ಇಸ್ರೇಲ್ - ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಭಾರಿ ಪ್ರಮಾಣದ ದಾಳಿ ನಡೆಸುತ್ತಿದೆ. ಇನ್ನು, ಹಮಾಸ್ 16 ವರ್ಷಗಳ ಕಾಲ ಆಳಿದ ಗಾಜಾ ಪಟ್ಟಿಯ ಮೇಲೆ ನಿಯಂತ್ರಣ ಕಳೆದುಕೊಂಡಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸೋಮವಾರ ಹೇಳಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.
ಹಮಾಸ್ ಗಾಜಾದ ನಿಯಂತ್ರಣವನ್ನು ಕಳೆದುಕೊಂಡಿದೆ. ಭಯೋತ್ಪಾದಕರು ದಕ್ಷಿಣದ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ನಾಗರಿಕರು ಹಮಾಸ್ ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಇಸ್ರೇಲ್ ಸಚಿವರು ಹೇಳಿದ್ದಾರೆ.
ಆದರೆ, ಇದಕ್ಕೆ ಯಾವುದೇ ಸಾಕ್ಷ್ಯವನ್ನು ಒದಗಿಸಿಲ್ಲ. ಅಲ್ಲದೆ, ಗಾಜಾ ನಾಗರಿಕರಿಗೆ ಇನ್ನು ಮುಂದೆ ಆ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದೂ ಯೋವ್ ಗ್ಯಾಲಂಟ್ ಇಸ್ರೇಲ್‌ನ ಪ್ರಮುಖ ಟಿವಿ ಮಾಧ್ಯಮಗಳಿಗೆ ವಿಡಿಯೋ ಬ್ರಾಡ್‌ಕ್ಯಾಸ್ಟ್ ಮೂಲಕ ತಿಳಿಸಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ಬಂದೂಕುಧಾರಿಗಳು ಇಸ್ರೇಲ್ ಪಟ್ಟಣಗಳ ಮೂಲಕ ದಾಳಿ ಮಾಡಿದಾಗ ಯುದ್ಧ ಪ್ರಾರಂಭವಾಯಿತು. ಈ ಯುದ್ಧದಲ್ಲಿ ಸುಮಾರು 1,200 ಜನರು ಮೃತಪಟ್ಟಿದ್ದರು ಮತ್ತು 240 ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಗಿತ್ತು. ಇದು ಇಸ್ರೇಲ್‌ನ 75 ವರ್ಷಗಳ ಇತಿಹಾಸದಲ್ಲಿ ಮಾರಣಾಂತಿಕ ದಿನವಾಗಿತ್ತು.
ಇದರ ಪ್ರತೀಕಾರವಾಗಿ, ಇಸ್ರೇಲ್ ಕಳೆದ ತಿಂಗಳು ಹಮಾಸ್ ಅನ್ನು ನಿರ್ಮೂಲನೆ ಮಾಡಲು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, ಯುದ್ಧದ ಘೋಷಣೆಯ ನಂತರ ವಾಯು ದಾಳಿ ಅರಂಭಿಸಿತು ಮತ್ತು ಕೆಲ ದಿನಗಳ ಬಳಿಕ ಭೂ ದಾಳಿಯನ್ನೂ ಆರಂಭಿಸಿತು.
ಗಾಜಾ ಮಾಧ್ಯಮ ಕಚೇರಿಯ ಪ್ರಕಾರ, ಈ ಸಂಘರ್ಷದಿಂದ ಗಾಜಾದಲ್ಲಿ 4,630 ಮಕ್ಕಳು ಸೇರಿದಂತೆ 11,240 ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಗಾಜಾದ ಮೂರನೇ ಎರಡರಷ್ಟು ಜನಸಂಖ್ಯೆ ನಿರಾಶ್ರಿತರಾಗಿದ್ದಾರೆ. ಇಸ್ರೇಲ್ ಗಾಜಾದ ಉತ್ತರಾರ್ಧದ ಸಂಪೂರ್ಣ ಸ್ಥಳಾಂತರಕ್ಕೆ ಆದೇಶ ನೀಡಿದ್ದು, ನಾಗರಿಕರು ತಮ್ಮ ಸುರಕ್ಷತೆಗಾಗಿ ದಕ್ಷಿಣದ ಕಡೆಗೆ ಚಲಿಸುವಂತೆ ಮನವಿ ಮಾಡಿಕೊಂಡಿದ್ದರು.
ಸೇನಾ ಆಕ್ರಮಣವು ಮುಂದುವರಿದಂತೆ, ಇಸ್ರೇಲ್ ಪಡೆಗಳು ಸಂಪೂರ್ಣ ಗಾಜಾ ಸುತ್ತುವರೆದಿದ್ದರಿಂದ ವಾರಾಂತ್ಯದಲ್ಲಿ ಸಾವಿರಾರು ಜನರು ಗಾಜಾದ ಅತಿದೊಡ್ಡ ಆಸ್ಪತ್ರೆಯನ್ನು ಪಲಾಯನ ಮಾಡಿದರು ಮತ್ತು ಸೋಮವಾರ ಅದರ ಸುತ್ತಲೂ ಗುಂಡಿನ ದಾಳಿ ಮತ್ತು ಸ್ಫೋಟಗಳನ್ನು ನಡೆಸಿದವು ಎಂದು ವೈದ್ಯರು ಹೇಳಿದರು.
ಆಸ್ಪತ್ರೆಯಲ್ಲಿ ಪ್ರಸ್ತುತ ವಿದ್ಯುತ್, ನೀರು, ಆಹಾರ, ಔಷಧ ಮತ್ತು ಸಲಕರಣೆಗಳ ಕೊರತೆಯಿಂದ ನವಜಾತ ಶಿಶುಗಳ ಜೀವಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.
ಗಾಜಾದಲ್ಲಿ ಕದನ ವಿರಾಮಕ್ಕಾಗಿ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತಾಯಗಳನ್ನು ಇಸ್ರೇಲ್ ನಿರಂತರವಾಗಿ ತಿರಸ್ಕರಿಸುತ್ತಿದೆ. ಅಲ್ಲದೆ, ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ 240ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ವಾಪಸ್ ಕಳಿಸಬೇಕೆಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒತ್ತಾಯಿಸಿದ್ದಾರೆ. ಒತ್ತೆಯಾಳುಗಳ ಬಿಡುಗಡೆ ಬಳಿಕವೇ ಕದನ ವಿರಾಮವನ್ನು ಪರಿಗಣಿಸೋದಾಗಿಯೂ ಸ್ಪಷ್ಟಪಡಿಸಿದ್ದಾರೆ.