ಹಾನಗಲ್ಲ: ಗ್ರಾಹಕರಿಲ್ಲದೆ ಮಾರ್ಕೆಟ್ ಖಾಲಿ ಖಾಲಿ..!

Published : Oct 26, 2019, 08:14 AM IST
ಹಾನಗಲ್ಲ: ಗ್ರಾಹಕರಿಲ್ಲದೆ ಮಾರ್ಕೆಟ್ ಖಾಲಿ ಖಾಲಿ..!

ಸಾರಾಂಶ

ಗ್ರಾಹಕರಿಲ್ಲದೇ ಪರದಾಡಿದ ವ್ಯಾಪಾರಸ್ಥರು| ನೆರೆ ಹಾವಳಿ, ನಿರಂತರ ಮಳೆಯಿಂದ ಮಾರುಕಟ್ಟೆಗೆ ಬರದ ಗ್ರಾಹಕರು| ಗಿರಾಕಿಗಳಿಲ್ಲದೆ ಭಣಗುಡುತ್ತಿದ್ದ ಹಾನಗಲ್ಲ ಸಂತೆ| ವ್ಯಾಪಾರಸ್ಥರು ಇಡೀ ದಿನ ಕೈ ಕೈ ಹಿಸುಕಿಕೊಂಡು ಕಾಲ ಕಳೆಯುವಂತಾಗಿತ್ತು|

ಹಾನಗಲ್ಲ(ಅ.26): ನೆರೆ ಹಾವಳಿಯ ಪರಿಣಾಮ ಬೆಳಕಿನ ದೀಪಾವಳಿ ಹಬ್ಬ ವ್ಯಾಪಾರಿಗಳ ಪಾಲಿಗೆ ಬೆಳಕಾಗುವ ಬದಲು ಕಗ್ಗತ್ತಲಾಗಿ ಪರಿಣಮಿಸಿದೆ.ಹಬ್ಬದ ಸಂತೆ ಎನಿಸಿದ ಶುಕ್ರವಾರ ಎಡೆಬಿಡದೆ ಸುರಿಯುತ್ತಿರುವ ಮಳೆಯ ಮಧ್ಯದಲ್ಲಿ ವ್ಯಾಪಾರಿಗಳು ಸೇರಿದಂತೆ, ಕಾಯಿಪಲ್ಯೆ, ಹಣ್ಣು ಹಂಪಲು ವ್ಯಾಪಾರಸ್ಥರು ಗಿರಾಕಿಗಳಿಲ್ಲದೆ ಪರದಾಡುವಂತಾಯಿತು.

ವರ್ಷದಲ್ಲಿ ಅತಿದೊಡ್ಡ ಹಬ್ಬವಾಗಿ ಅತ್ಯುತ್ತಮ ವ್ಯಾಪಾರದ ಸಂತೆಯಾಗಬೇಕಾದ ಶುಕ್ರವಾರ ಹಾನಗಲ್ಲ ಸಂತೆ ಗಿರಾಕಿಗಳಿಲ್ಲದೆ ಭಣಗುಡುತ್ತಿತ್ತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಸ್ಥರು ಇಡೀ ದಿನ ಕೈ ಕೈ ಹಿಸುಕಿಕೊಂಡು ಕಾಲ ಕಳೆಯುವಂತಾಗಿತ್ತು. ದೀಪಾವಳಿ ಎಂದರೆ ಮನೆಯಲ್ಲೂ ಸಂಭ್ರಮ, ಎಲ್ಲದಕ್ಕೂ ಹೆಚ್ಚಾಗಿ ಕೃಷಿ ಬದುಕಿನಲ್ಲಿ ಸಂಗಾತಿಗಳಾದ ಹೋರಿಗಳನ್ನು ಸಿಂಗರಿಸಿ ಓಡಿಸಿ ಖುಷಿಪಡಲು ಹೊಸ ಹೊಸ ಬಣ್ಣಬಣ್ಣದ ಹಗ್ಗ, ಹುರಿ, ಬಾರಿಕೋಲುಗಳನ್ನು ಖರೀದಿಸುವ ಈ ಸಂತೆಯ ದಿನ ಹಗ್ಗಗಳ ವ್ಯಪಾರಸ್ಥರು ವ್ಯಾಪಾರವಿಲ್ಲದೆ ನಿರಾಸೆಗೊಳಗಾಗಿದ್ದರು.

ವ್ಯಾಪಾರವಿಲ್ಲದೆ ಭಣಗುಡುತ್ತಿದ್ದ ಅಂಗಡಿಗಳು 

ದೊಡ್ಡ ಪ್ರಮಾಣದಲ್ಲಿ ಹಣ್ಣ-ಹೂವಿನ ವ್ಯಾಪಾರ ನಡೆಯಬೇಕಾಗಿತ್ತು. ಆದರೆ, ಹಣ್ಣು ಹೂವಿನ ಅಂಗಡಿಗಳೂ ವ್ಯಾಪಾರವಿಲ್ಲದೆ ಭಣಗುಡುತ್ತಿದ್ದವು. ಬಟ್ಟೆಯಂಗಡಿಯಲ್ಲಂತೂ ವ್ಯಾಪಾರ ತೀರಾ ಕಡಿಮೆಯಾಗಿದ್ದು ಕಂಡು ಬಂದಿದೆ. ಹೀಗಾಗಿ ವ್ಯಾಪಾರಸ್ಥರ ಪಾಲಿಗೆ ಈ ದೀಪಾವಳಿ ಕಗ್ಗತ್ತಲ ದೀಪಾವಳಿ ಎಂಬಂತಾಗಿದೆ.

ನೆರೆ ಹಾವಳಿ ಕಾರಣ ಪೈರು ಕೈಕೊಟ್ಟಿರುವುರಿಂದ ರೈತ ನಿರಾಸೆಯಲ್ಲಿದ್ದಾನೆ. ನೆರೆಯಿಂದ ಬೆಳೆ ಹಾನಿಯಾಗಿ ಮತ್ತೆ ಹೊಸ ಪೈರು ಬಿತ್ತಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಮತ್ತೆ ಬಿಡಲಾರದ ಸುರಿಯುತ್ತಿರುವ ಮಳೆ ರೈತನ ಶಕ್ತಿ ಕುಂದಿಸಿದೆ.
ಕೃಷಿಕರು, ಕಾರ್ಮಿಕರ ಕೈಯಲ್ಲಿ ಹಣವಿಲ್ಲ. ಹೀಗಾಗಿ, ವ್ಯಾಪಾರವೂ ಇಲ್ಲ. ರೈತ ಸುಖವಾಗಿದ್ದರೆ ವ್ಯಾಪಾರಸ್ತನು ಸುಖಿಯಾಗಿರಬಲ್ಲ. ಇದು ತೀರ ರೈತ ಅವಲಂಬಿ ಪ್ರದೇಶವಾಗಿದ್ದರಿಂದ ನೆರೆ ಹಾವಳಿ ಕಾರಣ ರೈತ ನಷ್ಟದಲ್ಲಿರುವುದರಿಂದ ವ್ಯಾಪಾರವೂ ಕಷ್ಟವಾಗಿದೆ. ಕಳೆದ ಹತ್ತಾರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೀರಾ ಕನಿಷ್ಟವ್ಯಾಪಾರವಿದೆ ಎಂದು ಹಾನಗಲ್ಲನ ಜವಳಿ ವ್ಯಾಪಾರಸ್ಥರು ಮುರುಗೇಶ ಸಾಲವಟಗಿ ಅವರು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿಜವಾದ ವ್ಯಾಪಾರವಾಗುವುದೆ ಈ ವಾರದಲ್ಲಿ. ಎರಡು ಮೂರು ತಿಂಗಳು ಕಷ್ಟಪಟ್ಟು ಹಗ್ಗ, ಕಣ್ಣಿ, ಜತ್ತಿಗೆ, ಗೊಂಡೆ, ಜೂಲ ಮುಂತಾದ ಕೃಷಿ ಪರಿಕರಗಳನ್ನು ಸಿದ್ಧಪಡಿಸಿಕೊಂಡು ವ್ಯಾಪಾರಕ್ಕೆ ಬಂದಿದ್ದೇವೆ. ಆದರೆ ಶೇ. ನಾಲ್ಕೈದರಷ್ಟೂ ವ್ಯಾಪಾರವಿಲ್ಲದ್ದು ತುಂಬ ಬೇಸರವಾಗಿದೆ. ಅದರಲ್ಲೂ ಈ ದಿನವಿಡಿ ಮಳೆ ಸುರಿಯುತ್ತಿರುವುದರಿಂದ ರೈತರು ಇತ್ತ ಕಡೆ ಕಣ್ಣು ಸಹ ಹಾಕುತ್ತಿಲ್ಲ ಎಂದು ಕರಡಿಕೊಪ್ಪ ಗ್ರಾಮದ ಹಗ್ಗ ಕಣ್ಣಿ ವ್ಯಾಪಾರಸ್ಥ ಅನ್ವರಸಾಬ ಗಡಾದ ಅವರು ಹೇಳಿದ್ದಾರೆ. 
ಕಳೆದ ಎರಡ್ಮೂರು ತಿಂಗಳಿನಿಂದ ಹಣ್ಣುಗಳ ಬೆಲೆ ತೇಜಿಯಾಗಿ ವ್ಯಾಪಾರವಾಗಲಿಲ್ಲ. ಈಗ ಹಣ್ಣಿನ ಬೆಲೆ ಕಡಿಮೆ ಇದೆ. ನೆರೆ ಕಾರಣದಿಂದಾಗಿ ಕೊಳ್ಳುವವರಿಲ್ಲ. ಹಬ್ಬಕ್ಕಾಗಿ ಬೆಲೆ ವಿಚಾರಿಸದೆ ಹಣ್ಣು ಖರೀದಿಸುತ್ತಿದ್ದ ಈ ಹಬ್ಬ ಈ ಭಾರಿ ಅತ್ಯಂತ ಕಡಿಮೆ ವ್ಯಾಪಾರದ ಮೂಲಕ ನಿರಾಸೆ ತಂದೊಡ್ಡಿದೆ. ಇನ್ನು ಎರಡ್ಮೂರು ದಿನ ಅವಕಾಶವಿದೆ, ಕಾದು ನೋಡಬೇಕು ಎಂದು ಹಾನಗಲ್ಲನ ಹಣ್ಣಿನ ವ್ಯಾಪಾರಿ ಆಸೀಫ್‌ ಸಂಗೂರ ಅವರು ತಿಳಿಸಿದ್ದಾರೆ. 
 

PREV
click me!

Recommended Stories

ಹಾವೇರಿಯಲ್ಲಿ ಅಮಾನವೀಯ ಕೃತ್ಯ: ನಿಷೇಧವಿದ್ದರೂ ಮಲಗುಂಡಿಗೆ ಇಳಿದ ಕಾರ್ಮಿಕರು!
ಮುಖ್ಯರಸ್ತೆ ಅಗಲೀಕರಣ, ಭೂಮಾಲೀಕರಿಗೆ ₹ 1.5 ಕೋಟಿಗೂ ಅಧಿಕ ಮೊತ್ತದ ಪರಿಹಾರ ವಿತರಣೆ