ನಮ್ಮ ಅಪ್ಪ ಬಿಟ್ಟು ಹೋದ ಮೇಲೆ 5 ಮತ್ತು 6ನೇ ತರಗತಿಯಲ್ಲಿ ನನಗೆ ಗೊತ್ತಾಗಲಿಲ್ಲ. ಆಮೇಲೆ ಎಷ್ಟು ಕಷ್ಟ ಆಯ್ತು ಅಂದ್ರೆ ಯೂನಿಫಾರ್ಮ್ ಹೊಲಿಸಿಕೊಳ್ಳುವುದಕ್ಕೂ ಕಷ್ಟ ಆಯ್ತು. ಶೂ ನಲ್ಲಿ ತೂತುಗಳು, ಬ್ಯಾಗ್ ಇಲ್ಲದ ಕಾರಣಕ್ಕೆ ಮೊದಲಿಗೆ ನಾನು ಶಾಲೆಗೆ ಹೋಗುವಾಗ ಪ್ಲಾಸ್ಟಿಕ್ ಕವರ್ ನಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ.
ನಾನು ಮನೆ ಕೆಲಸಗಳನ್ನು ಮಾಡಿದ್ದೇನೆ, ನಾನು 7 ನೇ ತರಗತಿಯಲ್ಲಿ ನನಗಿಂತ ಕೆಳಗಿನ ತರಗತಿ ಮಕ್ಕಳಿಗೆ ಟ್ಯೂಷನ್ ಕೊಟ್ಟಿದ್ದೇನೆ. ಅವರ ಹೆಸರೆಲ್ಲ ಕೆಲವು ಇಂದಿಗೂ ನೆನೆಪಿದೆ. ಅದಕ್ಕೂ ಮುನ್ನ ಕೊಡಿಕಲ್ ನಲ್ಲಿದ್ದ ಚಾಕಲೇಟ್ ಫ್ಯಾಕ್ಟರಿಯೊಂದಕ್ಕೆ ಚಾಕಲೇಟ್ ರ್ಯಾಪರ್ ಹಾಕಿ ಕಟ್ಟಿಕೊಡುವ ಕೆಲಸ ಮಾಡಿದ್ದೆ. ಅದರಿಂದ 20, 39 ರೂ ಬರುತ್ತಿತ್ತು. 9 ತರಗತಿಯಲ್ಲಿರಬೇಕಾದರೆ ಶಾಲೆ ಮುಗಿಸಿ ಬಂದ ಮೇಲೆ ಡೆಂಟಲ್ ಡಾಕ್ಟರ್ ಒಬ್ಬರ ಕ್ಲೀನಿಕ್ ಗೆ ರಿಸೆಸ್ಪಿನೆಸ್ಟ್ ಆಗಿ ಕೆಲ ಮಾಡಿದ್ದೆ.
ನಾನು ನನ್ನ ಹಣದಲ್ಲಿ ಅಮ್ಮನಿಗೆ ಫಸ್ಟ್ ತೆಗೆದುಕೊಟ್ಟಿದ್ದು ಕರಿಮಣಿ, ನನಗಿನ್ನೂ ನೆನಪಿದೆ. ಅಮ್ಮ ಹಾಕಿದ್ದ ಕರಿಮಣಿ ಕುತ್ತಿಗೆ ಸುತ್ತಲೂ ಹಸಿರು ಬಣ್ಣಕ್ಕೆ ತಿರುಗಿತ್ತು. ಅದು ಚಿನ್ನ ಆಗಿರಲಿಲ್ಲ ಎಂದು ನಿರೂಪಕಿ ಅನುಶ್ರೀ ಹಳೆಯ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ.
ಅಮ್ಮ ಚಿನ್ನದ ಕರಿಮಣಿ ಹಾಕಿಲ್ಲ ಅನ್ನುವ ಕಾರಣಕ್ಕೆ ಬಹಳ ಕಡೆ ಅಮ್ಮನನ್ನು ಸಮಾರಂಭಗಳಿಗೆ , ಮದುವೆಗಳಿಗೆ ಕರೆಯುತ್ತಿರಲಿಲ್ಲ. ಆಕೆಗೆ ಕರಿಮಣಿ ಇಲ್ವಲ್ಲಾ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು.
ಆವಾಗ ನನಗೆ ಹಠ ಬಂದಿದ್ದು ಏನಂದ್ರೆ, ನಾನು ದುಡಿದಾಗ ಮೊದಲು ನನ್ನ ಅಮ್ಮನಿಗೆ ಕರಿಮಣಿಯೇ ತೆಗೆದುಕೊಡಬೇಕೆಂದು ನಿರ್ಧರಿಸಿದೆ. ಅಮ್ಮನಿಗೆ ಸಿಂಗಲ್ ಚೈನ್ ಕರಿಮಣಿ ತೆಗೆದುಕೊಟ್ಟೆ. ನನ್ನ ಅಮ್ಮನಿಗೆ ಅಂದು ಆದ ಖುಷಿ ಯಾವತ್ತೂ ಆಗಿರಲಿಲ್ಲ.
ನಾವು ನಮ್ಮ ಅಮ್ಮನ ಅಷ್ಟು ಕಷ್ಟದ ದಿನಗಳನ್ನು ನೋಡಿದ್ದೇವೆ. ತುಂಬಾ ಜನಕ್ಕೆ ಇದೆಲ್ಲ ಗೊತ್ತಿಲ್ಲ. ಕೆಲವು ವಿಷಯಗಳನ್ನು ನಾವು ಹೇಳಿಕೊಳ್ಳುತ್ತೇವೆ. ಕೆಲವೊಂದನ್ನು ಹೇಳಿಕೊಳ್ಳುವುದಿಲ್ಲ. ಅದಕ್ಕೆ ನಾನು ಹೇಳುವುದು. ಯಾರನ್ನೂ ಕೂಡ ನೀವು ನೋಡಿ ಜಡ್ಜ್ ಮಾಡಬೇಡಿ. ಅವರ ಬಗ್ಗೆ ಮಾತನಾಡುವ ಮುನ್ನ ಅವರ ಜೀವನದ ಇತಿಹಾಸವನ್ನು ನೋಡಿ. ಈಗಿನ ಕಾಲದಲ್ಲಿ ಅದೆಲ್ಲ ಇಲ್ಲವೇ ಇಲ್ಲ.
ಈಗ ಸೋಷಿಯಲ್ ಮೀಡಿಯಾ ನೋಡಿದರೆ 85% ಹೇಟ್‌ರೆಡ್. ನೀವೇನಾದ್ರೂ ಅವರಿಗೆ ಹಣ ಕೊಟ್ಟಿದ್ದೀರಾ? ಸಾಲ ಕೊಟ್ಟಿದ್ದೀರಾ? ಊಟ ಹಾಕುತ್ತಿದ್ದೀರಾ? ಯಾಕೆ ಅಷ್ಟೊಂದು ನೆಗೆಟಿವ್ ಮಾತನಾಡುವುದು. ಯಾರ ಬಗ್ಗೆಯಾದರೂ ಸರಿ ಮಾತನಾಡಿ ಪ್ರಯೋಜನ ಏನು? ನಮಗೆಲ್ಲ ಅದು ತಲೆಯಲ್ಲೇ ಬರುವುದಿಲ್ಲ. ಯಾಕೆ ಅವರಿಗೆಲ್ಲ ತಲೆಯಲ್ಲಿ ನೆಗೆಟಿವ್ ಥಾಟ್ ಬರುತ್ತದೆ ನನಗಂತೂ ಗೊತ್ತಿಲ್ಲ. ನೀವು ಒಬ್ಬರಿಗೆ ಕಮೆಂಟ್ ಮಾಡುವ ಮುನ್ನ ಅವರ ಬಗ್ಗೆ ತಿಳಿದುಕೊಳ್ಳುವುದು ಅವರ ಜೀವನ ಹೇಗಿತ್ತು? ಏನು ಮಾಡಿದ್ರು ಅನ್ನುವುದು ತಿಳಿದುಕೊಳ್ಳುವುದು ಉತ್ತಮ ಎಂದಿದ್ದಾರೆ.