ಒಂದೇ ಮರಕ್ಕೆ ನೆಲ್ಲಿ, ಅಳಲೆ, ಮತ್ತು ತಾರೆಕಾಯಿ ಬಿಡುವ 'ತ್ರಿಫಲ ವೃಕ್ಷ'ವಿದೆ ಎಂಬ ನಂಬಿಕೆ ಇದೆ. ಆಚಾರ್ಯ ನಾಗಾರ್ಜುನರ ರಸವಿದ್ಯೆಯಿಂದ ಸೃಷ್ಟಿಯಾದ ಈ ಮರದ ಹಣ್ಣು ತಿಂದರೆ ಮುಪ್ಪು ಬರುವುದಿಲ್ಲ ಎಂದು ಹೇಳಲಾಗುತ್ತದೆ.
ಭಾರತದ ದಟ್ಟ ಕಾಡುಗಳೆಂದರೆ ಗುಪ್ತ ರಹಸ್ಯಗಳಿಗೆ, ದಿವ್ಯ ಮೂಲಿಕೆಗಳಿಗೆ ಹೆಸರುವಾಸಿ. ಆ ದಟ್ಟ ಮರಗಳ ನಡುವೆ, ಸಿದ್ಧರು ತಪಸ್ಸು ಮಾಡುವ ಕಣಿವೆಗಳಲ್ಲಿ ಒಂದು ಅದ್ಭುತ ಮರವಿದೆ ಎಂಬ ಕಥೆ ತಲೆಮಾರುಗಳಿಂದ ಪ್ರಚಲಿತದಲ್ಲಿದೆ.ಆಯುರ್ವೇದದಲ್ಲಿ ಪ್ರಸಿದ್ಧವಾದ ತ್ರಿಫಲಗಳು ಅಂದರೆ ನೆಲ್ಲಿಕಾಯಿ, ಅಳಲೆಕಾಯಿ ಮತ್ತು ತಾರೆಕಾಯಿ; ಈ ಮೂರೂ ಬೇರೆ ಬೇರೆ ಮರಗಳಲ್ಲಿ ಬಿಡುತ್ತವೆ. ಆದರೆ ಈ ಒಂದು ಕಾಡಿನ ಆಳದಲ್ಲಿ ಒಂದೇ ಮರಕ್ಕೆ ಈ ಮೂರು ಬಗೆಯ ಕಾಯಿಗಳು ಬಿಡುತ್ತವೆ ಎಂದು ಸ್ಥಳೀಯರು ಮತ್ತು ಯೋಗಿಗಳು ನಂಬುತ್ತಾರೆ. ಅದೇ ತ್ರಿಫಲ ವೃಕ್ಷ. ಈ ಮರ ಸಾಮಾನ್ಯವಾದುದಲ್ಲ, ಇದರ ಹಿಂದೆ ಪ್ರಾಚೀನ ರಸವಿದ್ಯೆಯ ಪ್ರಯೋಗಗಳಿವೆ ಎಂದು ಚೆಂಚು ಗಿರಿಜನರು ಹೇಳುತ್ತಾರೆ.
25
ಎಲ್ಲಿದೆ ಈ ಮರ?
ಈ ಅರಣ್ಯದ ಹೆಸರು ನಲ್ಲಮಲ್ಲ ಕಾಡು. ಇದು ಶ್ರೀಶೈಲ ಕ್ಷೇತ್ರದ ಸುತ್ತಮುತ್ತ ಇರುವ ಕದಳೀವನ, ಇಷ್ಟಕಾಮೇಶ್ವರಿ ದೇವಸ್ಥಾನದ ಆಸುಪಾಸು ಮತ್ತು ಕಾಳಹಸ್ತಿ ಗುಹೆಗಳ ಕಡೆಗಿನ ಅತ್ಯಂತ ಅಪಾಯಕಾರಿ ಕಣಿವೆಗಳಲ್ಲಿ ಈ ದಿವ್ಯ ವೃಕ್ಷವಿದೆ ಎಂದು ನಂಬಲಾಗಿದೆ. ಮಹರ್ಷಿ ಆಚಾರ್ಯ ನಾಗಾರ್ಜುನ ಅವರು ಶ್ರೀಶೈಲದ ನಲ್ಲಮಲ ಕಾಡುಗಳನ್ನು ತನ್ನ ರಸವಿದ್ಯೆಯ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.
35
ಈ ಫಲದ ವಿಶೇಷತೆ ಏನು?
ಈ ತ್ರಿಫಲ ವೃಕ್ಷದ ಬಗ್ಗೆ ಪ್ರಚಾರದಲ್ಲಿರುವ ಅತ್ಯಂತ ಆಸಕ್ತಿಕರ ವಿಷಯವೆಂದರೆ, ಇದರ ಹಣ್ಣುಗಳನ್ನು ತಿಂದವರಿಗೆ ಮುಪ್ಪು ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆ. ಆಯುರ್ವೇದದಲ್ಲಿ ತ್ರಿಫಲ ಚೂರ್ಣವನ್ನು ನಿಯಮಿತವಾಗಿ ತೆಗೆದುಕೊಂಡರೆ 'ಕಾಯಕಲ್ಪ ಚಿಕಿತ್ಸೆ'ಯಂತೆ ಕೆಲಸ ಮಾಡಿ ದೇಹಕ್ಕೆ ಪುನಶ್ಚೇತನ ನೀಡುತ್ತದೆ. ಈ ತ್ರಿಫಲ ವೃಕ್ಷದ ಹಣ್ಣನ್ನು ತಿಂದರೆ, ದೇಹದ ಜೀವಕೋಶಗಳು ಮುಪ್ಪಾಗದೆ ಯೌವನದಿಂದ ಕೂಡಿರುತ್ತವೆ. ಎಂದು ಗಿರಿಜನರ ಕಥೆಗಳು ಹೇಳುತ್ತವೆ.
ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅರಳಿ, ಅತ್ತಿ ಮತ್ತು ಜುವ್ವಿ ಮರಗಳು ಒಟ್ಟಿಗೆ ಬೆಳೆದಿವೆ. ಭಕ್ತರು ಇದನ್ನೇ 'ತ್ರಿಫಲ ವೃಕ್ಷ' ಅಂತ ಪೂಜಿಸುತ್ತಾರೆ. ಆದರೆ, ನಾಗಾರ್ಜುನ ನೆಟ್ಟ ನಿಜವಾದ ನೆಲ್ಲಿ-ಅಳಲೆ-ತಾರೆಕಾಯಿಗಳ ತ್ರಿಫಲ ವೃಕ್ಷ ನಲ್ಲಮಲದ ದಟ್ಟ ಕಣಿವೆಗಳಲ್ಲಿ, ಸಿದ್ಧರು ಸಂಚರಿಸುವ ಕಾಳಹಸ್ತಿ ಗುಹೆಗಳ ಬಳಿ ಇದೆ ಅನ್ನೋದು ಬಲವಾದ ನಂಬಿಕೆ. ದಿವ್ಯ ದೃಷ್ಟಿ ಇರುವ ಸಿದ್ಧರಿಗೆ, ಯೋಗಿಗಳಿಗೆ ಮಾತ್ರ ಈ ಮರ ಕಾಣುತ್ತೆ ಎಂಬ ನಂಬಿಕೆ ಇದೆ. ಗಿರಿಜನರ ಕಥೆಗಳ ಪ್ರಕಾರ, ರಾತ್ರಿ ಹೊತ್ತು ತನ್ನಷ್ಟಕ್ಕೆ ತಾನೇ ಹೊಳೆಯುವ 'ಜ್ಯೋತಿರ್ಲತೆ' ಬಳ್ಳಿಗಳ ನಡುವೆ ಈ ಮರ ಸುರಕ್ಷಿತವಾಗಿದೆಯಂತೆ.
55
ವಿಜ್ಞಾನ ಏನು ಹೇಳುತ್ತೆ?
ಆಧುನಿಕ ವಿಜ್ಞಾನದ ಪ್ರಕಾರ, ಒಂದೇ ಮರಕ್ಕೆ ಬೇರೆ ಬೇರೆ ಪ್ರಭೇದದ ಮೂರು ಬಗೆಯ ಹಣ್ಣುಗಳು ಬಿಡುವುದು ನೈಸರ್ಗಿಕವಾಗಿ ಅಸಾಧ್ಯ. ಫಲಗಳ ಮಹತ್ವವನ್ನು ಜನರಿಗೆ ತಿಳಿಸಲು ಮತ್ತು ನಲ್ಲಮಲದ ಔಷಧೀಯ ಸಂಪತ್ತನ್ನು ಕಾಪಾಡಲು ನಮ್ಮ ಹಿರಿಯರು ಈ ರೀತಿಯ ಕಥೆಗಳನ್ನು ಸಂಪ್ರದಾಯದ ಭಾಗವನ್ನಾಗಿ ಮಾಡಿರಬಹುದು ಎಂಬ ಮಾತುಗಳಿವೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.