ಹಾವೇರಿ: ದೀಪಾವಳಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್!

By Web DeskFirst Published Oct 25, 2019, 8:40 AM IST
Highlights

325 ಕೋಟಿ ವೆಚ್ಚದಲ್ಲಿ ಮೆಡಿಕಲ್ ಕಾಲೇಜು | ಕೇಂದ್ರ ಸರ್ಕಾರದ ಪಾಲು 195ಕೋಟಿ ಮಂಜೂರಾತಿಗೆ ಕೇಂದ್ರ ಅನುಮೋದನೆ|

ಹಾವೇರಿ[ಅ.25]: ಹಾವೇರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ಒಪ್ಪಿಗೆ ನೀಡಿದ್ದು, ಉಳಿದ ಅನುದಾನ ನೀಡುವುದರ ಜತೆಗೆ ಸ್ಥಳ ಗೊಂದಲ ನಿವಾರಿಸಿ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಆರಂಭಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಬಿದ್ದಿದೆ. ಇಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಒಟ್ಟು 325ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.

ಕೇಂದ್ರದ ಪಾಲು ಶೇ. 60 ಹಾಗೂ ರಾಜ್ಯದ ಪಾಲು ಶೇ. 40 ರಂತೆ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುದಾನ ಬಿಡುಗಡೆಯಾಗಬೇಕಿದ್ದು, ಅದರಲ್ಲಿ ಕೇಂದ್ರ ಸರ್ಕಾರತನ್ನ ಪಾಲಿನ 195 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ. 2012ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಘೋಷಣೆಯಾಗಿ ನನೆಗುದಿಗೆ ಬಿದ್ದಿದ್ದ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಇದರಿಂದ ಮುಹೂರ್ತ ಕೂಡಿ ಬಂದಂತಾಗಿದೆ.

Latest Videos

ದೀಪಾವಳಿ ಗಿಫ್ಟ್: 

ಕೆಲವು ದಿನಗಳ ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾವೇರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಸ್ತು ಎಂದಿದ್ದರು. ಈಗ ದೀಪಾವಳಿಗೆ ಇನ್ನು ಕೆಲವೇ ದಿನ ಬಾಕಿ ಇರುವಂತೆ ಕೇಂದ್ರ ಸರ್ಕಾರ ಕಾಲೇಜು ಆರಂಭಕ್ಕೆ ಅಗತ್ಯವಿರುವ 195 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿರುವುದು ಜಿಲ್ಲೆಯ ಜನರಿಗೆ ದೀಪಾವಳಿ ಉಡುಗೊರೆ ಎಂದೇ ಬಣ್ಣಿಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಹಾವೇರಿಗೆ ಮೆಡಿಕಲ್‌ ಕಾಲೇಜು ಕೇವಲ ಭಾಷಣಕ್ಕೆ ಸೀಮಿತವಾಗಿತ್ತು. ಆಡಳಿತ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದವರು ಈ ಬಾರಿ, ಮುಂದಿನ ಬಾರಿ ಎನ್ನುತ್ತಲೇ ಕಾಲ ಕಳೆದಿದ್ದರು. 

7 ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಘೋಷಣೆ ಮಾಡಿ 2014 ರಲ್ಲಿಸಿದ್ದರಾಮಯ್ಯ ಅವರೂ ಮತ್ತೊಮ್ಮೆ ಘೋಷಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ಬಜೆಟ್‌ನಲ್ಲೂ ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಬಗ್ಗೆ ಹೇಳುತ್ತ ಬಂದರೂ ಬೇಡಿಕೆ ಈಡೇರಿರಲಿಲ್ಲ. ಅಂತೂ ಈಗ ಮೆಡಿಕಲ್ ಕಾಲೇಜಿನ ಕನಸು ನನಸಾಗುವ ಹಂತ ಬಂದಿದೆ. 

ಸ್ಥಳ ಗೊಂದಲ: 

ನಗರದ ಹೊರವಲಯದ ದೇವಗಿರಿಯಲ್ಲಾಪುರ ಬಳಿ ಜಿಲ್ಲಾಡಳಿತವು 53 ಎಕರೆ ಜಾಗವನ್ನು ಗುರುತಿಸಿದ್ದು, ಅದರಲ್ಲಿ 34 ಎಕರೆ ಜಾಗವನ್ನು ಮೆಡಿಕಲ್‌ಕಾಲೇಜಿಗೆ ಮೀಸಲಿಡಲಾಗಿದೆ. ಅಲ್ಲದೇ ಆ ಜಾಗಕ್ಕೆಸಂಬಂಧಿಸಿದ ಪಹಣಿಯಲ್ಲಿ ಮೆಡಿಕಲ್ ಕಾಲೇಜಿನ ಹೆಸರುನ ಮೂದಾಗಿದೆ. ಆದರೆ, ಈಚೆಗೆ ತಾಲೂಕಿನ ನೆಲೋಗಲ್ಲ ಗ್ರಾಮದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಇದರಿಂದ ಸ್ಥಳಗೊಂದಲ ಆರಂಭವಾಗಿದೆ. ತಜ್ಞರು ಈ ಬಗ್ಗೆ ಸ್ಥಳ ಪರಿಶೀಲಿಸಿ ಸೂಕ್ತವಾದ ಜಾಗವನ್ನು ಆಯ್ಕೆ ಮಾಡಲಿದ್ದಾರೆ. 

ಮೆಡಿಕಲ್ ಕಾಲೇಜು ಸ್ಥಾಪನೆಗೆ ಜಾಗದ ವಿಷಯದಲ್ಲಿ ಗೊಂದಲ ಬೇಡ. ಬಳಿಕ ಸಾಹಿತ್ಯ ಸಮ್ಮೇಳನದಂತಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಆದ್ದರಿಂದ ಸ್ಥಳದ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಎದುರಾಗದೇ ಸೂಕ್ತವಾದದ್ದನ್ನು ಆಯ್ಕೆ ಮಾಡಬೇಕಿದೆ. ರಾಜ್ಯ ಸರ್ಕಾರದ ಪಾಲು 130 ಕೋಟಿ ಬಿಡುಗಡೆಯಾಗಬೇಕಿದೆ. ಅಂತೂ ಬಿಜೆಪಿ ಘೋಷಣೆ ಮಾಡಿದ್ದ ಮೆಡಿಕಲ್ ಕಾಲೇಜನ್ನು ಇದೇ ಸರ್ಕಾರ ಬಂದ ಮೇಲೆ ಅನುಷ್ಠಾನಗೊಳಿಸುತ್ತಿರುವುದರಿಂದ ಕ್ರೆಡಿಟ್‌ ಪಡೆಯಲು ಅನುಕೂಲವಾಗಲಿದೆ. 5 ವರ್ಷ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಾಧ್ಯವಾಗದ್ದನ್ನು ನಾವು ಮಾಡಿದ್ದೇವೆ ಎಂದು ಬಿಜೆಪಿ ನಾಯಕರಿಗೆ ಹೇಳಿಕೊಳ್ಳಲು ಇದು ವಿಷಯವಾಗಲಿದೆ.

ಈ ಬಗ್ಗೆ ಮಾತನಾಡಿದ  ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಘೋಷಣೆಯಾಗಿ ನೆನೆಗುದಿಗೆ ಬಿದ್ದಿದ್ದ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಕೇಂದ್ರಸರ್ಕಾರ 195 ಕೋಟಿ ಅನುದಾನ ಬಿಡುಗಡೆಗೆ  ಒಪ್ಪಿಗೆ ನೀಡಿದೆ. ಹಿಂದಿನ ನಮ್ಮ ಸರ್ಕಾರ ಘೋಷಣೆ ಮಾಡಿದ್ದ ಕಾಲೇಜು ಆರಂಭಕ್ಕೆ ಈಗ ಮುಹೂರ್ತ ಕೂಡಿ ಬಂದಿದ್ದು, ರಾಜ್ಯದ ಪಾಲು 130 ಕೋಟಿ ಬಿಡುಗಡೆ ಮಾಡಲಾಗುವುದು. ತಜ್ಞರು ಗುರುತಿಸುವ ಜಾಗದಲ್ಲಿಯೇ ಶೀಘ್ರದಲ್ಲಿ ಕಾಲೇಜಿಗೆ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರ ನೀಡಿದ್ದಎಲ್ಲ ಭರವಸೆಗಳನ್ನುಈಡೇರಿಸುತ್ತಿದೆ. ಈಗ ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಎಲ್ಲ ಯೋಜನೆಗಳೂಅ ನುಷ್ಠಾನಗೊಳ್ಳುತ್ತಿದೆ. ಮೆಡಿಕಲ್ ಕಾಲೇಜಿಗೆ ಕೇಂದ್ರ ಅನುದಾನ ನೀಡಿದ್ದು, ಜಿಲ್ಲಾಡಳಿತ ಆದಷ್ಟು ಬೇಗ ಸ್ಥಳ ನೀಡಬೇಕು. ಬರುವ ವರ್ಷವೇ ಮೆಡಿಕಲ್ ಕಾಲೇಜು ಆರಂಭವಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ತಿಳಿಸಿದ್ದಾರೆ.

click me!