Indi2@75: ಮನೆಯನ್ನೇ ಮುದ್ರಣಾಲಯವಾಗಿಸಿಕೊಂಡಿದ್ದ ಸ್ವಾತಂತ್ರ್ಯ ಯೋಧ ಸದಾನಂದ ಚಂದ್ರಗಟಗಿ

By Suvarna News  |  First Published Jul 18, 2022, 12:59 PM IST

ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದ ‘ಬಾರ್ಡೋಲಿ’ ಎಂದೇ ಖ್ಯಾತಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಹೆಜ್ಜೆ ಹೆಜ್ಜೆಗೂ ಹೋರಾಟದ ನೆನಪುಗಳಿದ್ದು, ಚಂದ್ರಗಟಗಿ ಪಟಾಂಗಣದ ಪಾತ್ರವಂತೂ ಅನನ್ಯವಾಗಿದೆ. 


ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದ ‘ಬಾರ್ಡೋಲಿ’ ಎಂದೇ ಖ್ಯಾತಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಹೆಜ್ಜೆ ಹೆಜ್ಜೆಗೂ ಹೋರಾಟದ ನೆನಪುಗಳಿದ್ದು, ಚಂದ್ರಗಟಗಿ ಪಟಾಂಗಣದ ಪಾತ್ರವಂತೂ ಅನನ್ಯವಾಗಿದೆ. ಇಲ್ಲಿದ್ದ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಸ್ವಾತಂತ್ರ್ಯ ಹೋರಾಟದ ರೂಪುರೇಷೆಗಳ ಬಗ್ಗೆ ಕರಪತ್ರಗಳನ್ನು ಮುದ್ರಿಸಲಾಗುತ್ತಿತ್ತು ಎಂಬುದು ಗಮನಾರ್ಹ.

ಇಲ್ಲಿಗೆ ಸುತ್ತಮುತ್ತಲಿನ 10ಕ್ಕೂ ಅಧಿಕ ತಾಲೂಕುಗಳಿಂದ ಸ್ವಾತಂತ್ರ್ಯ ಹೋರಾಟಗಾರರು ಆಗಮಿಸುತ್ತಿದ್ದರು. ದಿನವಿಡೀ ಹೋರಾಟ ಪ್ರಕ್ರಿಯೆಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಇದೇ ರೀತಿ ಕರಪತ್ರಗಳನ್ನು ಹಂಚುವವರು ಮತ್ತು ಚಳವಳಿಯಲ್ಲಿ ಭಾಗಿಯಾಗಿರುವವರು ಇಲ್ಲಿ ಉಳಿದುಕೊಂಡು ತಮ್ಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಪ್ರಮುಖವಾಗಿ ಚಳವಳಿಯ ರೂಪುರೇಷೆ ಸಿದ್ಧವಾಗುವಂತಹ ಸ್ಥಳ ಇದಾಗಿತ್ತು.

Latest Videos

undefined

Indi2@75:ಸ್ವಾತಂತ್ರ್ಯ, ಸ್ವಾಭಿಮಾನದ ಸಾಕ್ಷಿ ಕಿತ್ತೂರು ಕೋಟೆ

ಕರಪತ್ರಗಳನ್ನು ಹೇಗೆ ಹಂಚುವುದು? ಎಲ್ಲಿಂದ ಎಲ್ಲಿಗೆ ಸಾಗಿಸಬೇಕು? ಎನ್ನುವುದರ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಯುತ್ತಿತ್ತು. 1942ರ ಕ್ವಿಟ್‌ ಇಂಡಿಯಾ ಚಳವಳಿ ಪ್ರಾರಂಭವಾದ ನಂತರವಂತೂ ಇದು ಅತ್ಯಧಿಕ ಚಟುವಟಿಕೆಯಿಂದ ಕೂಡಿದ್ದ ಸ್ಥಳವಾಗಿತ್ತು.

ಮನೆಯೇ ಮುದ್ರಣಾಲಯ!:

ಸ್ವಾತಂತ್ರ್ಯ ಚಳವಳಿಯಲ್ಲಿ ಚಂದ್ರವಟಗಿಯ ಪಟಾಂಗಣ ಮುದ್ರಣಾಲಯವು ತಾಲೂಕಿನ ಕೇಂದ್ರಬಿಂದುವಾಗಿತ್ತು. ಸದಾ ಚಟುವಟಿಕೆಯಿಂದ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಅಹರ್ನಿಶಿಯಾಗಿ ದುಡಿದ ಸ್ವಾತಂತ್ರ್ಯ ಹೋರಾಟಗಾರ ಸದಾನಂದ ಚಂದ್ರಗಟಗಿ ತಮ್ಮ ಸ್ವಂತ ಮನೆಯನ್ನೇ ಮುದ್ರಣಾಲಯವಾಗಿ ಮಾರ್ಪಡಿಸಿದ್ದರು. ಕಟ್ಟಿಗೆಯಿಂದ ನಿರ್ಮಾಣವಾಗಿದ್ದ ಎರಡು ಅಂತಸ್ತಿನ ಮನೆಯನ್ನು ಬಹುತೇಕ ಹೋರಾಟ ರೂಪಿಸಲು ಮೀಸಲಿರಿಸಿದ್ದರು.

ಪಟಾಂಗಣದ ಕೆಳ ಅಂತಸ್ತಿನಲ್ಲಿ ಸದಾನಂದ ಚಂದ್ರಗಟಗಿ ಮತ್ತವರ ಕುಟುಂಬ ವಾಸಿಸುತ್ತಿದ್ದರೆ, ಮೊದಲ ಮಹಡಿಯಲ್ಲಿ ಪಟಾಂಗಣ ಮುದ್ರಣಾಲಯ ಕಾರ್ಯಾಚರಿಸುತ್ತಿತ್ತು. ದಿನವಿಡೀ ಮುದ್ರಣಾಲಯ, ಚರ್ಚಾ ವೇದಿಕೆಯು ಜನರಿಂದಲೇ ಕೂಡಿರುತ್ತಿತ್ತು. ಸದಾನಂದರು ತಾಲೂಕು ಹಾಗೂ ಸುತ್ತಮುತ್ತಲಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು.

ಈ ಪಟಾಂಗಣವು ಈಗಲೂ ಸದೃಢವಾಗಿದೆ. ಪ್ರತಿ ಬಾಗಿಲು, ಮೇಲ್ಚಾವಣಿ ಕೂಡ ಗಟ್ಟಿಮುಟ್ಟಾಗಿದೆ. ಸದ್ಯ ಈ ಪಟಾಂಗಣದಲ್ಲಿ ಸದಾನಂದ ಚಂದ್ರಗಟಗಿ ಅವರ ಪುತ್ರಿ ಅನುರಾಧ ಚಂದ್ರಗಟಗಿ ವಾಸಿಸುತ್ತಿದ್ದಾರೆ. ಇವರು ಈಗಲೂ ಪ್ರತಿವರ್ಷ ಆಗಸ್ಟ್‌ 15 ಮತ್ತು ಜನವರಿ 26ರಂದು ಪಟಾಂಗಣದ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಚಳವಳಿಯ ನೆನಪನ್ನು ಮೆಲುಕುಹಾಕುತ್ತಾರೆ.

India@75:ಬ್ರಿಟಿಷರ ವಿರುದ್ಧ ಯೋಧನಂತೆ ಸಮವಸ್ತ್ರ ಧರಿಸಿ ಹೋರಾಡಿದ ಕ್ಯಾ. ಲಕ್ಷ್ಮೀ

ಚಂದ್ರಗಟಗಿ ಪಟಾಂಗಣ ತಲುಪುವುದು ಹೇಗೆ?

ಸಿದ್ದಾಪುರ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸ್ಮಾರಕವಾಗಿರುವ ಚಂದ್ರವಟಗಿ ಪಟಾಂಗಣವು ಪಟ್ಟಣದ ವ್ಯಾಪ್ತಿಯಲ್ಲಿಯೇ ಇದೆ. ಪಟಾಂಗಣವು ಪಟ್ಟಣದ ದಕ್ಷಿಣ ದಿಕ್ಕಿನಲ್ಲಿದ್ದು, ಬಸ್‌ ನಿಲ್ದಾಣದಿಂದ ಕೇವಲ 800 ಮೀ. ದೂರದಲ್ಲಿದೆ. ಇಲ್ಲಿಗೆ ದ್ವಿಚಕ್ರ ವಾಹನ, ಆಟೋರಿಕ್ಷಾಗಳಲ್ಲಿ ಪ್ರಯಾಣಿಸಿ ತಲುಪಬಹುದಾಗಿದೆ.

- ಶಿವಶಂಕರ್ ಕೋಲಸಿರ್ಸಿ

click me!