತಡ ಇತ್ತ ಜಿಲ್ಲೆಯ ಕಾಂಗ್ರೆಸ್​ ನಾಯಕರಲ್ಲಿ, ಕಾರ್ಯಕರ್ತರಲ್ಲಿ ಇನ್ನಿಲ್ಲದ ಉತ್ಸಾಹ, ಹುರುಪು ತುಂಬಿದೆ. ಅದರಲ್ಲೂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪಾದಯಾತ್ರೆ ಹಮ್ಮಿಕೊಳ್ಳುತ್ತಿರುವುದು, ಪಕ್ಷವನ್ನ ಮತ್ತಷ್ಟು ಬಲಪಡಿಸಲು ಅನುಕೂಲಕರವಾಗಲಿದ್ದು, ಹೀಗಾಗಿ ಸಹಜವಾಗಿಯೇ ಸಿದ್ದರಾಮಯ್ಯನವರ ಪಾದಯಾತ್ರೆ  ವಿಷಯ ಗೊತ್ತಾಗುತ್ತಲೇ ಇದೀಗ ಬಾಗಲಕೋಟೆ ಜಿಲ್ಲೆಯ ಕೈ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮತ್ತಷ್ಟು ಗರಿಗೆದರಿದ್ದು, ಹುರುಪು ತುಂಬಿದೆ. 

Vijayapura: ಕ್ರಾಂತಿಯೋಗಿಗೆ ಅಪಚಾರ ಮಾಡಿದ ವಿಜಯಪುರ ಜಿಲ್ಲಾಡಳಿತ!

ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದ ಸ್ಪರ್ಧಿಸಲಿ ಎನ್ನುವ ನಿಲ್ಲದ ಕೂಗು 

ಇನ್ನು ಇದೆಲ್ಲದರ ಮಧ್ಯೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿದ್ದರಾಮಯ್ಯನವರನ್ನ ಕೈ ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಕೈ ಮಾಡಿ ಕರೆಯುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಯಾವೊಂದು ನಿಲುವನ್ನು ಸ್ಪಷ್ಪಪಡಿಸಿಲ್ಲ. ಇವುಗಳ ಮಧ್ಯೆ ಮತ್ತೇ ಬಾದಾಮಿಯಿಂದಲೇ ಸ್ಪರ್ಧೆ ಮಾಡಲಿ ಎಂಬ ಕೂಗು ಕೇಳಿ ಬರುತ್ತಲೇ ಇದೆ. ಇದಕ್ಕೆ ಸಂಭಂದಿಸಿದಂತೆ ಕೆಲವು ನಾಯಕರು ಸಹ ನಿಯೋಗದೊಂದಿಗೆ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಮನವಿ ಮಾಡಿ ಬಂದದ್ದೂ ಉಂಟು. ಆದರೆ ಸಿದ್ದರಾಮಯ್ಯ ಮಾತ್ರ ನಾನಿನ್ನೂ ಬಾದಾಮಿ ಶಾಸಕ ಎಂದು ಹೇಳುವ ಮೂಲಕ ನಿಗೂಢ ನಡೆ ಅನುಸರಿಸಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಿದ್ರೆ, ಬಿಜೆಪಿಯಿಂದ ಯಡಿಯೂರಪ್ಪ ಸೇರಿದಂತೆ ಯಾರೇ ಬಂದ್ರೂ ಮತ್ತೇ ಬಾದಾಮಿಯಿಂದ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯನವರನ್ನ ಗೆಲ್ಲಿಸುತ್ತೇವೆ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ. 

ಒಟ್ಟಿನಲ್ಲಿ ಸ್ವಕ್ಷೇತ್ರದ ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎರಡು ದಿನದ ಪಾದಯಾತ್ರೆಗೆ ಸಿದ್ದತೆ ನಡೆಯುತ್ತಿದ್ದು, ಅದಕ್ಕೆ ಸಿದ್ದರಾಮಯ್ಯ ಗ್ರೀನ್​ ಸಿಗ್ನಲ್​ ಮಾತ್ರ ಬಾಕಿ ಇದ್ದು, ಹೀಗಾಗಿ ಕೈ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ಹುಮ್ಮಸು ತುಂಬಿದೆ. 
 

click me!