ಇದು ಕರ್ನಾಟಕವೋ? ಇಸ್ಲಾಮಿಕ್ ರಾಷ್ಟ್ರವೋ?: ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ್‌ ಜೋಶಿ ವಾಗ್ದಾಳಿ

First Published Apr 8, 2024, 12:56 PM IST

ತಮ್ಮ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದವರ ಮೇಲೆ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿರುವುದು ತುಷ್ಟಿಕರಣದ ಪರಾಕಾಷ್ಠೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.  

ಹುಬ್ಬಳ್ಳಿ (ಏ.08): ತಮ್ಮ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದವರ ಮೇಲೆ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿರುವುದು ತುಷ್ಟಿಕರಣದ ಪರಾಕಾಷ್ಠೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ 6 ಗಂಟೆಗೂ ಮುನ್ನ ನಮಾಜ್ ಮಾಡಬಹುದು. ಆದರೆ, ಹಿಂದೂಗಳು ಹನುಮಾನ್ ಚಾಲೀಸಾ ಹಾಕುವುದು ತಪ್ಪೇ?. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದರು.

ಈ ಹಿಂದೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೂ ಹೀಗೆಯೇ ಹಿಂದೂ ವಿರೋಧಿನೀತಿಅನುಸರಿಸಿತ್ತು.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕರ್ನಾಟಕವನ್ನು ಆಳುತ್ತಿದ್ದಾರೋ? ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದಾರೋ? ಎಂದು ತರಾಟೆಗೆ ತೆಗೆದುಕೊಂಡರು.  ರಾಜ್ಯ ಸರ್ಕಾರ ಕೂಡಲೇ ಹನುಮಾನ್ ಚಾಲೀಸಾ ಪಠಿಸಿದವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಒಂದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ: ರಾಜ್ಯಕ್ಕೆ ಕೇಂದ್ರದ ಅನುದಾನ ಹಂಚಿಕೆ ಬಗ್ಗೆ ಈಗಾಗಲೇ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರ ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಅನುದಾನ ಹಂಚಿಕೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎನ್ನುತ್ತಿದ್ದಾರೆ. ಬಹಿರಂಗ ಚರ್ಚೆ ಎಂದರೇನು?. ಸಾರ್ವಜನಿಕರನ್ನು ಕರೆ ತಂದು ಹೊಡೆದಾಡುವುದೇ?. ಮಾಧ್ಯಮಗಳ ಮೂಲಕ ಸದ್ಯ ನಡೆಯುತ್ತಿರುವುದು ಬಹಿರಂಗ ಚರ್ಚೆ ಅಲ್ಲವೇ ಎಂದರು.
 

ಸಿದ್ದರಾಮಯ್ಯಗೆ ಸಿದ್ಧಾಂತಗಳೇ ಇಲ್ಲ: ಸಿದ್ದರಾಮಯ್ಯಗೆ ಸಿದ್ಧಾಂತಗಳೇ ಇಲ್ಲ. ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್‌ ಹಾಗೂ ಸೋನಿಯಾಗಾಂಧಿ ಬಗ್ಗೆ ಸಾಕಷ್ಟು ಬೈದಿದ್ದಾರೆ. ಅಂಥವರೆ ಇದೀಗ ರಾಹುಲ್‌ ಗಾಂಧಿ ಎದುರಿಗೆ ಟೊಂಕ ಬಗ್ಗಿಸಿ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು  ಕಿಡಿಕಾರಿದರು.

ರಾಷ್ಟ್ರಪತಿ, ಪ್ರಧಾನಿ ಮಾಡುತ್ತೇನೆ ಎಂದರೂ ಬಿಜೆಪಿ ಸೇರಲ್ಲ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಮಾಧ್ಯಮಗಳೊಂದಿಗೆ ಮಾತನಾಡಿ ತಿರುಗೇಟು ನೀಡಿದರು.ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆದಿಲ್ಲ. ಅವರು ಯಾಕೆ ಈ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದರು.

click me!