ಟೋಕಿಯೋ 2020: ಮೀರಾಬಾಯಿ ಚಾನು ಗೆದ್ದ ಬೆಳ್ಳಿ ಪದಕ ಬಂಗಾರವಾಗುತ್ತಾ..?

First Published Jul 26, 2021, 5:16 PM IST

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಮೊದಲ ದಿನವೇ ಮಣಿಪುರದ ಸೈಕೋಮ್‌ ಮೀರಾಬಾಯಿ ಚಾನು 49 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದರೊಂದಿಗೆ ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಖಾತೆ ತೆರೆದಿದೆ. ಇದೀಗ ಮೀರಾಬಾಯಿ ಚಾನು ಬೆಳ್ಳಿ ಪದಕ ಬಂಗಾರವಾಗಿ ಬದಲಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಚಿನ್ನ ಗೆದ್ದ ಚೀನಾದ ಹೌ ಝೀಹುಯಿ ಗೆದ್ದ ಚಿನ್ನ, ಸದ್ಯದಲ್ಲಿ ಚಾನು ಪಾಲಾಗಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ ನೋಡಿ.
 

ಮೀರಾಬಾಯಿ ಚಾನು ಸಾಧನೆ:

ಟೋಕಿಯೋ ಒಲಿಂಪಿಕ್ಸ್‌ನ 49 ಕೆ.ಜಿ. ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಒಟ್ಟು 202 ಕೆ.ಜಿ. ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.

ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಸಾಧಕಿ

ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ರಜತ ಪದಕ ಗೆದ್ದ ಮೊದಲ ಭಾರತದ ವೇಟ್‌ಲಿಫ್ಟರ್ ಎನ್ನುವ ಕೀರ್ತಿಯು ಮಣಿಪುರ ಮೂಲದ 26 ವರ್ಷದ ಅಥ್ಲೀಟ್‌ ಪಾಲಾಗಿದೆ.

ಕರ್ಣಂ ಮಲ್ಲೇಶ್ವರಿ

ಈ ಮೊದಲು 2000ನೇ ಇಸವಿಯಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ದಿದ್ದರು. ಎರಡು ದಶಕಗಳ ಕಾಲ ಈ ದಾಖಲೆ ಕರ್ಣಂ ಮಲ್ಲೇಶ್ವರಿ ಹೆಸರಿನಲ್ಲಿಯೇ ಇತ್ತು.

ಚೀನಾದ ಹೌ ಝೀಹುಯಿ

ಇನ್ನು 49 ಕೆ.ಜಿ. ವಿಭಾಗದಲ್ಲಿ ಚೀನಾದ ಹೌ ಝೀಹುಯಿ ಒಟ್ಟು 210 ಕೆ.ಜಿ. ಭಾರ ಎತ್ತುವ ಮೂಲಕ ಒಲಿಂಪಿಕ್‌ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ದಿದ್ದರು.

ಗಾಳಿ ಸುದ್ದಿ ವೈರಲ್

ಚಾನು ಬೆಳ್ಳಿ ಗೆದ್ದು ಎರಡು ದಿನಗಳಾಗಿವೆಯಷ್ಟೆ. ಹೀಗಿರುವಾಗಲೇ ಮೀರಾಬಾಯಿ ಗೆದ್ದ ಬೆಳ್ಳಿ ಸದ್ಯದಲ್ಲೇ ಬಂಗಾರವಾಗಿ ಬದಲಾಗಲಿದೆ ಎನ್ನುವ ಗಾಳಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲಾರಂಭಿಸಿದೆ. ಹೀಗಾಗಲೂ ಕಾರಣವೂ ಇದೆ.

ಟ್ವೀಟ್‌ ವೈರಲ್

ಅಮೆರಿಕದ ಹೈಮನ್ ಕ್ಯಾಪಿಟಲ್‌ ಮ್ಯಾನೇಜ್‌ಮೆಂಟ್‌ನ ಚೀಫ್ ಇನ್‌ವೆಸ್ಟ್‌ಮೆಂಟ್ ಆಫೀಸರ್ ಎನಿಸಿಕೊಂಡಿರುವ ಕೈಲ್ ಬೆಸ್‌ ಮಾಡಿರುವ ಒಂದು ಟ್ವೀಟ್‌ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಕೈಲ್ ಬೆಸ್‌ ಟ್ವೀಟ್

ಕೈಲ್ ಬೆಸ್‌, ಚೀನಾದ ವೇಟ್‌ಲಿಫ್ಟರ್ ಹೌ ಝೀಹುಯಿ ಅವರನ್ನು ಉದ್ದೀಪನ ನಿಗ್ರಹ ಘಟಕದ ಅಧಿಕಾರಿಗಳು ಪರೀಕ್ಷೆಗೊಳಪಡಿಸಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಚಾನುಗೆ ಬಂಗಾರದ ಪದಕ ಸಿಗಲಿದೆ ಎನ್ನುವ ಸುದ್ದಿ ವೈರಲ್‌ ಆಗ ತೊಡಗಿದೆ.

ವಾಸ್ತವ ಸಂಗತಿ

ಆದರೆ ಸತ್ಯ ಏನಪ್ಪಾ ಅಂದರೆ, ಸುಮಾರು 5 ಸಾವಿರಕ್ಕೂ ಅಧಿಕ ಅಥ್ಲೀಟ್‌ಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸಹಜ ಪ್ರಕ್ರಿಯೆ ಎನ್ನುವಂತೆ ತಪಾಸಣೆಗೊಳಪಡಿಸಿದೆ. 

ಬೆಳ್ಳಿ ಬಂಗಾರವಾಗಿ ಬದಲಾಗುತ್ತಾ?

ಒಂದು ವೇಳೆ ಚೀನಾದ ಹೌ ಝೀಹುಯಿ ಡೋಪಿಂಗ್ ಟೆಸ್ಟ್‌ನಲ್ಲಿ ಫೇಲ್ ಆದರೆ ಮೀರಾಬಾಯಿ ಗೆದ್ದ ಬೆಳ್ಳಿ ಪದಕ ಬಂಗಾರವಾಗಲಿದೆ. ಡೋಪಿಂಗ್ ಫಲಿತಾಂಶಕ್ಕಾಗಿ ಭಾರತೀಯರು ಹದ್ದಿನಗಣ್ಣಿಟ್ಟಿದ್ದಾರೆ.

click me!