KGFನ 3200 ಎಕರೆ ನೀಡಲು ಕೇಂದ್ರ ಒಲವು: ಸಚಿವ ಜಗದೀಶ್‌ ಶೆಟ್ಟರ್‌

First Published Aug 29, 2020, 12:55 PM IST

ಬೆಂಗಳೂರು(ಆ.29): ಕೋಲಾರದ ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ನಲ್ಲಿ (ಬಿಜಿಎಂಎಲ್‌) ಬಳಕೆಯಾಗದ 3,200 ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ನೀಡುವಂತೆ ರಾಜ್ಯ ಸರ್ಕಾರ ಮಾಡಿರುವ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜಿಎಂಎಲ್‌ನಲ್ಲಿ ಬಳಕೆ ಆಗದೆ ಉಳಿದಿರುವ 3,200 ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಬಿಟ್ಟುಕೊಟ್ಟರೆ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಉದ್ದಿಮೆ ಸ್ಥಾಪಿಸಲು ಸಾಧ್ಯವಾಗಲಿದೆ. ಹಾಗಾಗಿ ಕೇಂದ್ರ ಸಂಸದೀಯ ವ್ಯವಹಾರ ಮತ್ತು ಗಣಿ, ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರಿಗೆ ಭೂಮಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
undefined
ನಿಗದಿತ ಪ್ರದೇಶದಲ್ಲಿ ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಮೀಕ್ಷೆ ನಡೆಸಲಿದೆ. ಅಲ್ಲಿ ಯಾವುದೇ ನೈಸರ್ಗಿಕ ಸಂಪನ್ಮೂಲ ಇಲ್ಲದಿರುವುದು ಖಾತರಿಯಾದ ಆರು ತಿಂಗಳ ನಂತರ ಅಗತ್ಯ ಅನುಮೋದನೆಗಳೊಂದಿಗೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಗಣಿ ಇಲಾಖೆ ಭೂಮಿಯನ್ನು ಹಸ್ತಾಂತರಿಸುವ ನಿರೀಕ್ಷೆ ಇದೆ. ಉದ್ದೇಶಿತ ಕೈಗಾರಿಕಾ ಪಾರ್ಕ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 90 ಕಿ.ಮೀ. ಚೆನ್ನೈ ಬಂದರಿನಿಂದ 260 ಕಿ.ಮೀ, ಕೃಷ್ಣಪಟ್ಟಣಂ ಬಂದರಿನಿಂದ 314 ಕಿ.ಮೀ ದೂರದಲ್ಲಿರುವ ಈ ಪ್ರದೇಶ ಕೈಗಾರಿಕೆ ಸ್ಥಾಪನೆಗೆ ಸೂಕ್ತವಾಗಿದೆ ಎಂದರು.
undefined
ಕೋವಿಡ್‌-19 ಲಾಕ್‌ಡೌನ್‌ ನಡುವೆಯೂ ರಾಜ್ಯದಲ್ಲಿ 31,676.57 ಕೋಟಿ ರು. ಹೂಡಿಕೆ ಮಾಡಲು ವಿವಿಧ ಕಂಪನಿಗಳು ಮುಂದಾಗಿವೆ. ಇದರಿಂದ 65,459 ಉದ್ಯೋಗ ಸೃಷ್ಟಿಯಾಗಲಿವೆ. ರಾಜ್ಯ ಸರ್ಕಾರ ಹೊರ ತಂದಿರುವ ಹೊಸ ಕೈಗಾರಿಕಾ ನೀತಿಯಿಂದ ಬಂಡವಾಳ ಹೂಡಿಕೆಗೆ ಅನುಕೂಲವಾಗಿದೆ. ಎಲ್ಲ ಮಾದರಿಯ ಕೈಗಾರಿಕೆಗಳ ಸ್ಥಾಪನೆಗೆ ಈ ನೀತಿ ಸಹಕಾರಿಯಾಗಿದೆ. ರಾಜ್ಯ ಕೈಗಾರಿಕಾ ಸೌಲಭ್ಯಗಳ ಅಧಿನಿಯಮ 2020 ಜಾರಿಗೊಳಿಸಿದ ಪ್ರಥಮ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ನಮ್ಮದು ಎಂದು ಹೇಳಿದರು.
undefined
ರಾಜ್ಯವನ್ನು ಕೈಗಾರಿಕೆ ಮತ್ತು ಹೂಡಿಕೆದಾರರ ಸ್ನೇಹಿ ರಾಜ್ಯಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆಯುವ ಗುರಿ ಹೊಂದಲಾಗಿದೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವುದರ ಮೂಲಕ 11 ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಜತೆಗೆ, ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಳನ್ನು ನಿರ್ಮಿಸಲಾಗುವುದು. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ ಹಂಚಿಕೆ ಮಾಡಲಾಗುವ ಭೂಮಿಯ ದರದ ಬಗ್ಗೆ ವೈಜ್ಞಾನಿಕ ನೀತಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಜಗದೀಶ್‌ ಶೆಟ್ಟರ್‌
undefined
ಕೈಗಾರಿಕಾಭಿವೃದ್ಧಿ ಮಂಡಳಿ ಭೂಸ್ವಾಧೀನ ಪಡಿಸಿಕೊಂಡಿರುವ ಭೂ ಮಾಲೀಕರುಗಳಿಗೆ ಪರಿಹಾರ ನೀಡಲು ಕಾಲಮಿತಿಯ ಮಾರ್ಗಸೂಚಿ ರಚನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಲಭ್ಯವಿರುವ ಹಾಗೂ ಕೈಗಾರಿಕೆಗಳಿಗೆ ಉಪಯೋಗಿಸಿಕೊಂಡಿರುವ ಭೂಮಿ ಲೆಕ್ಕಪರಿಶೋಧನೆ ನಡೆಸಿ, ರಾಜ್ಯದಲ್ಲಿ ಹೂಡಿಕೆದಾರರಿಗೆ ನಮ್ಮಲ್ಲಿ ಲಭ್ಯವಿರುವ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳ ಬಗ್ಗೆ ಸರಿಯಾದ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
undefined
click me!