ಜಿ7 ಶೃಂಗಸಭೆ: ವಿಶ್ವದ ದಿಗ್ಗಜರ ಜತೆ ಮೋದಿ ಭೇಟಿ..!

First Published | Jun 15, 2024, 8:06 AM IST

ಬಾರಿ (ಇಟಲಿ)(ಜೂ.15):  ಸಾರ್ವತ್ರಿಕ ಚುನಾವಣೆಯ ಬಳಿಕ ಮೊದಲ ವಿದೇಶಿ ಪ್ರವಾಸದ ಅಂಗವಾಗಿ ಇಟಲಿಯ 50ನೇ ಜಿ7 ಶೃಂಗಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್‌ಸ್ಕಿ, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹಾಗೂ ಫ್ರಾನ್ಸ್‌ ಪ್ರಧಾನಿ ಇಮ್ಯಾನ್ಯುಯಲ್‌ ಮ್ಯಾಕ್ರಾನ್‌ ಸೇರಿ ಹಲವು ರಾಜತಾಂತ್ರಿಕ ನಾಯಕರೊಂದಿಗೆ ಸೌಹಾರ್ದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಭಾರತದ ಜೊತೆ ರಾಜತಾಂತ್ರಿಕ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಿದರು.

ಫ್ರಾನ್ಸ್‌ ಜೊತೆ ಸಹಭಾಗಿತ್ವ:

ಫ್ರಾನ್ಸ್‌ ಪ್ರಧಾನಿ ಇಮ್ಯಾನ್ಯುಯಲ್‌ ಮ್ಯಾಕ್ರಾನ್‌ ಜೊತೆಗೆ ನಡೆಸಿದ ಮಾತುಕತೆಯಲ್ಲಿ ರಕ್ಷಣೆ, ಅಣ್ವಸ್ತ್ರ, ಬಾಹ್ಯಾಕಾಶ, ಶಿಕ್ಷಣ, ಹವಾಮಾನ, ಡಿಜಿಟಲ್‌ ಮೂಲಸೌಕರ್ಯ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಜಲಮಾರ್ಗಗಳ ಮೂಲಕ ವ್ಯಾಪಾರ, ಸಂಪರ್ಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಒಗ್ಗಟ್ಟಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಚರ್ಚಿಸಿದರು.

ಮೋದಿಗೆ ಮೆಲೋನಿ ನಮಸ್ತೆ!

ಈ ಸಲದ ಜಿ7 ಶೃಂಗದ ಆತಿಥ್ಯ ವಹಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೃಂಗದ ಸ್ಥಳಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಮೋದಿ ಅವರಿಗೆ ಮೆಲೋನಿ ಕೈಮುಗಿದು ಭಾರತೀಯ ಶೈಲಿಯಲ್ಲಿ ‘ನಮಸ್ತೆ’ ಎಂದು ಹೇಳಿದ್ದು ವಿಶೇಷವಾಗಿತ್ತು.ಇದಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಶೃಂಗಕ್ಕೆ ತಮ್ಮನ್ನು ಆಹ್ವಾನಿಸಿದ್ದ ಮೆಲೋನಿ ಅವರ ಜತೆ ಮೋದಿ ಆತ್ಮೀಯತೆಯಿಂದ ಮಾತನಾಡಿ 50ನೇ ಜಿ7 ಶೃಂಗದ ಯಶಸ್ವಿ ಆತಿಥ್ಯ ನಿರ್ವಹಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

Tap to resize

ಉಕ್ರೇನ್‌ಗೆ ಮೋದಿ ಶಾಂತಿ ಪಾಠ

ಯುದ್ಧಪೀಡಿತ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್‌ಸ್ಕಿ ಪ್ರಧಾನಿ ಮೋದಿಗೆ ರಷ್ಯಾ ಜೊತೆಗಿನ ಯುದ್ಧದ ವಾಸ್ತವತೆಯನ್ನು ಸಮಗ್ರವಾಗಿ ವಿವರಿಸಿದರು. ಇದೇ ವೇಳೆ ಮೋದಿ, ‘ಶಾಂತಿ ಮಾತುಕತೆಯೊಂದೇ ಯುದ್ಧ ನಿಲ್ಲಿಸಲು ಉತ್ತಮವಾದ ಆಯುಧ’ ಎಂದು ಝೆಲೆನ್ಸ್ಕಿಗೆ ತಮ್ಮ ಸಲಹೆ ನೀಡಿದರು.

ಸುನಕ್‌ ಜತೆ ವ್ಯಾಪಾರ ಒಪ್ಪಂದ ಚರ್ಚೆ:

ಜು.4ರಂದು ಚುನಾವಣೆ ಎದುರಿಸುತ್ತಿರುವ ಬ್ರಿಟನ್‌ ಪ್ರಧಾನಿ ಭಾರತೀಯ ಮೂಲದ ರಿಷಿ ಸುನಕ್‌ ಅವರನ್ನು ಭೇಟಿ ಮಾಡಿದ ಮೋದಿ ದ್ವಿಪಕ್ಷೀಯ ಮಾತುಕತೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಪ್ರಗತಿ, ಸೆಮಿಕಂಡಕ್ಟರ್‌, ತಂತ್ರಜ್ಞಾನ, ವ್ಯಾಪಾರ ಹಾಗೂ ರಕ್ಷಣಾ ವಲಯದಲ್ಲಿ ಅಭಿವೃದ್ಧಿ ಮಾಡುವ ಕುರಿತು ಮಾತುಕತೆ ನಡೆಸಿದರು.

Latest Videos

click me!