ಸ್ವಾತಂತ್ರ್ಯ ಹೋರಾಟದಲ್ಲಿ ಮೊರಬ ಪಾತ್ರ ದೊಡ್ಡದು. ಮೊರಬ ಗ್ರಾಮ ಸ್ವಾತಂತ್ರ್ಯದ ಹೋರಾಟದಲ್ಲಿ 190 ಜನ ಸೆರೆವಾಸ ಅನುಭವಿಸಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಹೋರಾಟಗಾರರ ಸ್ಮರಣೆ
ಈಶ್ವರ ಜಿ. ಲಕ್ಕುಂಡಿ
ನವಲಗುಂದ (ಆ.15) : ಸ್ವಾತಂತ್ರ್ಯ ಹೋರಾಟದಲ್ಲಿ ತಾಲೂಕಿನ ಮೊರಬ ಗ್ರಾಮದ ಪಾತ್ರ ಬಹುದೊಡ್ಡದು. ಸ್ವಾತಂತ್ರ್ಯ ಹೋರಾಟಗಾರರನ್ನು ಹುಟ್ಟುಹಾಕಿದ ನೆಲ ಎಂದೇ ಇದು ಖ್ಯಾತಿ ಪಡೆದಿದೆ. ಬ್ರಿಟಿಷರ ವಿರುದ್ಧ ಇಲ್ಲಿನ ಯುವಕರ ಪಡೆ ನಿರಂತರ ಹೋರಾಟ ನಡೆಸುತ್ತಿತ್ತು. ಈ ಕಾರಣಕ್ಕಾಗಿ ಈ ಗ್ರಾಮದ 190 ಜನ ಸೆರೆಮನೆವಾಸ ಅನುಭವಿಸಿರುವುದುಂಟು.
undefined
ದೇಶ- ಜನರಿಗಾಗಿ ಸರ್ವಸ್ವ ತ್ಯಾಗ ಮಾಡಿದ ‘ದಕ್ಷಿಣದ ಗಾಂಧಿ’
ಮೊರಬ(Moraba) ಗ್ರಾಮ ಹೋಬಳಿ ಕೇಂದ್ರ. ಇದರ ವ್ಯಾಪ್ತಿಯಲ್ಲಿ 62 ಹಳ್ಳಿಗಳು ಬರುತ್ತಿದ್ದವು. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಈ ಗ್ರಾಮದ ಯುವಕರ ಪಡೆ ಮುಂಚೂಣಿಯಲ್ಲಿರುತ್ತಿತ್ತು. ಬಸಪ್ಪ ಬೆಟಸೂರ, ಮಹ್ಮದ ಗೌಸ್ ಧಾರವಾಡ, ಗೋವಿಂದರಡ್ಡಿ ಮಾಸ್ತಿ ಈ ಮೂವರು ಹೋರಾಟದ ಮುಂದಾಳತ್ವ ವಹಿಸಿ ಯುವಕರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದರು. ಇದಕ್ಕಾಗಿ ವಿನೋಭಾ ಬಾವೆ ಅವರ ಪುಸ್ತಕ, ಅವರ ವೀರಗಾಥೆಗಳನ್ನು ಯುವಕರಿಗೆ ಹೇಳಲಾಗುತ್ತಿತ್ತು. ಗೌಪ್ಯಸ್ಥಳಗಳಲ್ಲಿ ಯುವಕರನ್ನು ಸೇರಿಸಿ ಸಭೆ ಕೂಡ ನಡೆಸುತ್ತಿದ್ದರು. ಬಹುತೇಕ ಇವರ ಸಭೆಗಳೆಲ್ಲ ಮೊರಬ ಗ್ರಾಮದ ವೆಂಕಟೇಶ್ವರ ದೇವಸ್ಥಾನವಾಗಿತ್ತು. ಅಲ್ಲೇ ಬ್ರಿಟಿಷರಿಗೆ ಯಾವ ರೀತಿ ಬಿಸಿ ಮುಟ್ಟಿಸಬೇಕೆಂಬ ಎಂಬ ಬಗ್ಗೆ ಕೂಡ ಸಂಚು ರೂಪಿಸಿ ಆ ಪ್ರಕಾರ ಹೋರಾಟಕ್ಕೆ ಇಳಿಯುತ್ತಿದ್ದರು.
ಈ ಮೂವರು ತಮ್ಮ ಪಡೆಯನ್ನು ಕಟ್ಟಿಕೊಂಡು ಅಮರಗೋಳ ರೈಲ್ವೆ ನಿಲ್ದಾಣವನ್ನು ಧ್ವಂಸ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದರು. ಅಲ್ಲದೇ, ಬ್ರಿಟಿಷರಿಗೆ ಮಾಹಿತಿ ನೀಡುವ ಮೂಲಕ ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದ ತಮ್ಮದೇ ಗ್ರಾಮದ ಮೂವರನ್ನು ಹಾಡಹಗಲೇ ಕೊಲೆ ಮಾಡಿದ್ದರು. ಈ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದ್ದರು. ಬಳಿಕ ಕೆಲಕಾಲ ಭೂಗತ ಕೂಡ ಆಗಿದ್ದರು.
ಇವರು ಅವಿತುಕೊಂಡಿದ್ದ ಜಾಗದ ಬಗ್ಗೆ ಬ್ರಿಟಿಷರ ಗುಪ್ತಚರನೊಬ್ಬ ಬ್ರಿಟಿಷರಿಗೆ ಮಾಹಿತಿ ರವಾನಿಸಿದ್ದ. ಇದು ಇವರಿಗೂ ಗೊತ್ತಾಗಿತ್ತು. ಬ್ರಿಟಿಷರು ಇವರ ಮೇಲೆ ದಾಳಿ ನಡೆಸಲು ಮುಂದಾದಾಗ ನೂರು ಮೀಟರ್ ಅಂತರದಲ್ಲಿ ಬೃಹತ್ ಗುಂಡಿ ತೋಡಿ ಮೇಲ್ಭಾಗದಲ್ಲಿ ಗುಂಡಿ ಕಾಣದಂತೆ ಮುಚ್ಚಿದ್ದರು. ಆದರೆ ಬ್ರಿಟಿಷರಿಗೆ ಈ ವಿಷಯ ತಿಳಿಯದೇ ದಾಳಿ ಮಾಡಲು ಬಂದಿದ್ದ ಬ್ರಿಟಿಷರು ಅದರೊಳಗೆ ಬಿದ್ದಿದ್ದರು. ಆಗ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಈ ಮೂವರು ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರು ಯಶಸ್ವಿಯಾಗಿದ್ದರು.
ಮಗಳ ಸ್ವಾತಂತ್ರ್ಯ ದಿನಾಚರಣೆ ಕೊನೆಗೂ ಈಡೇರಲಿಲ್ಲ, ನಾಪತ್ತೆಯಾಗಿದ್ದ ಯೋಧನ ಶವ 38 ವರ್ಷಗಳ ಬಳಿಕ ಪತ್ತೆ!
ಮುಂದೆ 1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯದೊಂದಿಗೆ ಗಾಂಧೀಜಿ ಸತ್ಯಾಗ್ರಹ ಆರಂಭಿಸಿದ್ದರು. ಅದರಂತೆ ಮೊರಬ ಗ್ರಾಮದಲ್ಲಿ ಹೋರಾಟ ತೀವ್ರಗೊಂಡಿತು. 1944ರಲ್ಲಿ ಬಸಪ್ಪ, ಮಹ್ಮದಗೌಸ್, ಗೋವಿಂದರಡ್ಡಿ ಸೇರಿದಂತೆ 190 ಹೋರಾಟಗಾರರನ್ನು ಬ್ರಿಟಿಷರು ಬಂಧಿಸುವಲ್ಲಿ ಯಶಸ್ವಿಯಾದರು. ಬೈಲಹೊಂಗಲ, ಯರೇವಾಡ, ಬಳ್ಳಾರಿ ಜೈಲುಗಳಲ್ಲಿ ಈ 190 ಜನ ಜೈಲುವಾಸ ಅನುಭವಿಸುತ್ತಾರೆ. ಬರೋಬ್ಬರಿ 3 ವರ್ಷ ಸೆರೆಮನೆವಾಸ ಅನುಭವಿಸುವ ಇವರು 1947ರಲ್ಲಿ ಭಾರತ ಸ್ವತಂತ್ರವಾದ ಬಳಿಕ ಬಿಡುಗಡೆಯಾಗುತ್ತಾರೆ.
ಸೆರೆಮನೆ ವಾಸ ಅನುಭವಿಸಿ ಹೊರಬಂದ ಹೋರಾಟಗಾರರು, ಬಳಿಕ ತಮ್ಮ ತಮ್ಮ ಗ್ರಾಮಗಳಲ್ಲಿ ರೈತರ ಕಷ್ಟ, ತೊಂದರೆಗಳ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದರು. ರೈತ ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆದರು. ಆಗ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹಲವರು 1980ರಲ್ಲಿ ನಡೆದ ರೈತ ಬಂಡಾಯ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂಬುದು ವಿಶೇಷ.
ತಲುಪುವುದು ಹೇಗೆ?
ಧಾರವಾಡದಿಂದ ನೇರವಾಗಿ ಮೊರಬ ಗ್ರಾಮ ಹೋಗಲು ಬಸ್‌ಗಳ ಸೌಲಭ್ಯ ಹಾಗೂ ನವಲಗುಂದದಿಂದ ಮೊರಬ ಗ್ರಾಮಕ್ಕೆ ಹೋಗಲು ಬಸ್‌್ಸಗಳ ಸೌಕರ್ಯವಿದೆ.