ಸಂಪ್ರದಾಯಕ ಎಮ್ಮೆಗಳ ಕರಿ ಬಿಡುವ ಕಾರ್ಯಕ್ರಮವನ್ನು ಗೌಳಿ ಸಮುದಾಯದವರು ಸಂಭ್ರಮದಿಂದ ಆಚರಿಸಿದರು| ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಕು ಎಮ್ಮೆಗಳನ್ನು ಅಲಂಕರಿಸಿ, ಅವುಗಳಿಗೆ ಸಂಪ್ರದಾಯದ ಪೂಜೆ| ಬಾಲಕರು ಎಮ್ಮೆಗಳನ್ನು ಜೋರಾಗಿ ಓಡುವಂತೆ ಪ್ರೇರೇಪಿಸುತ್ತ ಅವುಗಳ ಹಿಂದಯೇ ಓಡುತ್ತಿದ್ದರು|
ಗುತ್ತಲ[ಅ. 30]: ಸಂಪ್ರದಾಯಕ ಎಮ್ಮೆಗಳ ಕರಿ ಬಿಡುವ ಕಾರ್ಯಕ್ರಮವನ್ನು ಗೌಳಿ ಸಮುದಾಯದವರು ಮಂಗಳವಾರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಿತ್ಯದ ಜೀವನಕ್ಕೆ ಆರ್ಥಿಕ ಮೂಲವಾಗಿರುವ ತಮ್ಮ ಸಾಕು ಎಮ್ಮೆಗಳನ್ನು ದೀಪಾವಳಿಯ ಬಲಿಪಾಡ್ಯಮೆ ದಿನದಂದು ಸಂಜೆ ವೇಳೆ ಕರಿ ಬಿಡುವುದಕ್ಕೂ ಮುನ್ನ ಮನೆಯಲ್ಲಿ ಎಮ್ಮೆಗಳನ್ನು ಅಲಂಕರಿಸಿ, ಅವುಗಳಿಗೆ ಸಂಪ್ರದಾಯದ ಪೂಜೆಯನ್ನು ಮನೆ ಮಹಿಳೆಯರು ನೆರವೇರಿಸಿದ ನಂತರ ಅಲ್ಲಿಂದ ಅವುಗಳ ಓಟ ಪ್ರಾರಂಭವಾಗುತ್ತದೆ. ಪ್ರತಿಯೊಬ್ಬ ಗೌಳಿ ಸಮುದಾಯದವರು ತಮ್ಮ ಸಾಕು ಎಮ್ಮೆಗಳನ್ನು ಬೀದಿಗಳಲ್ಲಿ ಓಡಿಸುತ್ತಿದ್ದರೆ ಆಬಾಲ ವೃದ್ದರಾದಿಯಾಗಿ ಈ ಓಟವನ್ನು ಕಣ್ಣಾರೆ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೆ ಬಾಲಕರು ಎಮ್ಮೆಗಳನ್ನು ಜೋರಾಗಿ ಓಡುವಂತೆ ಪ್ರೇರೇಪಿಸುತ್ತ ಅವುಗಳ ಹಿಂದಯೇ ಓಡುತ್ತಿದ್ದರು.
ಅನಾದಿ ಕಾಲದಿಂದಲೂ ನಮ್ಮ ಸಂಪ್ರದಾಯವನ್ನು ನಾವು ಹೆಮ್ಮೆಯಿಂದ ನೆರವೇರಿಸುತ್ತಲಿದ್ದೇವೆ. ನಮ್ಮ ಪೂರ್ವಜರು ನಮಗೆ ಆರ್ಥಿಕ ಮೂಲವಾಗಿರುವ ಎಮ್ಮೆಗಳನ್ನು ದೀಪಾವಳಿಯ ಬಲಿ ಪಾಡ್ಯಮೆ ದಿನದಂದು ಪೂಜೆಸುವ ಹಾಗೂ ಅವುಗಳಿಗೆ ಕರಿ ಬೀಡುತ್ತಿದ್ದ ಸಂಪ್ರದಾಯಂತೆ ನಡೆದುಕೊಳ್ಳುತ್ತಿದ್ದೇವೆ. ಪ್ರತಿ ವರ್ಷವೂ ಸಹ ದೀಪಾವಳಿ ಹಬ್ಬದ ಬಲಿಪಾಡ್ಯಮೆ ದಿನ ನಾವುಗಳ ಎಲ್ಲ ಎಮ್ಮೆಗಳನ್ನು ಸಂಪ್ರದಾಯವಾಗಿ ಪೂಜೆಸಿ ಈ ಕಾರ್ಯಕ್ರಮವನ್ನು ಮಾಡುತ್ತವೆ. ಇದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ಭಾವನೆ ನಮ್ಮದು ಎಂದು ಗೌಳಿ ಸಮುದಾಯದ ತುಕಾರಮ ಗೌಳಿ ಹಾಗೂ ಸಹೋದರ ಮಂಜುನಾಥ ಗೌಳಿ ಹೇಳಿದರು.
ಒಟ್ಟಿನಲ್ಲಿ ಪಟ್ಟಣದ ಗೌಳಿ ಸಮಾಜದ ಬಾಂಧವರು ತಮ್ಮ ಸಾಂಪ್ರದಾಯಿಕ ಎಮ್ಮೆಗಳ ಕರಿ ಬೀಡುವ ಕಾರ್ಯಕ್ರಮದಿಂದ ಭಾರತೀಯ ಭವ್ಯ ಪರಂಪರೆಯನ್ನು ನಡೆಸುತ್ತಿರುವುದು ಸಂತಸದ ವಿಷಯವಾಗಿದ್ದು, ಇದರಿಂದ ಗ್ರಾಮೀಣ ಸೊಗಡಿನ ನೂರಾರು ಎಮ್ಮೆಗಳ ಓಟದ ಈ ಕರಿ ಬಿಡುವ ಕಾರ್ಯಕ್ರಮ ಎಲ್ಲರಿಗೂ ಮನೋರಂಜನೆ ಒದಗಿಸಿತು.
ಈ ಸಂದರ್ಭದಲ್ಲಿ ಶಂಕ್ರಪ್ಪ ಗೌಳಿ, ಗಣೇಶ ಗೌಳಿ, ಹಾಲೇಶ ಮೇಡ್ಲೆರಿ, ನಿಂಗಪ್ಪ ಗೌಳಿ, ಷಣ್ಮುಕ ಗೌಳಿ, ಶರಣಪ್ಪ ಗೌಳಿ, ಪ್ರಶಾಂತ ಗೌಳಿ, ಪುಟ್ಟಪ್ಪ ಗೌಳಿ ಸೇರಿದಂತೆ ಗೌಳಿ ಸಮುದಾಯದ ಅನೇಕರು ಅವರವರ ಎಮ್ಮೆಗಳಿಗೆ ಮಾಡಿದ್ದ ಅಲಂಕಾರ ಸೇರಿದ್ದ ಜನರ ಗಮನ ಸೆಳೆಯಿತು.