ಅಮೆರಿಕ ಹಾಲಿ ಅಧ್ಯಕ್ಷ ಜೋ ಬೈಡೆನ್ ಇಂದು ಭಾರತಕ್ಕೆ ಆಗಮಿಸುತ್ತಿದ್ದು, ಜಿ 20 ಶೃಂಗಸಭೆಯಲ್ಲಿ ಭಾಗಿಯಾಗ್ತಿದ್ದಾರೆ. ಆದರೆ, ಈ ನಡುವೆ ಅಮೆರಿಕ ಅಧ್ಯಕ್ಷರು ಪೂರ್ಣಾವಧಿ ಅಧ್ಯಕ್ಷರಾಗಿರುವುದಿಲ್ಲವಾ ಎಂಬ ಮಾತು ಸಹ ಕೇಳಿ ಬರುತ್ತಿದೆ. ಇದೇ ವೇಳೆ ಅಮೆರಿಕ ಉಪಾಧ್ಯಕ್ಷೆ ಹಾಗೂ ಭಾರತ ಮೂಲದ ಕಮಲಾ ಹ್ಯಾರಿಸ್ ಅಧ್ಯಕ್ಷ ಹುದ್ದೆಯನ್ನು ನಿರ್ವಹಿಸಲು ಸಿದ್ಧ ಎಂದು ಹೇಳಿರುವುದು ಸಂಚಲನ ಮೂಡಿಸಿದೆ.
ಅಮೆರಿಕ ಹಾಲಿ ಅಧ್ಯಕ್ಷ ಜೋ ಬೈಡೆನ್ ಒಂದು ವೇಳೆ ತಮ್ಮ ಉಳಿದ ಅವಧಿ ಪೂರೈಸಲಾಗದೇ ಹೋದಲ್ಲಿ ಆ ಹುದ್ದೆಯನ್ನು ನಿರ್ವಹಿಸಲು ತಾವು ಸಿದ್ಧ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಅಧ್ಯಕ್ಷ ಬೈಡೆನ್‌ಗೆ ಹಾಲಿ 80 ವರ್ಷವಾಗಿದ್ದು, ನಡೆದಾಡಲು, ಮಾತನಾಡಲು, ನೆನಪಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರು ಅವಧಿ ಪೂರೈಸುವ ಕುರಿತು ಆರಂಭದಿಂದಲೂ ಪ್ರಶ್ನೆಗಳು ಇದ್ದೇ ಇದೆ.
ಈ ಹಿನ್ನೆಲೆಯಲ್ಲಿ ಇದೇ ಪ್ರಶ್ನೆಯನ್ನು ಸುದ್ದಿಗಾರರು ಕಮಲಾ ಹ್ಯಾರಿಸ್ ಮುಂದಿಟ್ಟಾಗ ‘ಬೈಡೆನ್ ಅಧಿಕಾರ ಅವಧಿಯನ್ನು ಪೂರ್ಣಗೊಳಿಸುವಲ್ಲಿ ವಿಫಲವಾದರೆ, ನಾನು ಉಳಿದ ಅವಧಿಯಲ್ಲಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲಿದ್ದೇನೆ. ಇದಕ್ಕೆ ತಯಾರಾಗಿದ್ದೇನೆ. ಆದರೆ ಇದು ಅಸಾಧ್ಯ ಎಂದು ನನಗೂ ತಿಳಿದಿದೆ’ ಎಂದರು. ಜೊತೆಗೆ ‘ಯಾವುದೇ ದೇಶದ ಉಪಾಧ್ಯಕ್ಷರಾದವರು ಅಧ್ಯಕ್ಷತೆಯ ಜವಾಬ್ದಾರಿಯನ್ನು ಅರಿತು ಯಾವ ಸಮಯದಲ್ಲಾದರೂ ಪಡೆಯಲು ಸಿದ್ಧರಾಗಿರಬೇಕು’ ಎಂದರು.
ಪ್ರಧಾನಿ ಮೋದಿ ಭಾರತದ ಪರವಾಗಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಆಸಿಯಾನ್ ಶೃಂಗಸಭೆಗೆ ತೆರಳಿದ್ದರು. ಅದೇ ರೀತಿ, ಅಮೆರಿಕದ ಪರವಾಗಿ ಜೋ ಬೈಡೆನ್ ಬದಲು ಕಮಲಾ ಹ್ಯಾರಿಸ್ ಪ್ರತಿನಿಧಿಸುತ್ತಿದ್ದಾರೆ. ಈ ವೇಳೆ ಪತ್ರಕರ್ತರು ಅಮೆರಿಕ ಅಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಈ ಪ್ರಶ್ನೆ ಕೇಳಲಾಗಿದೆ.
ಜೋ ಬೈಡೆನ್ ಈಗಾಗಲೇ ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದಾರೆ. ಅವರು ನವೆಂಬರ್‌ನಲ್ಲಿ 81 ನೇ ವರ್ಷಕ್ಕೆ ಕಾಲಿಡುತ್ತಾರೆ. ಆದರೂ, ಮುಂದಿನ ವರ್ಷದ ಚುನಾವಣೆಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ, ವರದಿಯ ಪ್ರಕಾರ, ಕಮಲಾ ಹ್ಯಾರಿಸ್ ಅವರನ್ನು ಸಾರ್ವಜನಿಕವಾಗಿ ಹೊಗಳಿದ್ದರೂ ಅವರ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎನ್ನಲಾಗಿದೆ.