ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಬೆಂಗಳೂರು ನಗರ ಶಾಸಕರು, ಪರಾಜಿತ ಅಭ್ಯರ್ಥಿಗಳು, ಬಿಬಿಎಂಪಿ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳು ಸೇರಿ ಹಲವರು ಭಾಗವಹಿಸಿದ್ದರು.
ಈ ವೇಳೆ ಕೊರೋನಾ ಸೋಂಕು ಬೆಂಗಳೂರಿನಲ್ಲಿ ತೀವ್ರವಾಗಿ ಹಬ್ಬುತ್ತಿದ್ದು, ರಾಜ್ಯ ಸರ್ಕಾರ ಸೋಂಕು ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರ ಸದುಪಯೋಗ ಪಡೆಯಲು ಪ್ರತಿ ವಾರ್ಡ್‌ನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಕ್ರಿಯಾಶೀಲರಾಗಬೇಕು. ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಪ್ರತಿ ವಾರ್ಡ್ ಹಾಗೂ ಬೂತ್ ಮಟ್ಟದಲ್ಲೂ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಈ ಮೂಲಕ ಬಿಬಿಎಂಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಲಭ್ಯವಿರುವ ಅವಕಾಶಗಳನ್ನೆಲ್ಲವನ್ನೂ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು ಎಂದು ತಿಳಿದುಬಂದಿದೆ.
ಪ್ರಸ್ತುತ ರಾಜ್ಯ ಸರ್ಕಾರವು ವಾರ್ಡ್ ಪುನರ್ ವಿಂಗಡಣೆ ಮಾಡಿದೆ. ಆದರೆ ವಾರ್ಡ್‌ವಾರು ಮೀಸಲಾತಿ ಅಂತಿಮಗೊಳಿಸಿಲ್ಲ. ಪಂಚಾಯ್ತಿ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವ ಬಗ್ಗೆ ಹೈಕೋರ್ಟ್ ಪುನರ್‌ಪರಿಶೀಲನೆಗೆ ತಿಳಿಸಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಇರುವ ಸೋಂಕು ಹಾಗೂ ಇದನ್ನು ನಿಭಾಯಿಸಲು ಅಧಿಕಾರಿಗಳು ತಲ್ಲೀನರಾಗಿರುವುದರಿಂದ ನಿಗದಿತ ವೇಳೆಗೆ ಚುನಾವಣೆ ನಡೆಯುವುದಿಲ್ಲ. ಆದರೆ ಸ್ವಲ್ಪ ತಡವಾಗಿಯಾದರೂ ಚುನಾವಣೆ ನಡೆಯುತ್ತದೆ. ಹೀಗಾಗಿ ಚುನಾವಣೆ ಸಿದ್ಧತೆಗೆ ಸಿಗುವ 4 ತಿಂಗಳನ್ನು ಬಳಸಿಕೊಳ್ಳಬೇಕು. ಇದಕ್ಕಾಗಿ ಶೀಘ್ರವಾಗಿ ಸಂಭಾವ್ಯ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಸಹ ಪಕ್ಷ ನಿರ್ಧರಿಸಿದೆ ಎಂದರು.
ಕೊರೋನಾ ನಿಯಂತ್ರಣದ ವೈಫಲ್ಯದ ಜತೆಗೆ ಹಗರಣಗಳಲ್ಲೂ ರಾಜ್ಯ ಸರ್ಕಾರ ಸಿಲುಕಿದೆ. ಇದರ ಬಗ್ಗೆ ಸಿದ್ದರಾಮಯ್ಯ ಹಾಗೂ ನಾನು ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದೇವೆ. ಇವುಗಳನ್ನು ಜನರಿಗೆ ತಲುಪಿಸುವ ಕೆಲಸ ನೀವು ಮಾಡಬೇಕು ಎಂದು ಕರೆ ನೀಡಿದರು.
ಬೂತ್ ಮಟ್ಟದ ಸಮಿತಿಗಳು ಪ್ರತಿ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡಬೇಕು. ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಸಹಾಯ ಹಸ್ತ ಕಾರ್ಯಕ್ರಮ ಯಶಸ್ವಿಯಾಗಬೇಕು. ಇದಕ್ಕಾಗಿ 58 ಸಾವಿರ ಬೂತ್‌ಗಳಲ್ಲಿ ಪ್ರತಿ ಬೂತ್‌ಗೆ ಇಬ್ಬರು ಡಿಜಿಟಲ್ ಯೂತ್ ಯುವಕರನ್ನು ನೇಮಿಸಲಾಗಿದೆ. ಅವರಿಗೆ ತಲಾ 2 ಲಕ್ಷ ರು. ಆರೋಗ್ಯ ವಿಮೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾಜ್‌ರ್ ಸೇರಿದಂತೆ ಹಲವರು ಹಾಜರಿದ್ದರು.