ಹಾನಗಲ್ಲ ಘಟಕಕ್ಕೆ ನೂತನ ಬಸ್‌ ಸೌಲಭ್ಯ: ಪಾಟೀಲ

By Web Desk  |  First Published Oct 27, 2019, 8:17 AM IST

ಹಾನಗಲ್ಲ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿದ ಸಂಸ್ಥೆ ಅಧ್ಯಕ್ಷ ಪಾಟೀಲ|ಸಂಸ್ಥೆ ಪ್ರತಿದಿನ 50 ಲಕ್ಷಗಳಷ್ಟು ಆರ್ಥಿಕ ಹಾನಿ ಅನುಭವಿಸುತ್ತಿದೆ| ರಾಜ್ಯ ಸರ್ಕಾರ ಜನವರಿ ಹೊತ್ತಿಗೆ 3 ಸಾವಿರ ಬಸ್‌ಗಳನ್ನು ಖರೀದಿಸಲಿದೆ| ಅದರಲ್ಲಿ 700 ಬಸ್‌ಗಳು ಹುಬ್ಬಳ್ಳಿ ವ್ಯಾಪ್ತಿಗೆ ನೀಡುವ ಭರವಸೆಯನ್ನು ಸಾರಿಗೆ ಮಂತ್ರಿಗಳು ನೀಡಿದ್ದಾರೆ| 


ಹಾನಗಲ್ಲ(ಅ.27): ಹಾನಗಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕ ಹಾಗೂ ಬಸ್‌ ನಿಲ್ದಾಣಕ್ಕೆ ಈ ಸಂಸ್ಥೆಯ ಅಧ್ಯಕ್ಷ ವಿ.ಎಸ್‌. ಪಾಟೀಲ ಧಿಡೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ವಿಭಾಗದ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ 80 ಘಟಕಗಳು ಒಳಗೊಳ್ಳುತ್ತವೆ. ಈ ವಿಭಾಗದಲ್ಲಿ 4996 ಬಸ್‌ಗಳು 15.80 ಲಕ್ಷ ಕಿಮಿ ಚಲಿಸುವ ಮೂಲಕ ಸಾರ್ವಜನಿಕರ ಸೇವೆ ಸಲ್ಲಿಸುತ್ತಿದ್ದು, ಬಹಳಷ್ಟು ವಾಹನಗಳು ಹತ್ತು ಲಕ್ಷ ಕಿಮೀ ಓಡಿದಂಥವುಗಳಿವೆ. ಅವುಗಳನ್ನು ಗ್ರಾಮೀಣ ಸಾರಿಗೆಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸಾರಿಗೆ ಸಂಸ್ಥೆ ಪ್ರತಿದಿನ 50 ಲಕ್ಷಗಳಷ್ಟು ಆರ್ಥಿಕ ಹಾನಿ ಅನುಭವಿಸುತ್ತಿದೆ. ರಾಜ್ಯ ಸರ್ಕಾರ ಜನವರಿ ಹೊತ್ತಿಗೆ 3 ಸಾವಿರ ಬಸ್‌ಗಳನ್ನು ಖರೀದಿಸುವುದಾಗಿ ತಿಳಿಸಿದ್ದು, ಅದರಲ್ಲಿ 700 ಬಸ್‌ಗಳು ಹುಬ್ಬಳ್ಳಿ ವ್ಯಾಪ್ತಿಗೆ ನೀಡುವ ಭರವಸೆಯನ್ನು ಸಾರಿಗೆ ಮಂತ್ರಿಗಳು ನೀಡಿದ್ದಾರೆ ಎಂದು ವಿವರಿಸಿದರು.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಾನಗಲ್ಲ ಘಟಕದಲ್ಲಿ 85 ಮಾರ್ಗಗಳಲ್ಲಿ 88 ಬಸ್‌ಗಳು ಸೇವೆ ಸಲ್ಲಿಸುತ್ತಿದ್ದು, 40 ಬಸ್‌ಗಳು 10 ಲಕ್ಷ ಕಿಮೀ ಓಡಿದ್ದರಿಂದ ಸಮಸ್ಯೆಗಳು ಎದುರಾಗುತ್ತಿವೆ. ಪ್ರತಿ ವರ್ಷವೂ ಬಸ್‌ ಖರೀದಿಸಿದರೆ ಈ ಸಮಸ್ಯೆ ಬರಲಾರದು. ಆದರೆ, ಅದು ಕಷ್ಟಸಾಧ್ಯವಾಗಿದೆ. ವಾಯು ಮಾಲಿನ್ಯ ತಡೆಯುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ಬ್ಯಾಟರಿ ಚಾಲಿತ ಬಸ್‌ಗಳನ್ನು ಖರೀದಿಸುವ ಚಿಂತನೆ ಸರ್ಕಾರದ ಹಂತದಲ್ಲಿ ನಡೆದಿದೆ. ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮಾತುಕತೆಗಳೂ ನಡೆದಿವೆ. ಜನೇವರಿ ತಿಂಗಳಲ್ಲಿ ಹಾನಗಲ್ಲ ಘಟಕಕ್ಕೆ ಹೊಸಬಸ್‌ಗಳನ್ನು ನೀಡುವುದಾಗಿ ಪಾಟೀಲ ತಿಳಿಸಿದರು.

ವಿದ್ಯಾರ್ಥಿಗಳಿಗೆ ಸಹಕರಿಸಿ:

ಪಟ್ಟಣದ ಹೊರಭಾಗದ ಮಲ್ಲಿಗ್ಗಾರ ಸಮೀಪವಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ಅವಧಿಯ ನಂತರ ಮನೆಗೆ ವಾಪಸಾಗಲು ಸಿಬ್ಬಂದಿಗಳು ಬಸ್‌ಗಳನ್ನು ನಿಲುಗಡೆ ಮಾಡುತ್ತಿಲ್ಲ. ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸುವುದಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪದೇ- ಪದೇ ಮುಷ್ಕರ ನಡೆಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿಬ್ಬಂದಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಬಸ್‌ ನಿಲುಗಡೆಗೊಳಿಸುವುದರೊಂದಿಗೆ ಸಹಕಾರ ನೀಡುವಂತೆಯೂ ತಿಳಿಸಲಾಗಿದೆ. ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿದ ಪಾಟೀಲ, ಮೂತ್ರಾಲಯ, ಶೌಚಾಲಯಗಳನ್ನು ವೀಕ್ಷಿಸಿದರು. ನಂತರ ನಿಲ್ದಾಣಾಧಿಕಾರಿಗಳಿಗೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆ ಮಾಡಿದರು. ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಕಸದ ಬುಟ್ಟಿಗೆ ಹಾಕುವಂತೆ, ಧ್ವನಿವರ್ಧಕದಲ್ಲಿ ಪ್ರಯಾಣಿಕರಿಗೂ ಮನವಿ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣಕುಮಾರ ಶೆಟ್ಟರ, ಪದ್ಮನಾಭ ಕುಂದಾಪೂರ, ನಿಂಗಪ್ಪ ಗೊಬ್ಬೇರ, ಶಿವಲಿಂಗಪ್ಪ ತಲ್ಲೂರ, ಪ್ರಶಾಂತ ಕಾಮನಹಳ್ಳಿ ಇದ್ದರು.
 

click me!