'ಸಬ್ ಕಾ ಸಾತ್ ಸಬ್ ಕಾ ವಿಕಾಸ್ ' , 'ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ' ಮತ್ತು 'ಸಬ್ ಕಾ ವಿಶ್ವಾಸ್ ಸಬ್ ಕ ಪ್ರಯಾಸ್ ' ತತ್ತ್ವಗಳಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆತ್ಮ ನಿರ್ಭರ ಹಾಗೂ ಸ್ವಾವಲಂಭಿ ಭಾರತ ನಿರ್ಮಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿವೆ ಎಂದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಆ.15): 'ಸಬ್ ಕಾ ಸಾತ್ ಸಬ್ ಕಾ ವಿಕಾಸ್ ' , 'ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ' ಮತ್ತು 'ಸಬ್ ಕಾ ವಿಶ್ವಾಸ್ ಸಬ್ ಕ ಪ್ರಯಾಸ್ ' ತತ್ತ್ವಗಳಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆತ್ಮ ನಿರ್ಭರ ಹಾಗೂ ಸ್ವಾವಲಂಭಿ ಭಾರತ ನಿರ್ಮಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿವೆ ಎಂದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಕೇಂದ್ರ ಸರ್ಕಾರ ಮೂಲ ಸೌಲಭ್ಯಗಳ ನಿರ್ಮಾಣಕ್ಕಾಗಿ ಒತ್ತು ಕೊಟ್ಟು ಗತಿ ಶಕ್ತಿ ಯೋಜನೆ , ಉದ್ಯೋಗ ಮತ್ತು ಸಂಪತ್ತು ಸೃಷ್ಟಿಗಾಗಿ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಳಿಸಿದೆ.
ಕೃಷಿ , ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ವರ್ಷ ಪೂರ್ತಿ, ಅಂದರೆ ಬರುವ ಆಗಸ್ಟ್ 15 , 2023 ರವರೆಗೆ ನಿರಂತರವಾಗಿ ನಡೆಸುವುದು ಸರ್ಕಾರದ ಉದ್ದೇಶವಾಗಿದೆ. ದೇಶದಲ್ಲಿ ಕೃಷಿ ಕ್ರಾಂತಿಯ ಪರಿಣಾಮವಾಗಿ ಜನರು ಹಸಿವು ಮುಕ್ತರಾಗಿದ್ದಾರೆ. ಹೊರ ದೇಶಗಳಿಂದ ಆಹಾರ ಆಮದು ಮಾಡಕೊಳ್ಳುವ ಪರಿಸ್ಥಿತಿಯಿಂದ ರಫ್ತು ಮಾಡುವ ಹಂತಕ್ಕೆ ಬಂದಿದ್ದೇವೆ. ಚಿತ್ರದುರ್ಗ ಜಿಲ್ಲೆಯಲ್ಲಿ ರೂ.259 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ದೇಶದಲ್ಲೆ ಪ್ರಥಮ ಬಾರಿಗೆ ರಾಜ್ಯದಲ್ಲಿ ರೈತ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ.
Chitradurga; ತುರುವನೂರು ಗ್ರಾಮದಲ್ಲಿದೆ ಮಹಾತ್ಮ ಗಾಂಧೀಜಿ ದೇವಾಲಯ
ಇದರ ಅಡಿಯಲ್ಲಿ 5 ಎಕರೆ ವರೆಗೆ ಜಮೀನು ಹೊಂದಿದವರಿಗೆ ರೂ.1250 ಗಳನ್ನು ಇಂಧನ ವೆಚ್ಚವಾಗಿ ನೀಡಲಾಗುತ್ತಿದೆ. ರಾಜ್ಯದಲ್ಲಿ ರೈತ ವಿದ್ಯಾನಿಧಿ ಜಾರಿ ಮಾಡಿ ಪ್ರಸಕ್ತ ಸಾಲಿನಲ್ಲಿ 25,559 ವಿದ್ಯಾರ್ಥಿಗಳಿಗೆ ರೂ.9.12 ಕೋಟಿ ವಿದ್ಯಾರ್ಥಿ ಪ್ರೋತ್ಸಾಹ ಧನ ನೀಡಲಾಗಿದೆ. ಕೃಷಿ ವಿ.ವಿ.ಗಳಲ್ಲಿ ರೈತರ ಮಕ್ಕಳಿಗೆ ಶೇ.50% ಸೀಟುಗಳನ್ನು ಮೀಸಲು ಇಡಲಾಗಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಂತಹ ಒಂದು ಸುಂದರ ಆಡಳಿತ ಅವಕಾಶವನ್ನು ನಮ್ಮ ಸ್ವಾತಂತ್ರ್ಯ ಚಳವಳಿಯ ಹರಿಕಾರರು ನಮಗೆ ಕಟ್ಟಿಕೊಟ್ಟಿದ್ದಾರೆ . ಅವರ ಬೆವರು ಮತ್ತು ರಕ್ತ ತರ್ಪಣಗಳಿಂದಾಗಿಯೇ ಇವತ್ತು ನಾವು ಸಮೃದ್ಧ ಮತ್ತು ಶಾಂತಿಯುತ ಜೀವನ ನಡೆಸುವಂತಾಗಿದೆ.
ಸಾಮರಸ್ಯದ ನಡೆಗೆ ಪ್ರೇರಣೆಯಾಗಿದೆ. ಜಗತ್ತಿನ ಜನ ಹುಬ್ಬೇರಿಸುವಂತೆ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ. ಇಂತಹ ದಿಗ್ಗಜರುಗಳ ಹೆರುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಅದು ಭಾರತದಷ್ಟೇ ಬೃಹತ್ ಪಟ್ಟಿಯಾಗುತ್ತದೆ. ನವದೆಹಲಿಯ ಐತಿಹಾಸಿಕ ಕಲ್ಲಿಕೋಟೆಯ ಮೇಲೆ ಮೊದಲ ಸ್ವಾತಂತ್ರೋತ್ಸವದ ತ್ರಿವರ್ಣ ಧ್ವಜವನ್ನು ಹಾರಿಸುವ ಗಳಿಗೆಯವರೆಗೆ ನಡೆದ ಎಲ್ಲ ಘಟನೆಗಳೂ, ಪ್ರಯತ್ನಗಳೂ ರಾಷ್ಟ್ರೀಯ ಚಳವಳಿಯ ಭಾಗಗಳೇ ಆಗಿವೆ. ಸ್ವಾತಂತ್ರ್ಯ ಹೋರಾಟದ ಕಾಲಗತಿಯಲ್ಲಿ ಹುತಾತ್ಮ, ಮಹಾತ್ಮರುಗಳು ಮಾಡಿರುವ ತ್ಯಾಗ ಬಲಿದಾನಗಳು ಜನಮಾನಸದಿಂದ ಮರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಒಟ್ಟು ಜನಸಂಖ್ಯೆ ಸರಿಸುಮಾರು ಮೂವತ್ತೆಂಟು ಕೋಟಿ . ಇವತ್ತು ಅದಕ್ಕೆ ಒಂದು ನೂರು ಕೋಟಿಯಷ್ಟು ಜನಸಂಖ್ಯೆ ಸೇರಿ ನೂರಾ ಮೂವತ್ತೆಂಟು ಕೋಟಿ ಆಗಿದೆ. ಭಾರತೀಯರಾದ ನಮಗೆ ಇದೊಂದು ಬಹುದೊಡ್ಡ ಸವಾಲು ಮತ್ತು ಆ ಸವಾಲನ್ನು ಮೀರಿ ಬೆಳೆಯುವ ಅವಕಾಶ , ಭೂ ವಿಸ್ತಾರದಲ್ಲಿ ಯಾವುದೇ ಹೆಚ್ಚಳವಿಲ್ಲದೆ , ಈ ಒಂದು ನೂರು ಕೋಟಿಯಷ್ಟು ಹೆಚ್ಚುವರಿ ಜನಸಂಖ್ಯೆಗೆ ಅನ್ನ , ನೀರು , ವಸತಿ , ಆರೋಗ್ಯ , ನಾಗರಿಕ ಸೌಲಭ್ಯಗಳು ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಕೆಲಸ ಸಾಮಾನ್ಯ ಸಾಧನೆಯಲ್ಲ . ಜಗತ್ತಿನ ಇತರ ರಾಷ್ಟ್ರಗಳ ಜನರ ಜನಜೀವನ ಮಟ್ಟಕ್ಕಿಂತ ಕಡಿಮೆಯಾಗದಂತೆ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಸುಲಭದ ಮಾತಲ್ಲ.
ಕಳೆದ ಏಳೂವರೆ ದಶಕಗಳಲ್ಲಿ ರಾಷ್ಟ್ರೀಯ ವರಮಾನ ಹಲವು ಪಟ್ಟು ಹೆಚ್ಚಾಗಿದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿಯಾಗಿದೆ. ಆರ್ಥಿಕ ಅಭಿವೃದ್ಧಿಗೆ ಬೇಕಾದ ಮೂಲ ಸೌಲಭ್ಯಗಳು ಜನಸಂಖ್ಯಾ ಏರಿಕೆಯ ದರಕ್ಕಿಂತ ಹಲವು ಪಟ್ಟು ಹೆಚ್ಚಾಗುತ್ತಾ ಬಂದಿದೆ . ಬಡತನ , ನಿರುದ್ಯೋಗ , ಅಸಮಾನತೆಗಳು ಕಡಿಮೆಯಾಗಿವೆ. ಜೀವಿತದ ಸರಾಸರಿ ಅವಧಿ ಗಣನೀಯವಾಗಿ ಹೆಚ್ಚಾಗಿದೆ. ಬಹುತೇಕ ಎಲ್ಲ ಹಳ್ಳಿಗಳಿಗೂ ಸಾರಿಗೆ ಸಂಪರ್ಕ ಸುವ್ಯವಸ್ಥಿತವಾಗಿ ನಿರ್ಮಾಣವಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ದೇಶದ ರಕ್ಷಣಾ ವ್ಯವಸ್ಥೆ ಸುಸ್ಥಿರವಾಗಿದೆ. ಆಹಾರ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ.
ಜಾತಿ ವ್ಯವಸ್ಥೆ ಮೂಲದ ಶೋಷಣೆಯ ತೀವ್ರತೆ ಕಡಿಮೆಯಾಗಿದೆ. ಇದೆಲ್ಲವನ್ನ ಮಷೀಕರಿಸುವಂತೆ, ಇವತ್ತು ಕೋವಿಡ್ -19ರ ಮಹಾ ದುಃಸ್ಥಿತಿಯನ್ನು ಹೆಚ್ಚಿನ ಸಾವು ನೋವುಗಳಿಲ್ಲದೆ ನಿರ್ವಹಿಸುವಂತಹ ಶಕ್ತಿ ನಮಗೆ ಬಂದಿರುವುದು ನಮ್ಮ ಆಡಳಿತ ವ್ಯವಸ್ಥೆಯ ದೂರದೃಷ್ಟಿ, ಸಂಶೋಧನಾ ಸಾಮರ್ಥ್ , ಸಾಮಾಜಿಕ ಬದ್ಧತೆ ಮತ್ತು ಸಾಮೂಹಿಕ ಪ್ರಯತ್ನ. ಜೊತೆಗೆ, ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲ್ಪಟ್ಟಿರುವ ಸಮೂಹ ಮಾಧ್ಯಮ ಕ್ಷೇತ್ರ ತಂತ್ರಜ್ಞಾನದ ಬೆಳವಣಿಗೆಯ ಕಾರಣದಿಂದ ಅತ್ಯಂತ ಕ್ರಿಯಾಶೀಲವಾಗಿರುವುದು . ಜನಸಾಮಾನ್ಯರ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಜನಮಾನಸಕ್ಕೆ ಮುಟ್ಟಿಸುವ ಕೆಲಸವನ್ನು ಅವು ತಮ್ಮ ಹೊಣೆಗಾರಿಕೆಯನ್ನರಿತು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿವೆ.
ಇದರಿಂದ ಶಾಸಕಾಂಗ ಮತ್ತು ಕಾರ್ಯಾಂಗಗಳು ದಾರಿ ತಪ್ಪದಂತೆ, ಎಚ್ಚರಿಕೆಯ ಹೆಜ್ಜೆಗಳನ್ನಿಡುವಂತಾಗಿದೆ. ಇದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ ಮತ್ತು ಸಾರ್ವಜನಿಕ ಆಡಳಿತದ ಸರಿದಾರಿ, ಮುಂದುವರಿದು ಹೇಳುವುದಾದರೆ, ಪ್ರಸ್ತುತ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಈ ಅಮೃತ ಮಹೋತ್ಸವವನ್ನು ಆಚರಿಸುವ ಅವಕಾಶವೇ ಒಂದು ಸುದೈವವೆಂದು ಭಾವಿಸಿದ್ದೇವೆ. ಇದರ ಸವಿ ನೆನಪಿಗಾಗಿ ರಾಷ್ಟ್ರದ ಏಕತೆ , ಸಮಗ್ರತೆ ಮತ್ತು ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಲವು ಹತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Chitradurga: ತಿರಂಗಾ ಯಾತ್ರೆಗೆ ಬಿಜೆಪಿಯಿಂದ ಭರ್ಜರಿ ಬೈಕ್ ರ್ಯಾಲಿ
ಈ ಮಹೋತ್ಸವದ ಮಹತ್ವವನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವ ಮೂಲಕ ಅವರಲ್ಲಿ ದೇಶಾಭಿಮಾನ ಮತ್ತು ಪರಿಪೂರ್ಣ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶ ನಮ್ಮದಾಗಿದೆ. ಬರುವ ದಶಕಗಳಲ್ಲಿ ಭಾರತವನ್ನು ' ವಿಶ್ವಗುರುವನ್ನಾಗಿಸುವ ಮಹಾತ್ವಾಕಾಂಕ್ಷೆ ಹೊಂದಿದ್ದೇವೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಬಹುತೇಕ ಎಲ್ಲ ಇಲಾಖೆಗಳ ಮೂಲಕ ಹಲವಾರು ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನಿರ್ದೇಶನದಂತೆ ' ಹರ್ ಫರ್ ತಿರಂಗಾ' ಕಾರ್ಯಕ್ರಮದ ಪ್ರಕಾರ ರಾಜ್ಯದ ಎಲ್ಲ ಮನೆಗಳ , ಶಾಲಾ ಕಾಲೇಜುಗಳ, ಅಂಗಡಿ ಮುಂಗಟ್ಟುಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ರಮವಹಿಸಲಾಗಿದೆ.
ದೇಶದ ಎಲ್ಲ ನಾಗರಿಕರನ್ನು ದೇಶಾಭಿಮಾನದ ಕಡೆಗೆ ಭಾವನಾತ್ಮಕವಾಗಿ ಸ್ಪಂಧಿಸುವಂತೆ ಮಾಡಲು ಮತ್ತು ಸನಾತನ ಭಾರತದ ಸಾಹಿತ್ಯ , ಕಲೆ , ವಾಸ್ತುಶಿಲ್ಪ ಮುಂತಾದ ಐತಿಹಾಸಿಕ ಸ್ಮಾರಕಗಳ ಪ್ರಾಮುಖ್ಯತೆಯನ್ನರಿಯಲು ಅನುಕೂಲವಾಗುವಂತೆ, ಈ ಸ್ಥಳಗಳನ್ನು ವಿದುದ್ದೀಪಾಲಂಕಾರಗಳಿಂದ ಸಜ್ಜುಗೊಳಿಸಿ ಯಾವುದೇ ಪ್ರವೇಶ ಶುಲ್ಕವಿಲ್ಲದಂತೆ ಸಾರ್ವಜನಿಕರಿಗೆ ಇದೇ 5ನೇ ತಾರೀಖಿನಿಂದ 17 ನೇ ತಾರೀಖಿನವರೆಗೆ ಮುಕ್ತ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಇದು ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಯಶಸ್ವೀ ಕಾರ್ಯಕ್ರಮವಾಗಿ ಜಾರಿಯಾಗಿದ್ದು, ಪ್ರತಿದಿನ ಸಹಸ್ರಾರು ಜನರು ಈ ಸ್ಥಳಗಳಿಗೆ ಭೇಟಿ ನೀಡುತ್ತಿರುವುದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಪ್ರಶಂಸೆಗೆ ಭಾಜನವಾಗಿರುವುದು ಜಿಲ್ಲಾಡಳಿತದ ಪ್ರಯತ್ನಗಳಿಗೆ ಸಂದ ಗೌರವವಾಗಿದೆ. ಅದರಲ್ಲೂ ಚಿತ್ರದುರ್ಗದ ಕೋಟೆಯ ಸೌಂದರ್ಯ ಮನಮೋಹಕವಾಗಿದೆ.