ಡಿ.6 ರಂದು ಪೂರ್ವಭಟ್ಟಾರಕ ಚಾರುಶ್ರೀ ನಿಷಿಧಿ ಮಂಟಪ ಲೋಕಾರ್ಪಣೆ; ವಿಶೇಷತೆ ಏನು ಗೊತ್ತಾ?

First Published | Nov 30, 2024, 11:19 PM IST

ಡಿ.6 ರಂದು ಪೂರ್ವಭಟ್ಟಾರಕ ಚಾರುಶ್ರೀ ನಿಷಿಧಿ ಮಂಟಪ ಲೋಕಾರ್ಪಣೆಯಾಗಲಿದೆ ಎಂದು ಶ್ರವಣಬೆಳಗೊಳ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ತಿಳಿಸಿದ್ದಾರೆ.

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್. ಹಾಸನ
 

ಶ್ರವಣಬೆಳಗೊಳ ಶ್ರೀಕ್ಷೇತ್ರದ ದಕ್ಷಿಣಾಚಾರ್ಯ, ಭಗವಾನ್ ಶ್ರೀ  ಮಹಾವೀರ ಶಾಂತಿ ಪ್ರಶಸ್ತಿ ಪುರಸ್ಕೃತರಾದ,  ಶ್ರೀಕ್ಷೇತ್ರ ಶ್ರವಣಬೆಳಗೊಳದ ಅಭಿವೃದ್ಧಿಯ ಹರಿಕಾರರಾದ ಇಲ್ಲಿನ ದಿಗಂಬರ ಜೈನ ಮಹಾಸಂಸ್ಥಾನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಅವರ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮ ಡಿ.೬ ರಂದು ನಡೆಯಲಿದೆ ಎಂದು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಶ್ರೀಗಳು, ಬರೋಬ್ಬರು ೫೪ ವರ್ಷಗಳ ಕಾಲ ಬೆಳಗೊಳಕ್ಕೆ ಅಕ್ಷರಶಃ ಬೆಳಕು ನೀಡಿದವರು ಪರಮಪೂಜ್ಯ ಸ್ವಾಮೀಜಿ. ಶ್ರೀ ಕ್ಷೇತ್ರಕ್ಕೆ ಅವರು ಎಲ್ಲಾ ರೀತಿಯಲ್ಲೂ ಕೊಡುಗೆ ನೀಡಿದ್ದಾರೆ. ಐದು ದಶಕಗಳ ಕಾಲ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಕ್ಷೇತ್ರವನ್ನು ವಿಶ್ವಮನ್ನಣೆ ಮಾಡಿದರು.

 ಹಿಂದಿನ ಪರಂಪರೆಯಲ್ಲೇ ಕ್ರಿ.ಶ. ೧೯೭೦ ರಿಂದ ೨೦೨೩ ರ ವರೆಗೆ ಶ್ರವಣಬೆಳಗೊಳ ದಕ್ಷಿಣಾಚಾರ್ಯ ಪೀಠದ ಪೀಠಾಧಿಪತಿಗಳಾಗಿ ಸಮಸ್ತ ಭಕ್ತ ಜನಗಳಿಗೆ ಗುರುಗಳಾಗಿದ್ದು, ಧರ್ಮದ ಪ್ರಭಾವನೆಗೈದು ೨೦೨೩ ಮಾ.೨೩ ರಂದು ಸಮಾಧಿ ಮರಣ ಹೊಂದಿದರು.

ಮಹಾಸ್ವಾಮಿಗಳ ಅಂತ್ಯಕ್ರಿಯೆ ಶ್ರೀ ಮಠದ ಪರಂಪರೆಯಂತೆ ಭಟ್ಟಾರಕ ಸ್ವಾಮಿಗಳ ಸಮಾಧಿ ಬೆಟ್ಟದಲ್ಲಿ ನೆರವೇರಿದೆ. ಆ ಸ್ಥಳದಲ್ಲಿ ಶಿಲಾಮಯ ನಿಷಿಧಿ ಮಂಟಪ ನಿರ್ಮಾಣ ಮಾಡಲಾಗಿದೆ ಎಂದರು. ಪೂರ್ವ ಭಟ್ಟಾರಕರ ಸಮಾಧಿ ಸ್ಥಳದಲ್ಲಿ ನಿರ್ಮಿಸಿರುವ ನಿಷಿಧಿ ಮಂಟಪಕ್ಕೆ ಹೋಗಲು ೧೨೪ ಮೆಟ್ಟಿಲು ಕೆತ್ತಲಾಗಿದೆ. ಜೊತೆಗೆ ಕಮಾನು ಸಹ ನಿರ್ಮಿಸಲಾಗಿದೆ. ಅಲ್ಲಿ ಕುಳಿತುಕೊಟ್ಟಲು ಕಲ್ಲಿನ ಆಸನ ಸಹ ಕೆತ್ತಲಾಗಿದೆ ಎಂದು ಶ್ರೀಗಳು ವಿವರಿಸಿದರು. ಪೂಜ್ಯರ ಶ್ರೀ ಚರಣ ಪಾದುಕೆಗಳ ಪ್ರತಿಷ್ಠಾಪನೆಯೊಂದಿಗೆ ಸ್ಮರಣ ಶಾಸನ ಹಾಗೂ ನಿಷಿಧಿ ಮಂಟಪದ ಲೋಕಾರ್ಪಣೆ ಡಿ.೬ ರಂದು ಬೆಳಗ್ಗೆ ೯ ಗಂಟೆಗೆ ನೆರವೇರಲಿದೆ ಎಂದು ತಿಳಿಸಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಪರಮಪೂಜ್ಯ ಶ್ರೀ ಶಂಭುನಾಥ ಮಹಾಸ್ವಾಮಿಗಳವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರ ಘನ ಉಪಸ್ಥಿತಿಯಲ್ಲಿ ಹಾಗೂ ಪರಮಪೂಜ್ಯ ಚಾರುಶ್ರೀ ಅವರಿಗೆ ಅತ್ಯಾಪ್ತರಾಗಿದ್ದ  ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಿಷಿಧಿ ಮಂಟಪ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

Tap to resize

ಈ ವೇಳೆ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಚಿವರಾದ ಡಿ.ಸುಧಾಕರ್, ಕೆ.ಎನ್.ರಾಜಣ್ಣ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಸೇರಿದಂತೆ ಜಿಲ್ಲೆಯ ಹಾಗೂ ಹೊರಗಿನ ಚುನಾಯಿತ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
೧೫ ಜೈನಮಠಗಳ ಭಟ್ಟಾರಕರು ಪಾವನ ಸಾನಿಧ್ಯ ವಹಿಸುವರು ಎಂದು ನುಡಿದರು.

ನಂತರ ಸುಮಾರು ೧೦ ಸಾವಿರಕ್ಕೂ ಅಧಿಕ ಗುರು ಭಕ್ತರ ಸಮ್ಮುಖದಲ್ಲಿ ಶ್ರೀ ಚರಣ ಪಾದುಕ ಸ್ಥಾಪನೆ, ಚರಣಾಭಿ?ಕ, ಪು?ವೃಷ್ಟಿ, ವಿನಯಾಂಜಲಿ ಹಾಗೂ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಮತ್ತು ಸಭಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು. ಒಟ್ಟಾರೆ ಸುಮಾರು ೧೫ ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ನುಡಿದರು.

೩ನೇ ಬೆಟ್ಟ: ನಿಷಿಧಿ ಮಂಟಪ ಉದ್ಘಾಟನೆ ನಂತರ ಬೆಳಗೊಳದ ವಿಂಧ್ಯಗಿರಿ, ಚಂದ್ರಗಿರಿ ಜೊತೆಗೆ ಇನ್ನೊಂದು ಚಿಕ್ಕ ಬೆಟ್ಟ ಸೇರ್ಪಡೆಯಾಗಲಿದ್ದು, ಅದಕ್ಕೆ ಪೂರ್ವ ಭಟ್ಟಾರಕರ ನಿಷಿಧಿ ಬೆಟ್ಟ ಎಂದು ಹೆಸರಿಡಲಾಗುವುದು ಎಂದರು.
ಅಲ್ಲದೆ ೧೯೮೧ ರಲ್ಲಿ ೧೦ ಹಳ್ಳಿಗಳನ್ನು ಶ್ರೀಗಳು ದತ್ತು ಪಡೆದಿದ್ದರು.ಆ ಗ್ರಾಮಗಳಿಗೀಗ ಶುದ್ಧ ಕುಡಿಯುವ ನೀರು, ಹೈಮಾಸ್ಟ್ ದೀಪ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅಭಿನವ ಚಾರುಶ್ರೀ ತಿಳಿಸಿದರು.

ಪೂರ್ವ ಶ್ರೀಗಳು ಐದುವರೆ ದಶಕಗಳ ಕಾಲ ಶ್ರೀ ಕ್ಷೇತ್ರದ ಸೇವೆ ಮಾಡಿದ್ದು, ಅದರ ಸ್ಮರಣಾರ್ಥ ೫೪ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ ಎಂದು ವಿವರಿಸಿದರು. ಪೂಜ್ಯರಿಗೆ ಮಾವಿನಮರ, ಹಣ್ಣು ಎಂದರೆ ಬಲು ಇಷ್ಟ ಅದಕ್ಕಾಗಿ ೧೦ ಸಾವಿರ ಮಾವಿನಗಿಡ ವಿತರಿಸಲಾಗುತ್ತಿದೆ ಎಂದು ಇದೇ ವೇಳೆ ಹೇಳಿದರು. ಗುರುಭಕ್ತರು, ಶ್ರೀಗಳ ಅನುಯಾಯಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀಗಳು ಮನವಿ ಮಾಡಿದರು.

ಮತ್ತೊಂದು ವಿಶೇಷ ಎಂದರೆ ಪರಮಪೂಜ್ಯರ ಜನ್ಮದಿಂದ ಸಮಾಧಿವರೆಗಿನ ಜೀವ ಮಾನದ ಸಾಧನೆ, ಜೀವನ ಚರಿತ್ರೆ ಸಾರುವ ಶಿಲಾಲೇಖವನ್ನು( ಶಿಲಾಶಾಸನ) ನಿಷಿಧಿ ಮಂಟಪದ ಪಕ್ಕದಲ್ಲೇ ಕೆತ್ತಲಾಗಿದೆ. ಶ್ರೀ ಕ್ಷೇತ್ರದಲ್ಲಿ ೫೭೨ ಶಾಸನಗಳಿದ್ದು, ೫೭೩ನೇ ಶಾಸನ ಹಿರಿಯರಾದ ಮಹಾಸ್ವಾಮಿಗಳದ್ದಾಗಲಿದೆ ಎಂದರು. ಇದು ೭ ಅಡಿ ಎತ್ತರ, ೬ ಅಡಿ ಅಗಲ ಇದ್ದು, ನಡುಗನ್ನಡ ಭಾಷೆಯಲ್ಲಿದೆ. ದೇಶದಲ್ಲೇ ದೊಡ್ಡ ಶಾಸನವಾಗಲಿದೆ. ಶಾಶ್ವತವಾಗಿ ಉಳಿಯಲಿ ಎಂದು ಬರೋಬ್ಬರಿ ೬ ಇಂಚು ದಪ್ಪದ ಕಲ್ಲಿನಲ್ಲಿ ಕೆತ್ತಲಾಗಿದ್ದು, ಡಿ.೬ ರಂದೇ ಲೋಕಾರ್ಪಣೆ ಆಗಲಿದೆ ಎಂದು ವಿವರಣೆ ನೀಡಿದರು.

Latest Videos

click me!