Gruhalakshmi Scheme Update: ಗೃಹಲಕ್ಷ್ಮಿಗೆ ಹೊಸ ಅರ್ಜಿ ಸಲ್ಲಿಕೆ ಕೈಬಿಟ್ಟ ಸರ್ಕಾರ, ಕೇವಲ ಮರು ಪರಿಶೀಲನೆ!

Published : Jun 19, 2026, 07:30 PM IST

ಕರ್ನಾಟಕ ಸರ್ಕಾರವು 'ಗೃಹಲಕ್ಷ್ಮಿ' (Gruhalakhsmi) ಯೋಜನೆಯಲ್ಲಿನ ಆರ್ಥಿಕ ಸೋರಿಕೆ ತಡೆಯಲು ಮುಂದಾಗಿದೆ. ಹೊಸ ಅರ್ಜಿ ಸಲ್ಲಿಕೆಗೆ ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಅದನ್ನ ಕೈಬಿಟ್ಟು, ಕಡ್ಡಾಯ ದಾಖಲೆಗಳೊಂದಿಗೆ ಕೇವಲ 'ಮರು ಪರಿಶೀಲನೆ' ನಡೆಸಲು ತೀರ್ಮಾನಿಸಲಾಗಿದೆ.

PREV
15
ಗೃಹಲಕ್ಷ್ಮಿಗೆ ಹೊಸ ಅರ್ಜಿ ಬೇಕಿಲ್ಲ

ಬೆಂಗಳೂರು (ಜೂ.19): ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಈಗ ಮಹತ್ವದ ಬದಲಾವಣೆಯಾಗುತ್ತಿದೆ. ಯೋಜನೆಯಲ್ಲಿ ಆಗುತ್ತಿರುವ ಆರ್ಥಿಕ ಸೋರಿಕೆಯನ್ನು ತಡೆಯಲು ಸರ್ಕಾರ ಈಗ ಪಣ ತೊಟ್ಟಿದ್ದು, ಫಲಾನುಭವಿಗಳ ಪಟ್ಟಿಯನ್ನು ಶುದ್ಧೀಕರಿಸಲು ಮುಂದಾಗಿದೆ. ಆದರೆ, ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೈಬಿಟ್ಟು, ಕೇವಲ 'ಮರು ಪರಿಶೀಲನೆ' (Re-verification) ನಡೆಸಲು ಸರ್ಕಾರ ತೀರ್ಮಾನಿಸಿದೆ.

25
ಸತ್ತವರ ಖಾತೆಗೂ ಜಮೆಯಾಗುತ್ತಿದೆ ಹಣ!

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಪತ್ರ ಬರೆದು, ಮಾರ್ಚ್ 2026ರ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಈಗಾಗಲೇ ಮರಣ ಹೊಂದಿರುವ ಸುಮಾರು 1,95,224 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇನ್ನೂ ತಲಾ 2,000 ರೂ.ಗಳಂತೆ ಹಣ ಜಮೆಯಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 39.05 ಕೋಟಿ ರೂ. ಹಾಗೂ ವಾರ್ಷಿಕವಾಗಿ 468.54 ಕೋಟಿ ರೂ.ಗಳಷ್ಟು ಬೃಹತ್ ಮೊತ್ತ ಪೋಲಾಗುತ್ತಿದೆ. ಈ ಆರ್ಥಿಕ ನಷ್ಟವನ್ನು ತಡೆಯಲು ಕೂಡಲೇ ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕಬೇಕಿದೆ ಎಂದು ಹೇಳಿದ್ದರು.

35
ಮರು ಪರಿಶೀಲನಾ ಅರ್ಜಿ ಸಲ್ಲಿಕೆ

ಇದನ್ನು ಗಂಭೀರವಾಗಿ ಪರಿಗಣಿಸಿ ನೂತನ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಪೋಲಾಗುತ್ತಿರುವ ಹಣವನ್ನು ಉಳಿಸಲು, ಗೃಹಲಕ್ಷ್ಮಿ ಯೋಜನೆಯ ಎಲ್ಲ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಯೋಚಿಸಿತ್ತು. ಅದರಲ್ಲಿ ಅರ್ಹವಲ್ಲ ಎಲ್ಲರನ್ನೂ ಯೋಜನೆಯಿಂದ ಕೈಬಿಡಲು ತೀರ್ಮಾನಿಸಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ, ಈಗಿರುವ ಹೊಸ ಅರ್ಜಿಯನ್ನು ಪಡೆಯದೇ ಮರು ಪರಿಶೀಲನೆ ಅರ್ಜಿಯನ್ನು ಪಡೆಯುವುದಕ್ಕೆ ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮರು ಪರಿಶೀಲನಾ ಅರ್ಜಿಗಳನ್ನು ಪಡೆಯಲು ಅಧಿಕಾರಿಗಳು ಮಾದರಿ ಸಿದ್ಧಪಡಿಸಿದ್ದಾರೆ. ಈ ಬಾರಿ ಫಲಾನುಭವಿಗಳು ಈ ಕೆಳಗಿನ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಲಿದೆ.

45
ಮರು ಪರಿಶೀಲನೆಗೆ ಬೇಕಿರುವ ದಾಖಲೆಗಳೇನು?

ಆಧಾರ್ ಕಾರ್ಡ್

ಮತದಾರರ ಗುರುತಿನ ಚೀಟಿ (Voter ID)

ಪಡಿತರ ಚೀಟಿ (Ration Card)

ಆಧಾರ್ ಜೊತೆಗೆ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ನಕಲಿ ಅಥವಾ ಮೃತ ಫಲಾನುಭವಿಗಳನ್ನು ಸುಲಭವಾಗಿ ಗುರುತಿಸಲು ಸರ್ಕಾರ ಯೋಜಿಸಿದೆ. ಈಗಾಗಲೇ ಸಿದ್ಧಪಡಿಸಲಾದ ಮರುಪರಿಶೀಲನಾ ಅರ್ಜಿಯ ಮಾದರಿಯನ್ನು ಇಂದು ನಡೆದ ಸಭೆಯಲ್ಲಿ ಸಿಎಂ ಹಾಗೂ ಸಚಿವರಿಗೆ ತೋರಿಸಲಾಗಿದ್ದು, ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

55
ಪಂಚ ಗ್ಯಾರಂಟಿಗಳ ಮೇಲೆ ಸರ್ಕಾರದ ಖರ್ಚು ಎಷ್ಟು?

ರಾಜ್ಯ ಸರ್ಕಾರವು ಈವರೆಗೆ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಒಟ್ಟು 1,38,270.21 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಅವುಗಳ ವಿವರ ಹೀಗಿದೆ:

ಗೃಹಲಕ್ಷ್ಮಿ: 1.24 ಕೋಟಿ ಮಹಿಳೆಯರಿಗೆ ಒಟ್ಟು 72,253 ಕೋಟಿ ರೂ. ಸಂದಾಯವಾಗಿದೆ.

ಗೃಹಜ್ಯೋತಿ: 1.64 ಕೋಟಿ ಜನರಿಗೆ 26,115 ಕೋಟಿ ರೂ. ಮೌಲ್ಯದ ಉಚಿತ ವಿದ್ಯುತ್ ನೀಡಲಾಗಿದೆ.

ಅನ್ನಭಾಗ್ಯ: ಈವರೆಗೆ ಒಟ್ಟು 18,897 ಕೋಟಿ ರೂ. ಪಾವತಿಸಲಾಗಿದೆ.

ಶಕ್ತಿ ಯೋಜನೆ: ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 19,890 ಕೋಟಿ ರೂ. ವೆಚ್ಚವಾಗಿದೆ.

ಯುವನಿಧಿ: ನಿರುದ್ಯೋಗಿಗಳಿಗೆ 1,115 ಕೋಟಿ ರೂ. ಸಂದಾಯವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories