ಹೌದು ವಿಶ್ವದ ದೊಡ್ಡಣ್ಣ ಅಮೆರಿಕವನ್ನೂ ಹೆದರುವಂತೆ ಮಾಡಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ದೇಶದ ನಾಗರರಿಕರ ಬಳಿ ಮನೆಯಲ್ಲಿ ಸಾಕಿರುವ ನಾಯಿಗಳನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಆದೇಶಿಸಿದ್ದಾರೆ.
ಈ ಮೂಲಕ ಈ ನಾಯಿಗಳನ್ನು ಸಾಯಿಸಿ, ಮಾಂಸ ಮಾರಾಟ ಮಾಡುವುದು ಸರ್ಕಾರದ ಯೋಜನೆಯಾಗಿದೆ.
ಸಾಮಾನ್ಯವಾಗಿ ಶ್ರೀಮಂತರು ಹಾಗೂ ರಾಜಧಾನಿ ಪ್ಯೊಂಗ್ಯಾಂಗ್‌ನ ನಿವಾಸಿಗಳು ನಾಯಿಗಳು ಸೇರಿದಂತೆ ಸಾಕು ಪ್ರಾಣಿಗಳನ್ನು ಹೊಂದಿದ್ದಾರೆ. ಆದರೆ ಇದನ್ನು ಅಧಿಕಾರಿಗಳು ಬಂಡವಾಳಶಾಹಿ ‘ಅವನತಿಯ’ ಸಂಕೇತವಾಗಿ ಪರಿಗಣಿಸುತ್ತಾರೆ.
ಲಭ್ಯವಾದ ಮಾಹಿತಿ ಅನ್ವಯ ಕಿಮ್ ಜಾಂಗ್ ಉನ್ ಸಾಕು ನಾಯಿಗಳ ಮಾಲೀಕತ್ವವನ್ನು ನಿಷೇಧಿಸಿದ್ದಾರೆ.
ಇದು ಜನರಿಗೆ ಗಣನೀಯವಾಗಿ ಕುಸಿಯುತ್ತಿರುವ ದೇಶದ ಆರ್ಥಿಕತೆ ವಿಚಾರವಾಗಿ ಇರುವ ಕೋಪವನ್ನು ತಣಿಸಲು ಸರ್ಕಾರ ಹೂಡಿದ ತಂತ್ರವೆನ್ನಲಾಗುತ್ತಿದೆ.
ಈಗಾಗಲೇ ಸಾಕು ನಾಯಿಗಳಿರುವ ಮನೆಗಳನ್ನು ಅಧಿಕಾರಿಗಳು ಗುರುತು ಮಾಡಿದ್ದಾರೆ. ಅಲ್ಲದೇ ನಾಯಿಗಳನ್ನು ಒತ್ತಾಯಪೂರ್ವಕವಾಗಿ ಕೊಂಡೊಯ್ಯುತ್ತಿದ್ದಾರೆನ್ನಲಾಗಿದೆ.
ಉತ್ತರ ಕೊರಿಯಾದಲ್ಲಿ ಜನ ಸಾಮಾನ್ಯರು ಹಾಗೂ ಮಧ್ಯಮ ವರ್ಗದ ಮಂದಿ ತಮ್ಮ ಮನೆಗಳಲ್ಲಿ ಹಂದಿ ಅಥವಾ ಇನ್ನಾವುದಾದರೂ ಪ್ರಾಣಿಗಳನ್ನು ಸಾಕುತ್ತಾರೆ. ಆದರೆ ಶ್ರೀಮಂತ ವರ್ಗದ ಜನರಷ್ಟೇ ನಾಯಿಗಳನ್ನು ಸಾಕುತ್ತಾರೆಂದು ಮೂಲಗಳು ತಿಳಿಸಿವೆ.
ಒಂದು ಬಾರಿ ನಾಯಿಗಳನ್ನು ಕೊಂಡೊಯ್ಯಲು ಅಧಿಕಾರಿಗಳು ಬಂದರೆ, ಅವುಗಳನ್ನು ಒಂದೋ ಮೃಗಾಲಯಕ್ಕೆ ರವಾನಿಸುತ್ತಾರೆ. ಇಲ್ಲವೆಂದಾದರೆ ರೆಸ್ಟೋರೆಂಟ್‌ಗಳಿಗೆ ಮಾಂಸಕ್ಕಾಗಿ ಮಾರಾಟ ಮಾಡುತ್ತಿದ್ದಾರೆಂಬ ವಿಚಾರವೂ ಬಯಲಾಗಿದೆ.
ಈ ಮೂಲಕ ನಾಯಿ ಮಾಂಸಪ್ರಿಯರಿಗೆ ಇವುಗಳನ್ನು ಕೊಂದು ಮಾಂಸ ನೀಡಲಾಗುತ್ತಿದೆ.
ಲಭ್ಯವಾದ ಮಾಹಿತಿ ಅನ್ವಯ ಉತ್ತರ ಕೊರಿಯಾದ ಶೇ. 60 ರಷ್ಟು ಅಂದರೆ 25.5 ಮಿಲಿಯನ್ ಜನರು ಇಲ್ಲಿ ಹಸಿವಿನಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ಸರ್ಕಾರ ಮಾತ್ರ ಎಲ್ಲಾ ಅನುದಾನವನ್ನು ಅಣು ಶಸ್ತ್ರಾಸ್ತ್ರ ನಿರ್ಮಾಣ ಮಾಡಲು ವ್ಯಯಿಸುತ್ತಿದೆ.
ಈ ಹಿಂದೆ ಕಿಮ್ ಉತ್ತರ ಕೊರಿಯಾಗೆ ಕೊರೋನಾ ಎಂಟ್ರಿ ಕೊಟ್ಟ ಬೆನ್ನಲ್ಲೇ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಅಲ್ಲದೇ ಮಾಸ್ಕ್ ಧರಿಸದವರಿಗೆ ಮೂರು ತಿಂಗಳವರೆಗೆ ಕೂಲಿ ಕಾರ್ಮಿಕರಂತೆ ದುಡಿಯುವ ಶಿಕ್ಷೆ ವಿಧಿಸುವ ಕ್ರಮ ಜಾರಿಗೊಳಿಸಿದ್ದರು.