ಕನ್ನಡ ಕಟ್ಟಿದವರು: ಕ್ಷೌರಿಕ ವೃತ್ತಿ ಮಾಡುತ್ತಲೇ ಕನ್ನಡ ಪರಿಚಾರಕರಾಗಿರುವ ಪವನ್!

By Kannadaprabha NewsFirst Published Nov 12, 2019, 11:29 AM IST
Highlights

ಕನ್ನಡ ಕಟ್ಟುವ ಕೆಲಸ ಯಾವುದೇ ರೀತಿಯಲ್ಲೂ ನಡೆಯಬಹುದು. ಅದಕ್ಕೆ ಸಾಕ್ಷಿ ಈ ಪವನ್ ಆಲೂರು. ಮಕ್ಕಳು ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿಯಲು ಅವರು ಪ್ರೋತ್ಸಾಹಿಸುತ್ತಿದ್ದಾರೆ. ತಮ್ಮ ಸೆಲೂನ್‌ಗೆ ಬರುವವರಿಗೆ ಕನ್ನಡ ಪ್ರೇಮದ ಪಾಠ ಹೇಳುತ್ತಾರೆ. ಇಂಥವರು ಎಲ್ಲಾ ಊರಲ್ಲೂ ಇದ್ದರೆ ಎಷ್ಟು ಚೆಂದ.

ಪ್ರಸ್ತುತ ದಿನಗಳಲ್ಲಿ ನವೆಂಬರ್ ಬಂದರೆ ಸಾಕು ಕನ್ನಡ ಭಾಷೆ ಉಳಿಸಿ, ಬೆಳೆಸುವ ಕುರಿತು ಉದ್ದುದ್ದ ಭಾಷಣಗಳು ಆರ್ಭಟಿಸುತ್ತವೆ. ಆದರೆ ಇಲ್ಲೊಬ್ಬರು ನವೆಂಬರ್‌ನಲ್ಲಿ ಮಾತ್ರವೇ ಅಲ್ಲ ವರ್ಷದುದ್ದಕ್ಕೂ ಎಲೆ ಮರೆಯ ಕಾಯಿಯಂತೆ ಕನ್ನಡಾಂಬೆಯ ಸೇವೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಯಾವುದೇ ಪ್ರಚಾರ, ಪ್ರತಿಫಲಾಪೇಕ್ಷೆ ಇಲ್ಲದೇ ಇವರು ಮಾಡುತ್ತಿರುವ ಕನ್ನಡ ಸೇವೆ ನಿಜಕ್ಕೂ ಆದರ್ಶ ಮತ್ತು ಅನುಕರಣೀಯವೇ.

ಹಾಸನ ಜಿಲ್ಲೆ ಆಲೂರು ಪಟ್ಟಣದಲ್ಲಿ ಪುಟ್ಟ ಅಂಗಡಿಯೊಂದನ್ನು ಇಟ್ಟುಕೊಂಡು ಕ್ಷೌರಿಕ ವೃತ್ತಿ ಮಾಡುವ ಪವನ್ ಆಲೂರು ಕಾಯ, ವಾಚಾ, ಮನಸಾ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತಿಯೂ ಆಗಿರುವ ಅವರು ತಮ್ಮ ಅಂಗಡಿಗೆ ಬಂದವರಿಗೆ ಮಾತ್ರವೇ ಹೊರಗೆ ಕೂಡ ಕನ್ನಡದ ಮಹತ್ವವನ್ನು ಸಾರುತ್ತಿದ್ದಾರೆ. ಕನ್ನಡ ಶಾಲೆ ಉಳಿಸಬೇಕು ಎಂಬುದು ಬಹುತೇಕ ಘೋಷಣೆಗೆ ಸೀಮಿತವಾಗಿರುವ ದುಸ್ಥಿತಿಯಲ್ಲಿ ಪೋಷಕರನ್ನು ಭೇಟಿ ಮಾಡಿ ತಮ್ಮ ಮಕ್ಕಳನ್ನು ಕಾನ್ವೆಟ್ ಬಿಡಿಸಿ, ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವೊಲಿಸುವಲ್ಲಿ ಯಶಸ್ವಿ ಆಗುತ್ತಿದ್ದಾರೆ.

ಕನ್ನಡ ಕಟ್ಟಿದವರು: ಐಸೆಲ್ ಟೆಕ್ನಾಲಜಿಸ್‌ನಿಂದ ಕನ್ನಡ ಮಕ್ಕಳಿಗೆ ಪಾಠ!

ಸುಮಾರು 10 ಕ್ಕೂ ಹೆಚ್ಚು ಮಕ್ಕಳನ್ನು ಆಂಗ್ಲ ಕಾನ್ವೆಂಟ್ ಬಿಡಿಸಿ ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿದ್ದಾರೆ. ಅಲ್ಲದೇ ತಮ್ಮ ಅಂಗಡಿಗೆ ಬರುವ ಪ್ರತಿಯೊಬ್ಬರಿಗೂ ಕನ್ನಡ ಭಾಷೆಯ ಇತಿಹಾಸ ಮತ್ತಿತರ ವಿಷಯಗಳ ಬಗ್ಗೆ ಹೇಳಿ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಹುಟ್ಟುವಂತೆ ಮಾಡುವಂತೆ ಮಾಡಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಪವನ್ ಇಡೀ ಶಿಕ್ಷಣವನ್ನೇ ಕನ್ನಡ ಮಾಧ್ಯಮದಲ್ಲಿ ಪಡೆಯಿರಿ ಎಂದು ಹೇಳುತ್ತಿಲ್ಲ. ಆದರೆ 1 ರಿಂದ 7 ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಓದಿಸಿ. ಹಾಗೇ ಓದಿದ ನಂತರದಲ್ಲಿ ಯಾವುದೇ ಭಾಷೆಯನ್ನು ಕಲಿಯಲು ಸುಲಭವಾಗುತ್ತದೆ. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರೇ ಬೇರೆ ಭಾಷೆಗಳನ್ನು ಸುಲಭವಾಗಿ ಕಲಿತು ಅಭಿವೃಕ್ತಿಸಲು ಸಾಧ್ಯವಾಗುತ್ತದೆ ಎಂಬುದು ಅವರ ನಿಲುವಾಗಿದೆ.

ವಚನಗಳನ್ನು ಹೇಳುವುದು

ಪವನ್ ಅವರು ಕನ್ನಡದ ಮಹತ್ವವನ್ನು ಸಾರುವ ವಚನಗಳನ್ನು ಸಹ ಅಂಗಡಿಗೆ ಬಂದವರಿಗೆ ಹೇಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಅವರ ವಚನಸಾಲುಗಳು ಕನ್ನಡ ಭಾಷೆಯ ಮಹತ್ವವನ್ನು ಸಾರಿ ಹೇಳುತ್ತದೆ ಉದಾಹರಣೆಗೆ...
ರಾಹುಕೇತು ಅಡ್ಡಗಟ್ಟಿಸಿ
ನುಡಿಯ ಬೇಡವೆಂದರೂ ನುಡಿವೆ,
ಕನ್ನಡ ಪದವ.
ಗಗನ ಮಾರ್ಗದಿ ಸಿಡಿಲ್ ಬಡಿದರೂ
ರೌದ್ರತೆಯ ಪಟಿಸುವೆ
ಕನ್ನಡ ಪದವ.
ಮುಳ್ಳ ಮೇಲೆ ನನ್ನನ್ನಾಕಿ ದೂಡಿದರೂ
ಮುಳ್ಳೊಳ ಗುಲಾಬಿಯಾಗಿ ತರುವ
ಕನ್ನಡ ಪದವ’

ಹೀಗೆ ತಮ್ಮದೇ ಶೈಲಿಯಲ್ಲಿ ರಚಿಸಿರುವ ವಚನಗಳನ್ನು ಹಾಡಿನ ರೂಪದಲ್ಲಿ ಅಂಗಡಿಗಳಿಗೆ ಬಂದವರ ಬಳಿ ಹಾಡುತ್ತಾರೆ. ಸದ್ಯದಲ್ಲೇ ಪವನ್, ತಮ್ಮ ಅಂಗಡಿಯಲ್ಲಿ ದ.ರಾ. ಬೇಂದ್ರೆ, ಕುವೆಂಪು ಮತ್ತಿತರ ಸಾಹಿತಿಗಳು ಕನ್ನಡದ ಏಳಿಗೆ, ಉಳಿವಿನ ಬಗ್ಗೆ ಬರೆದು ಕವನಗಳನ್ನು ಆಧರಿಸಿದ ಹಾಡುಗಳನ್ನು ನಿರಂತರವಾಗಿ ಹಾಕುವ ಮತ್ತು ಖ್ಯಾತ ಸಾಹಿತಿಗಳ ಭಾವಚಿತ್ರಗಳು, ಕನ್ನಡ ಭಾಷೆ ಕುರಿತ ಘೋಷಣೆ ವಾಕ್ಯಗಳನ್ನು ಅಂಗಡಿಯನ್ನು ಹಾಕಲು ಮುಂದಾಗಿದ್ದಾರೆ.

ಕನ್ನಡ ಕಟ್ಟಿದವರು: ಯಕ್ಷ ರಂಗದ ಜನಪ್ರಿಯ ತಾರೆ ಪಟ್ಲ ಸತೀಶ್ ಶೆಟ್ಟಿ!

ವೃತ್ತಿಯಲ್ಲಿ ಕ್ಷೌರಿಕನಾಗಿ ಪ್ರವೃತ್ತಿಯಲ್ಲಿ ಸಾಹಿತ್ಯ ಮತ್ತು ಕನ್ನಡ ಸೇವೆ ಮಾಡುತ್ತಾ ಕಾವ್ಯ, ಕಥೆ, ಕಾದಂಬರಿ, ವಚನ, ಚುಟುಕು ಇತ್ಯಾದಿ ಪ್ರಕಾರಗಳಲ್ಲಿ ತಮ್ಮ ಪಾಡಿಗೆ ತಾವು ಸದ್ದಿಲ್ಲದೆ ತೊಡಗಿಸಿಕೊಂಡಿದ್ದಾರೆ. 1985 ಜುಲೈ 12ರಂದು ಆಲೂರು ಪಟ್ಟಣದ ಚಂದ್ರಶೇಖರ ಹಾಗೂ ಶ್ರೀಮಂತಿ ಶಿವಶಂಕರಮ್ಮ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದ ಅವರು ಪದವಿ, ಐಟಿಐ
ವ್ಯಾಸಂಗ ಮಾಡಿದ್ದಾರೆ.

ಯಾವುದೇ ಸರ್ಕಾರಿ ನೌಕರಿ ಹುಡುಕದೇ ತಮ್ಮ ಕಸುಬಾದ ಕ್ಷೌರಿಕ ವೃತ್ತಿಯಲ್ಲಿ ತಂದೆಗೆ ಸಹಾಯ ಮಾಡುತ್ತಾ, ಕಳೆದ ಏಳು ವರ್ಷಗಳಿಂದ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮಿಂಚು ಮಿಥುನ’ ಎನ್ನುವ ಕವನ ಸಂಕಲನವನ್ನು 2014ರಲ್ಲಿ ಪ್ರಕಟಿಸಿದ್ದಾರೆ. ಸದ್ಯ ಐದಾರು ಕೃತಿಗಳು ಮುದ್ರಣಕ್ಕೆ ಸಿದ್ದವಾಗಿವೆ. ವಿರಾಮದ ಸಮಯದಲ್ಲಿ 1ಕವಿಗೋಷ್ಠಿಗಳು ಹಾಗೂ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಕವಿತೆಗಳನ್ನು ವಾಚಿಸಿ ಮೆಚ್ಚುಗೆ ಗಳಿಸಿದ್ದಾರೆ.

ಕನ್ನಡ ಕಟ್ಟಿದವರು: ಉಚಿತವಾಗಿ ಕನ್ನಡ ಸುದ್ದಿ ಪತ್ರಿಕೆ ಹಂಚುವ ಪೇಪರ್ ಆಚಾರ್ಯ!

500ಕ್ಕೂ ಹೆಚ್ಚು ಕವಿತೆಗಳನ್ನು, ಹತ್ತಾರು ಕಥೆಗಳನ್ನು, ನೂರಾರು ವಚನಗಳನ್ನು, ಹಲವು ಬಿಡಿ ಲೇಖನಗಳನ್ನು, ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ಆದರೆ ಮುದ್ರಣ ಮಾಡಲು ಸಾಧ್ಯವಾಗದೇ ಇನ್ನೂ ಹಸ್ತಪ್ರತಿಯಲ್ಲಿಯೇ ಇವೆ. ಇಂತಹ ಪ್ರತಿಭಾನ್ವಿತ ಸಾಧಕನಿಗೆ ಸಮಾಜದ ನೆರವು ಬೇಕಿದೆ. ಏನೇ ಇರಲಿ. ನವೆಂಬರ್ ತಿಂಗಳ ಕನ್ನಡ ಹೋರಾಟಗಾರರಾಗಿ, ಆಗ ಮಾತ್ರ ಕನ್ನಡಾಭಿಮಾನ ಮರೆತು ಬಿಡುವವರಿಗೆ ಆಲೂರು ಪವನ್ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ.

click me!