ಯಾವುದೇ ಆನ್‌ಲೈನ್ ವ್ಯವಹಾರಕ್ಕೆ ಅಥವಾ ಖಾತೆ ಪರಿಶೀಲನೆಗೆ ನಮ್ಮ ಫೋನ್‌ಗೆ OTP ಬರುತ್ತೆ ಅಲ್ವಾ.. ಆದರೆ, OTP ವಂಚನೆಗಳು ಹೆಚ್ಚಾಗಿ, ಅನೇಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ TRAI ಹೊಸ ನಿಯಮಗಳನ್ನು ತಂದಿದೆ ಅನ್ನೋದು ವೈರಲ್ ಆಗ್ತಿದೆ. ಆದರೆ, ಆ ಸುದ್ದಿಯ ನಿಜಾಂಶ ತಿಳಿಸಲು TRAI ಸ್ಪಷ್ಟನೆ ನೀಡಿದೆ. ಏನು ಸುದ್ದಿ ಹರಿದಾಡ್ತಿದೆ ಅಂದ್ರೆ..
ಆನ್‌ಲೈನ್ ವಂಚನೆ ತಡೆಯಲು ಜಾಹೀರಾತುಗಳ ರೂಪದಲ್ಲಿ ಬರುವ ಸಂದೇಶಗಳ ಮೂಲವನ್ನು, OTPಗಳನ್ನೂ ಸೇರಿಸಿ, ಟೆಲಿಕಾಂ ಕಂಪನಿಗಳು ಗುರುತಿಸಬೇಕು. ಈ SMSಗಳು ಎಲ್ಲಿಂದ ಬರ್ತಿವೆ ಅಂತ ತಿಳಿದುಕೊಳ್ಳಬೇಕು. ಹೀಗೆ ಮಾಡಿದ್ರೆ ಟೆಲಿಕಾಂ ಕಂಪನಿಗಳು ಹಾನಿಕಾರಕ SMSಗಳನ್ನು ತಡೆದು, ಬಳಕೆದಾರರನ್ನು ವಂಚನೆಯಿಂದ ರಕ್ಷಿಸಬಹುದು.
ಹೀಗೆ, ಮಾಡದಿದ್ದರೆ ಬ್ಯಾಂಕ್, ಇ-ಕಾಮರ್ಸ್, ಸಾಮಾಜಿಕ ಜಾಲತಾಣಗಳಂತಹ ಮುಖ್ಯ ಸೇವೆಗಳಿಗೆ OTPಗಳು ತಡವಾಗಿ ಬರುತ್ತವೆ ಅಥವಾ ಬ್ಲಾಕ್ ಆಗುತ್ತವೆ ಅನ್ನೋ ಸುದ್ದಿ ಹರಿದಾಡ್ತಿದೆ. ಈ ನಿಯಮಗಳನ್ನು ಹಂತ ಹಂತವಾಗಿ ಜಾರಿಗೆ ತರಲು TRAI ಸಮಯ ನೀಡಿದೆ. ನವೆಂಬರ್ 30ರವರೆಗೆ ಈ ನಿಯಮ ಪಾಲಿಸದ ಕಂಪನಿಗಳಿಗೆ ಎಚ್ಚರಿಕೆ ನೀಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಡಿಸೆಂಬರ್ 1ರಿಂದ ನಿಯಮ ಪಾಲಿಸದ ಕಂಪನಿಗಳ ಸಂದೇಶಗಳನ್ನು ಸಂಪೂರ್ಣವಾಗಿ ಬ್ಲಾಕ್ ಮಾಡ್ತೀವಿ ಅಂತ TRAI ಹೇಳಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಆದರೆ, ಈ ಸುದ್ದಿಯನ್ನು TRAI ತಳ್ಳಿಹಾಕಿದೆ. ತನ್ನ ಎಕ್ಸ್ ಪುಟದಲ್ಲಿ 'ಈ ಸುದ್ದಿ ಸುಳ್ಳು. SMSಗಳ ಮೂಲವನ್ನು ಗುರುತಿಸಲು ಮಾತ್ರ TRAI ಸೂಚಿಸಿದೆ. TRAI ಯಾವ ಸಂದೇಶಗಳನ್ನೂ ತಡೆಹಿಡಿಯಲ್ಲ' ಎಂದು ಸ್ಪಷ್ಟಪಡಿಸಿದೆ. ಈ ಹೊಸ ನಿಯಮಗಳ ಜಾರಿಯಿಂದ ಮುಂದೆ ಬಳಕೆದಾರರ ಸುರಕ್ಷತೆ ಹೆಚ್ಚುತ್ತದೆ ಅಂತ TRAI ಹೇಳಿದೆ. ಆದರೆ, OTP ಬರುವಲ್ಲಿ ತಾತ್ಕಾಲಿಕ ಅಡಚಣೆಗಳು ಉಂಟಾಗಬಹುದು ಅಂತ ತಿಳಿಸಿದೆ.
TRAI ಸಲಹೆಗಳು ಇಲ್ಲಿವೆ..
ಟೆಲಿಕಾಂ ಕಂಪನಿಗಳು ನಿಯಮಗಳ ಪ್ರಕಾರ ಕೆಲಸ ಮಾಡುತ್ತಿರುವುದರಿಂದ, ಬಳಕೆದಾರರು ತಮ್ಮ ಖಾತೆಗಳ ರಕ್ಷಣೆಗೆ OTPಗಳನ್ನೇ ಅವಲಂಬಿಸಬಾರದು. ಕ್ಯಾಪ್ಚಾಗಳನ್ನು ಬಳಸಬೇಕು.
ಟು ಫ್ಯಾಕ್ಟರ್ ವೆರಿಫಿಕೇಷನ್ (2FA) ಆನ್ ಮಾಡಿಕೊಳ್ಳಬೇಕು. ಆಗ OTPಗಳ ಜೊತೆಗೆ ಇನ್ನೊಂದು ಪರಿಶೀಲನಾ ಹಂತ ಸೇರಿಸಿದರೆ ನಿಮ್ಮ ಖಾತೆಗಳು ಸುರಕ್ಷಿತವಾಗಿರುತ್ತವೆ.
ಸೈಬರ್ ವಂಚನೆಗಳ ಬಗ್ಗೆ ಎಚ್ಚರವಿರಬೇಕು. ಅನುಮಾನಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು, ನಿಮಗೆ ತಿಳಿಯದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು.
ನಿಮ್ಮ ಡಿವೈಸ್ ಸುರಕ್ಷಿತವಾಗಿರಲಿ. ನಿಮ್ಮ ಡಿವೈಸ್‌ನ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್‌ನಲ್ಲಿನ ನಿಮ್ಮ ವೈಯಕ್ತಿಕ ಆಪ್‌ಗಳಿಗೆ (ಹಣಕಾಸು ಸಂಬಂಧಿತ ಗೂಗಲ್ ಪೇ, ಬ್ಯಾಂಕಿಂಗ್ ಸೇವೆ, ಫೋನ್ ಪೇ, ಪೇಟಿಎಂ ಇತರೆ..) ಕ್ಲಿಷ್ಟಕರ ಪಾಸ್‌ವರ್ಡ್‌ಗಳನ್ನು ಬಳಸಬೇಕು. ಸೆಕ್ಯೂರಿಟಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.
TRAI ಹೊಸ ನಿಯಮಗಳು ಸ್ಪ್ಯಾಮ್, ವಂಚನೆಯಿಂದ ಬಳಕೆದಾರರನ್ನು ರಕ್ಷಿಸಲು ಸಹಾಯ ಮಾಡುತ್ತವೆ. ವ್ಯಾಪಾರ ಸಂಬಂಧಿ SMSಗಳು ಬಂದಾಗ ಅವು ಎಲ್ಲಿಂದ ಬರ್ತಿವೆ ಅಂತ ಗುರುತಿಸುವುದನ್ನು ಕಡ್ಡಾಯಗೊಳಿಸುವ ಮೂಲಕ TRAI ಸುರಕ್ಷಿತ ಡಿಜಿಟಲ್ ವಾತಾವರಣ ಸೃಷ್ಟಿಸಲು ಗುರಿ ಇಟ್ಟುಕೊಂಡಿದೆ. ಇದು ಜನರ ಗೌಪ್ಯತೆ ಮತ್ತು ಹಣವನ್ನು ಕಾಪಾಡುತ್ತದೆ.