ರಾಜ್ಯ ಸರ್ಕಾರಕ್ಕೆ ಎರಡು ತಿಂಗಳು ಸಮಯಾವಕಾಶ ನೀಡಲಾಗಿದೆ|. 15 ದಿನದಿಂದ ಒಂದು ತಿಂಗಳೊಳಗೆ ಪರಿಹಾರ ದೊರಕಿಸಿಕೊಡಬೇಕು ಎಂದ ಎಚ್.ಡಿ.ಕುಮಾರಸ್ವಾಮಿ| ಸರ್ಕಾರಕ್ಕೆ ಸಮಯ ಕೊಡುತ್ತಿದ್ದೇನೆ. ಅದಕ್ಕಾಗಿ ಇದುವರೆಗೆ ಕಠಿಣ ಪದಬಳಕೆ ಮಾಡಿಲ್ಲ| ಜನರ ನಿರೀಕ್ಷೆಗಳನ್ನು ಮುಟ್ಟುವ ದಿಸೆಯಲ್ಲಿ ಸಲಹೆ ಮಾತ್ರ ನೀಡಿದ್ದೇನೆ ಟೀಕೆ ಮಾಡುವುದರಿಂದ ಜನರಿಗೆ ಪರಿಹಾರ ಸಿಗಲ್ಲ| ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ|
ಹಾವೇರಿ(ಅ.29): ಯಾವುದೇ ಸರ್ಕಾರ ಇದ್ದರೂ ರಾತ್ರೋ ರಾತ್ರಿ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ. ಸರ್ಕಾರಕ್ಕೆ ಎರಡು ತಿಂಗಳು ಸಮಯಾವಕಾಶ ನೀಡಲಾಗಿದೆ. ಇನ್ನು ಮತ್ತೆ ಸಮಯ ನೀಡಲು ಆಗದು. 15 ದಿನದಿಂದ ಒಂದು ತಿಂಗಳೊಳಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಸಮಯ ಕೊಡುತ್ತಿದ್ದೇನೆ. ಅದಕ್ಕಾಗಿ ಇದುವರೆಗೆ ಕಠಿಣ ಪದಬಳಕೆ ಮಾಡಿಲ್ಲ. ಜನರ ನಿರೀಕ್ಷೆಗಳನ್ನು ಮುಟ್ಟುವ ದಿಸೆಯಲ್ಲಿ ಸಲಹೆ ಮಾತ್ರ ನೀಡಿದ್ದೇನೆ. ಟೀಕೆ ಮಾಡುವುದರಿಂದ ಜನರಿಗೆ ಪರಿಹಾರ ಸಿಗಲ್ಲ. ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆಲವರು ಸಾರ್ವತ್ರಿಕ ಚುನಾವಣೆಯ ಹಂಬಲದಲ್ಲಿದ್ದಾರೆ. ನೆರೆಯಿಂದ ಅಪಾರ ಹಾನಿಯಾಗಿದೆ. ಅವರಿಗೆ ಬದುಕು ಕಟ್ಟಿಕೊಡುವ ಸವಾಲಿರುವಾಗ ಚುನಾವಣೆ ಬೇಡ ಎಂದಿದ್ದೇನೆ. ಇದನ್ನೇ ನನಗೆ ಬಿಜೆಪಿ ಪರ ಒಲವಿದೆ ಎಂದು ಅರ್ಥೈಸುವ ಅಗತ್ಯವಿಲ್ಲ. ನಾನು ಯಾವ ದೃಷ್ಟಿಕೋನದಲ್ಲಿ ಹೇಳಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ 13 ಜಿಲ್ಲೆಗಳಲ್ಲಿ ನೆರೆಯಿಂದ ಜನರ ಬದುಕು ದುಸ್ತರವಾಗಿದ್ದು, ಅವರಿಗೆ ಬದುಕು ಕಟ್ಟಿಕೊಡುವ ಈ ಸಂದರ್ಭದಲ್ಲಿ ಚುನಾವಣೆಗೆ ಹೋದರೆ ಸಂತ್ರಸ್ತರ ಬದುಕಿನಲ್ಲಿ ಚೆಲ್ಲಾಟವಾಡಿದಂತಾಗುತ್ತದೆ ಎಂದರು.
ಎನ್‌ಡಿಆರ್‌ಎಫ್ ಮಾರ್ಗಸೂಚಿ ಬದಿಗಿಡಿ:
ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಪರಿಹಾರ ವಿತರಣೆ ಕುರಿತು ಆಗುತ್ತಿರುವ ಸಮಸ್ಯೆ ಬಗ್ಗೆಯೂ ಸರ್ಕಾರಕ್ಕೆ ಸೂಕ್ತ ಸಲಹೆ ನೀಡುತ್ತೇನೆ. ಅದಕ್ಕಾಗಿ ಸಿಎಂ ಭೇಟಿಗೆ ಸಮಯ ತೆಗೆದುಕೊಂಡು ಪರಿಹಾರ ವಿತರಣೆಯಲ್ಲಾಗುತ್ತಿರುವ ಅನ್ಯಾಯ ಸರಿಪಡಿಸಿಕೊಳ್ಳಲು ಮನವರಿಕೆ ಮಾಡಿಕೊಡಲು ಪ್ರಯತ್ನ ಮಾಡುತ್ತೇನೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ಕೊಟ್ಟರೆ ಅದು ಯಾವುದಕ್ಕೂ ಸಾಲದು. ಎನ್‌ಡಿಆರ್‌ಎಫ್ ಮಾರ್ಗಸೂಚಿ ಬದಿಗಿಟ್ಟು ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗಿದೆ. ಬದುಕಿಗೆ ಅನುಕೂಲವಾಗುವಂತೆ ಪರಿಹಾರ ಹೆಚ್ಚಿಸಬೇಕಾಗಿದೆ ಎಂದರು.
ಆಯೋಗದ ಹಿಂದೆ ಬೇರೆ ಶಕ್ತಿ:
ಕೇಂದ್ರ ಚುನಾವಣಾ ಆಯೋಗ ರಾಜ್ಯದ ಉಪಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿ ತೆಗೆದುಕೊಂಡ ನಿಲುವು ನೋಡಿದಾಗ ಅದು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಯಾರು ಬೇಕಾದರೂ ಹೇಳುತ್ತಾರೆ. ಆಯೊಗದ ಕಾರ್ಯವೈಖರಿ ಕಾಣದ ಶಕ್ತಿಗಳ ಸೂಚನೆ ಮೇರೆಗೆ ನಡೆಯುತ್ತಿದೆ. ಜವಾಬ್ದಾರಿ ನಿರ್ವಹಣೆ ಮಾಡುವಲ್ಲಿ ಎಡವಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ ಎಂದು ಸಿದ್ದರಾಮಯ್ಯ ನನ್ನ ಮೇಲೆ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಒಬ್ಬ ಜಾತ್ಯತೀತ ನಾಯಕರಾಗಿದ್ದವರು. ಜಾತಿ ಹೆಸರಲ್ಲಿ ನಾಯಕರ ಹಿಂದೆ ಬೆಂಬಲ ಇದೆಯೋ ಇಲ್ಲವೋ ಎಂದು ಚಿಂತನೆಯ ಸಣ್ಣತನ ಪ್ರದರ್ಶನದಿಂದಲೇ ಅವರೊಬ್ಬ ಜಾತ್ಯತೀತ ವ್ಯಕ್ತಿಯೋ, ಕೋಮುವಾದಿಯೋ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧ್ಯಕ್ಷ ಅಶೋಕ ಬೇವಿನಮರ, ಡಾ. ಸಂಜಯ ಡಾಂಗೆ, ಮಹಾಂತೇಶ ಬೇವಿನಹಿಂಡಿ ಇದ್ದರು.
ಜನರ ಪ್ರೀತಿ, ವಿಶ್ವಾಸ ಸಂಪಾದಿಸಿದ್ದೇನೆ:
ನನ್ನ ಮೇಲೆ ಯಾರು ದಾಳಿ ಮಾಡುತ್ತಾರೆ? ನಾನು ಅಧಿಕಾರದಲ್ಲಿದ್ದಾಗ ಜನರ ಪ್ರೀತಿ, ವಿಶ್ವಾಸವನ್ನು ಸಂಪಾದನೆ ಮಾಡಿದ್ದೇನೆ. ಇದರ ಮೇಲೆ ಐಟಿ ದಾಳಿ ನಡೆಸುತ್ತಾರಾ? ನಾನೇನು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದೇನೆಯೇ. ಮನೆಗೆ ಬಂದರೆ ಐಟಿ ದಾಳಿ ಮಾಡಿದರೆ ನನ್ನ ದಾಖಲೆ ಏನೂ ಸಿಗಲ್ಲ. ಸಿಕ್ಕರೆ ಬಿಜೆಪಿ ನಾಯಕರ ದಾಖಲೆ ಸಿಗುತ್ತದೆ. ಯಾವ ಟ್ಯಾಪಿಂಗ್ ಇರಲಿ ಯಾವುದೂ ಕುಮಾರಸ್ವಾಮಿಯನ್ನು ಏನೂ ಮಾಡಲು ಆಗಲ್ಲ ಎಂದರು.
ಸುವರ್ಣ ನ್ಯೂಸ್‌ನಲ್ಲಿ ನನ್ನ ಬಗ್ಗೆ ಎಪಿಸೋಡ್
ಸುವರ್ಣ ನ್ಯೂಸ್‌ನಲ್ಲಿ ನನ್ನ ಬಗ್ಗೆ ಏನೋ ಎಡಿಸೋಡ್ ಮಾಡಿದ್ದಾರೆ. ಫೋನ್ ಟ್ಯಾಪಿಂಗ್, ಐಎಂಎ ಮುಂತಾದ ಹಗರಣಗಳಲ್ಲಿ ಸಿಲುಕುವ ಸಾಧ್ಯತೆಯಿದೆ, ಅದೇ ಭಯದಲ್ಲಿ ಬಿಜೆಪಿ ಪರ ಮೃಧು ಧೋರಣೆ ತಾಳಿದ್ದಾಗಿ ಹೇಳುತ್ತಿದ್ದಾರೆ. ನನಗೆ ಯಾವ ಹೆದರಿಕೆಯೂ ಇಲ್ಲ. ಯಾವ ದಾಳಿ ನಡೆದರೂ ಅಂಜಿಕೆಯಿಲ್ಲ ಎಂದು ಕುಮಾರಸ್ವಾಮಿ ಪ್ರಸ್ತಾಪಿಸಿದರು.
15 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ:
ಬಿ.ಸಿ. ಪಾಟೀಲ ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ಮೈತ್ರಿ ಸರ್ಕಾರದ ಅವಧಿಯಲ್ಲಿ ಹಿರೇಕೆರೂರು ಕ್ಷೇತ್ರಕ್ಕೆ 147 ಕೋಟಿಗಳ ಯೋಜನೆಗೆ ಅನುದಾನ ಕೊಟ್ಟಿದ್ದೇನೆ. ಆದರೂ ಬಿಜೆಪಿಯೊಂದಿಗೆ ಏನೋ ಸಾಧನೆ ಮಾಡುತ್ತೇನೆ ಎಂದು ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರು ಮುಂಬೈ ಹೋಟೆಲ್‌ನಲ್ಲಿದ್ದಾಗ ಅವರಿಗೆ ಹಣದ ಆಮಿಷ ಒಡ್ಡಿಲ್ಲ. ಮೊದಲು ನಮ್ಮ ಜೊತೆಗೇ ಇದ್ದವರು ಎಂಬ ಕಾರಣಕ್ಕೆ ಮಾತನಾಡಿದ್ದೇನೆ. ಉಪಚುನಾವಣೆಯಲ್ಲಿ ಹಿರೇಕೆರೂರು, ರಾಣಿಬೆನ್ನೂರು ಸೇರಿದಂತೆ ಎಲ್ಲ 15 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಜೆಡಿಎಸ್ ಗೆದ್ದಿದ್ದ ಮೂರು ಕ್ಷೇತ್ರ ಸೇರಿದಂತೆ ಕನಿಷ್ಠ 7-8 ಕಡೆ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಡವಳಿಕೆಯಿಂದ ಬೇಸತ್ತಿದ್ದಾರೆ:
ಬಿಜೆಪಿಯವರು ಈಗಿನ ನಡವಳಿಕೆ ನೋಡಿದರೆ ಉಪಚುನಾವಣೆ ನಡೆಯುವ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿಗೆ ಕಷ್ಟವಿದೆ. ಜನ ಬಿಜೆಪಿ ನಡವಳಿಕೆ ನೋಡಿ ಬೇಸತ್ತಿದ್ದಾರೆ. ಉಪಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅವರು ಹೇಳಿದರು.