ಕೊರೋನಾ ವಿರುದ್ಧ ಸುಸ್ಥಿರ ರೋಗ ನಿರೋಧಕ ಶಕ್ತಿ ನೀಡುವ ಮೊದಲ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಕಟಿಸಿದ್ದಾರೆ.
ವ್ಯಾಕ್ಸಿನ್ ಕಂಡುಹಿಡಿಯಲು ಹರಸಾಹಸ ಪಟ್ಟ ಎಲ್ಲರಿಗೂ ಪುಟಿನ್ ಧನ್ಯವಾದ ಹೇಳಿದ್ದಾರೆ.
ಅಲ್ಲದೆ ಪುಟಿನ್ರ ಇಬ್ಬರು ಮಕ್ಕಳಲ್ಲಿ ಒಬ್ಬ ಪುತ್ರಿಗೆ ಈ ಲಸಿಕೆ ಕೊಡಲಾಗಿದ್ದು ಆಕೆ ಆರೋಗ್ಯವಾಗಿದ್ದಾಳೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದ ಗಮಲೆಯಾ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಈ ಲಸಿಕೆ ಕಂಡುಹಿಡಿಯಲಾಗಿದೆ. ಇದನ್ನ ವಾಲಂಟಿಯರ್ಸ್ಗಳಿಗೆ ಇಂಜೆಕ್ಟ್ ಮಾಡಲಾಗಿದ್ದು ಲಸಿಕೆ ಪಡೆದ ಎಲ್ಲರಲ್ಲೂ ರೋಗನಿರೋಧಕ ಶಕ್ತಿ ಹೆಚ್ಚಿದೆ ಎಂದು ಹೇಳಲಾಗಿದೆ.
ಜೂನ್ 18ರಂದು ಪ್ರಾರಂಭವಾದ ಲಸಿಕೆಯ ಪ್ರಯೋಗದಲ್ಲಿ 38 ಸ್ವಯಂಸೇವಕರು ಪಾಲ್ಗೊಂಡಿದ್ದರು. ಇವರಲ್ಲಿ ಮೊದಲ ಗುಂಪಿನ ಸದಸ್ಯರಿಗೆ ರೋಗನಿರೋಧಕ ಶಕ್ತಿ ವೃದ್ಧಿಯಾಗಿದ್ದು, ಜುಲೈ 15ರಂದು ಅವರನ್ನ ಡಿಸ್ಚಾರ್ಜ್ ಮಾಡಲಾಗಿದೆ. ಎರಡನೇ ಗುಂಪು ಜುಲೈ 20ರಂದು ಬಿಡುಗಡೆಗೊಂಡಿದೆ.
ಈ ಮೊದಲು ರಷ್ಯಾ ಬಾಹ್ಯಾಕಾಶ ಸ್ಪರ್ಧೆಯಲ್ಲೂ ಮೊದಲಿಗನಾಗಿ ಗುರುತಿಸಿಕೊಂಡು ಅಮೆರಿಕಾಗೆ ಸೆಡ್ಡು ಹೊಡೆದಿತ್ತು. ಇದೀಗ ಕೊರೊನಾ ವ್ಯಾಕ್ಸಿನ್ ತಯಾರಿಕೆಯಲ್ಲೂ ಮೊದಲ ದೇಶವಾಗಿ ಹೊರಹೊಮ್ಮುವ ಮೂಲಕ ಮತ್ತೊಮ್ಮೆ ಸ್ಪರ್ಧೆಯಲ್ಲಿದ್ದ ಅಮೆರಿಕಾಗೆ ಸೆಡ್ಡು ಹೊಡೆದಿದೆ ಎನ್ನುವ ಚರ್ಚೆ ಪ್ರಾರಂಭವಾಗಿದೆ.