ಹಾವೇರಿ: ನಿರಂತರ ಮಳೆಗೆ ಕಳೆಗುಂದಿದ ಮಾರುಕಟ್ಟೆ: ಸಂಕಷ್ಟದಲ್ಲಿ ಅನ್ನದಾತ

By Web Desk  |  First Published Oct 27, 2019, 8:36 AM IST

ದೀಪಾವಳಿ ಹಬ್ಬಕ್ಕೆ ಕಾಣದ ಸಂಭ್ರಮ| ತಯಾರಿಸಿದ ಹಣತೆ ನೀರುಪಾಲು|ಜನರನ್ನು ಸಂಕಷ್ಟಕ್ಕೆ ತಳ್ಳಿದ ಅತಿವೃಷ್ಟಿ, ಪ್ರವಾಹ| ದೀಪಾವಳಿ ಹಬ್ಬದಲ್ಲಿ ಸಂದಭ್ರದಲ್ಲಿ ಆಕಾಶಬುಟ್ಟಿ, ಪಟಾಕಿ ಕೇಳುವವರೇ ಇಲ್ಲ| ಮಹಾಮಳೆ ಸೃಷ್ಟಿಸಿದ ಅವಾಂತರದಿಂದಾಗಿ ಕುಂಬಾರರ ಬದುಕು ಬೀದಿಗೆ ಬಂದಂತಾಗಿದೆ|


ಹಾವೇರಿ(ಅ.27): ಹಿಂಗಾರು ಬೆಳೆ ರೈತರ ಕೈಗೆ ಬಂದು ದೀಪಗಳ ಹಬ್ಬ ಬಂತೆಂದರೆ ಎಲ್ಲಡೆ ಸಂಭ್ರಮ ಕಳೆಗಟ್ಟುತ್ತದೆ. ಆದರೆ, ಈ ಸಲ ಜಿಲ್ಲಾದ್ಯಂತ ಅತಿವೃಷ್ಟಿ, ಪ್ರವಾಹ ಆವರಿಸಿಕೊಂಡು ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಇದರಿಂದಾಗಿ ಹಳ್ಳಿಗಳಲ್ಲಿ, ನಗರದ ಮಾರುಕಟ್ಟೆಯಲ್ಲಾಗಲಿ ಹಬ್ಬದ ಸಂಭ್ರಮವೇ ಕಾಣುತ್ತಿಲ್ಲ.

ಕಳೆದ ಆಗಸ್ಟ್‌ನಲ್ಲಿ ಉಲ್ಬಣಿಸಿದ ನೆರೆ, ಅತಿವೃಷ್ಟಿಯಿಂದ ಸಾವಿರಾರು ಜನರು ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಸಾವಿರಾರು ಹೆಕ್ಟೇರ್‌ ಬೆಳೆ ಕೊಚ್ಚಿ ಹೋಗಿ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ಮತ್ತೆ ನಿರಂತರ ಸುರಿಯುತ್ತಿರುವ ಮಳೆಯ ಆರ್ಭಟದಿಂದ ಅಳಿದುಳಿದ ಬೆಳೆಯೂ ಕೊಳೆತು ಹಾನಿಯಾಗಿದೆ. ಮತ್ತೆ ಒಂದಷ್ಟು ಮನೆಗಳು ನೆಲಕಚ್ಚಿವೆ. ಹೀಗಾಗಿ ಈ ಬಾರಿ ದೀಪಾವಳಿಯ ಸಂಭ್ರಮ ಜಿಲ್ಲೆಯಲ್ಲಿ ಮರೆಯಾಗಿದೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರವಾಹ ಹಾಗೂ ಮಳೆಯಿಂದ ಮನೆ ಕಳೆದುಕೊಂಡವರು ಇನ್ನೂ ತಮ್ಮ ಸ್ವಂತ ಮನೆ ಕಟ್ಟಿಕೊಂಡಿಲ್ಲ. ಬಾಡಿಗೆ ಇಲ್ಲವೇ ಸಂಬಂಧಿಕರ ಮನೆಯಲ್ಲಿದ್ದಾರೆ. ಇನ್ನು ಕೆಲವರು ಸರ್ಕಾರ ನಿರ್ಮಿಸಿದ ತಗಡಿನ ಶೆಡ್‌ನಲ್ಲಿದ್ದಾರೆ. ಅಕ್ಷರಶಃ ಬದುಕಲ್ಲಿ ಕತ್ತಲು ಆವರಿಸಿರುವ ಇವರ ಜೀವನದಲ್ಲಿ ಈ ಬಾರಿಯ ದೀಪಾವಳಿ ಬೆಳಕು ತರುವ ಹಬ್ಬವಾಗಿ ಪರಿಣಮಿಸಿಲ್ಲ.

ಕಳೆದ ಆಗಸ್ಟ್‌ ತಿಂಗಳಲ್ಲಿ ವರದಾ, ಧರ್ಮಾ, ತುಂಗಭದ್ರಾ, ಕುಮದ್ವತಿ ನದಿಗಳು ಸೃಷ್ಟಿಸಿದ ನೆರೆಯಿಂದ 13 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡಿದ್ದವು. 1.30 ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಕೊಚ್ಚಿ ಹೋಗಿತ್ತು. ಇದರ ಬೆನ್ನಲ್ಲೆ ಮತ್ತೆ ಸುರಿಯುತ್ತಿರುವ ಮಹಾಮಳೆಯಿಂದ ಮತ್ತೆ ರೈತರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಹೀಗಾಗಿ ಯಾರಲ್ಲೂ ಹಬ್ಬದ ಸಂಭ್ರಮ, ಉತ್ಸಾಹ ಕಾಣದಾಗಿದೆ.

ಹಣತೆಗಳು ನೀರು ಪಾಲು:

ನೆರೆ, ಅತಿವೃಷ್ಟಿ ಬಾರದೆ ಇದ್ದರೆ ಈ ಹಬ್ಬಕ್ಕೆ ಹಣ್ಣು, ಹೂವು, ಬಾಳೆ ಬೃಹತ್‌ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿತ್ತು. ಮಣ್ಣಿನ ಹಣತೆಯಂತೂ ಭರಪೂರಾಗಿ ಮಾರಾಟವಾಗುತ್ತಿತ್ತು. ಆದರೆ, ಈ ಬಾರಿ ಮಹಾಮಳೆ ಸೃಷ್ಟಿಸಿದ ಅವಾಂತರದಿಂದಾಗಿ ಕುಂಬಾರರ ಬದುಕು ಬೀದಿಗೆ ಬಂದಂತಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ತಯಾರಿಸಿದ್ದ ಹಣತೆಗಳು, ಕುಂಬಾರರ ಭಟ್ಟಿ, ಹಣತೆ ತಯಾರಿಸುವ ಮಣ್ಣು ಎಲ್ಲವೂ ನೀರುಪಾಲಾಗಿವೆ. ಹೀಗಾಗಿ ಹಬ್ಬದಲ್ಲಿ ಎಲ್ಲರ ಮನೆ ಬೆಳಗುತ್ತಿದ್ದ ಕುಂಬಾರರ ಹಣತೆ ಮಣ್ಣು ಸೇರಿವೆ. ಈ ಜಾಗದಲ್ಲಿ ಪಿಂಗಾಣಿ ಹಣತೆಗಳು ಬಂದಿದ್ದು ಜನರು ಅನಿವಾರ್ಯವಾಗಿ ಅವುಗಳನ್ನೇ ಖರೀದಿಸುತ್ತಿದ್ದಾರೆ.

ವ್ಯಾಪಾರವೂ ಇಲ್ಲ:

ಬಡವರು, ರೈತರು ಸಂಕಷ್ಟದಲ್ಲಿರುವುದರಿಂದ ಈ ಬಾರಿ ಅಂಗಡಿ ವ್ಯಾಪಾರವೂ ಗಣನೀಯವಾಗಿ ಕುಸಿದಿದೆ. ಹೊಸಬಟ್ಟೆ, ಭರ್ಜರಿ ದಿನಸಿ ಖರೀದಿ ಇರಲಿಲ್ಲ. ದೀಪಾವಳಿ ಬಂತೆಂದರೆ ಸಾಕು ವಾರಗಟ್ಟಲೆ ಭರ್ಜರಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರು ಈ ಬಾರಿ ಗ್ರಾಹಕರ ಕೊರತೆ ಎದುರಿಸಿದರು. ಜನರು ಸಹ ಸಾಂಕೇತಿಕ ಹಬ್ಬ ಆಚರಣೆಗೆ ಬೇಕಾದಷ್ಟುಮಾತ್ರ ಸಣ್ಣ ಪ್ರಮಾಣದಲ್ಲಿ ಸಾಮಗ್ರಿ ಖರೀದಿಸಿದರು. ಒಂದಷ್ಟು ಜನರು ಸಾಲ ಮಾಡಿ ದೊಡ್ಡ ಹಬ್ಬ ಎನಿಸಿಕೊಳ್ಳುವ ದೀಪಾವಳಿ ಆಚರಣೆಯಲ್ಲಿ ತೊಡಗಿಕೊಂಡರು. ದೀಪಾವಳಿ ಹಬ್ಬದಲ್ಲಿ ಹೆಚ್ಚಾಗಿ ವ್ಯಾಪಾರವಾಗುತ್ತಿದ್ದ ಆಕಾಶಬುಟ್ಟಿ, ಪಟಾಕಿಯಂತೂ ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಈ ಬಾರಿ ನೌಕರರು, ಋಛ್ಜಮಂತರು ಮಾತ್ರ ಸಂಭ್ರಮದಲ್ಲಿ ಹಬ್ಬ ಆಚರಿಸುವಂತಾಗಿದೆ.

ಗ್ರಾಹಕರ ಕೊರತೆ:

ಪ್ರತಿವರ್ಷ ದೀಪಾವಳಿ ಮುನ್ನಾ ದಿನ ಮಾರುಕಟ್ಟೆಯಲ್ಲಿ ಜನದಟ್ಟಣೆಯಾಗಿರುತ್ತಿತ್ತು. ಎಲ್ಲ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿರುತ್ತಿತ್ತು. ಈ ಬಾರಿ ಮಳೆ ಇರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯತ್ತ ಸುಳಿಯಲೇ ಇಲ್ಲ. ಹೀಗಾಗಿ ಅಂಗಡಿಕಾರರು ಗ್ರಾಹಕರಿಗಾಗಿ ಕಾಯುತ್ತ ಕುಳಿತುಕೊಳ್ಳುವಂತಾಯಿತು. ನಗರದ ಜೆ.ಪಿ. ವೃತ್ತ, ಹಳೆ ಕೋರ್ಟ್‌ ಸರ್ಕಲ್‌, ಗಾಂಧಿ ವೃತ್ತದಲ್ಲಿ ಹಬ್ಬದ ನಿಮಿತ್ತ ಬಾಳೆಕಂಬ, ಕಬ್ಬು, ಬೂದುಗುಂಬಳಕಾಯಿ, ಮಹಾಲಿಂಗನ ಬಳ್ಳಿ, ಮಾವಿನಸೊಪ್ಪು, ತೋರಣ ಹಾಗೂ ಹೂವು, ಹಣತೆ, ಎತ್ತುಗಳಿಗೆ ಕಟ್ಟುವ ಹಗ್ಗ, ಝೂಲ ವ್ಯಾಪಾರಸ್ಥರು ಗ್ರಾಹಕರ ಕೊರತೆ ಎದುರಿಸಿದರು.
 

click me!