ರಾಜ್ಯ ಸರ್ಕಾರ ರಿಪೇರಿಯಾಗದ ಗಾಡಿಯಂತಿದೆ: ಆರ್‌.ಅಶೋಕ್‌ ಲೇವಡಿ

First Published Feb 15, 2024, 3:30 AM IST

ರಾಜ್ಯಪಾಲರ ಭಾಷಣದಲ್ಲಿ ಯಾವ ವಿಚಾರಗಳನ್ನು ಹೇಳಿಸಬೇಕು ಎಂಬುದನ್ನು ತಿಳಿಯದೆ ಕೇಂದ್ರದ ಯೋಜನೆಗಳನ್ನು ತಮ್ಮದೇ ಎಂದು ರಾಜ್ಯ ಸರ್ಕಾರ ಬಿಂಬಿಸಿಕೊಂಡಿದ್ದು, ಕೆಟ್ಟು ಹೋಗಿ ರಿಪೇರಿಯಾಗದ ಗಾಡಿಯಂತಾಗಿದೆ ಸರ್ಕಾರದ ಪರಿಸ್ಥಿತಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ. 
 

ವಿಧಾನಸಭೆ (ಫೆ.15): ರಾಜ್ಯಪಾಲರ ಭಾಷಣದಲ್ಲಿ ಯಾವ ವಿಚಾರಗಳನ್ನು ಹೇಳಿಸಬೇಕು ಎಂಬುದನ್ನು ತಿಳಿಯದೆ ಕೇಂದ್ರದ ಯೋಜನೆಗಳನ್ನು ತಮ್ಮದೇ ಎಂದು ರಾಜ್ಯ ಸರ್ಕಾರ ಬಿಂಬಿಸಿಕೊಂಡಿದ್ದು, ಕೆಟ್ಟು ಹೋಗಿ ರಿಪೇರಿಯಾಗದ ಗಾಡಿಯಂತಾಗಿದೆ ಸರ್ಕಾರದ ಪರಿಸ್ಥಿತಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ. ಬುಧವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲದೆ ದಲಿತರ ಹಣವನ್ನು ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ. ಕೆಟ್ಟು ಹೋಗಿ ರಿಪೇರಿಯಾಗದ ಗಾಡಿಯಂತೆ, ಸರ್ಕಾರ ಕೆಟ್ಟು ದುರಸ್ತಿಯಾಗದೆ ಸ್ಥಗಿತಗೊಂಡಿದೆ ಎಂದು ಟೀಕಿಸಿದರು.

ಹಣವನ್ನು ಸಮಾನವಾಗಿ ಹಂಚಬೇಕೆನ್ನುವುದು ಸರ್ಕಾರದ ಉದ್ದೇಶ ಎಂದು ಹೇಳುತ್ತಿದೆಯಾದರೂ, ದಲಿತರಿಗೆ ಮೀಸಲಿಟ್ಟ 11,400 ಕೋಟಿ ರು. ಅನ್ನು ಬೇರೆ ಕಡೆಗೆ ಬಳಕೆ ಮಾಡಲಾಗಿದೆ. ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ. ಶಕ್ತಿ ಯೋಜನೆಯಿಂದ ಶಾಲಾ ಮಕ್ಕಳು ಕಷ್ಟ ಅನುಭವಿಸುವಂತಾಗಿದೆ. ಮಹಿಳೆಯರಿಗೆ ಎರಡು ಸಾವಿರ ರು. ಅನ್ನು ಒಂದು ತಿಂಗಳು ನೀಡಿ ಮುಂದಿನ ತಿಂಗಳು ಕೊಟ್ಟೇ ಇಲ್ಲ. ಯಾವುದೇ ಕಾರ್ಯಕ್ರಮ ಮಾಡುವಾಗ ಅದರಿಂದ ಏನು ಪರಿಣಾಮ ಎಂದು ಆಲೋಚಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹಾಲು ಉತ್ಪಾದನೆ ಕುಸಿತ, ರೈತರಿಗೆ ಪ್ರೋತ್ಸಾಹ ದಿನವೂ ವಿತರಣೆ ಮಾಡಿಲ್ಲ: ಬಿಜೆಪಿ ಸರ್ಕಾರದ ವೇಳೆ 80-85 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಏಳು ತಿಂಗಳಿಂದ 10 ಲಕ್ಷ ಲೀಟರ್ ಇಳಿಕೆಯಾಗಿದೆ. ರೈತರಿಗೆ ಏಳು ತಿಂಗಳಿಂದ 617 ಕೋಟಿ ರು. ಪ್ರೋತ್ಸಾಹ ಧನ ನೀಡಿಲ್ಲ. ಬ್ರ್ಯಾಂಡ್ ಬೆಂಗಳೂರು ಬಗ್ಗೆ ಭಾಷಣದಲ್ಲಿ ಉಲ್ಲೇಖಿಸಿದ್ದು, ಸುರಂಗ ರಸ್ತೆ ಬಗ್ಗೆ ಹೇಳಿದ್ದಾರೆ. ಮೇಲಿರುವ ರಸ್ತೆಗಳಲ್ಲೇ ಗುಂಡಿಗಳಿರುವಾಗ ಸುರಂಗ ಎಲ್ಲಿ ಮಾಡುತ್ತಾರೆ ಎಂಬುದಾಗಿ ಯೋಚಿಸಬೇಕು. ಸುರಂಗ ಮಾರ್ಗಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ. ಇದಕ್ಕೂ ಮೊದಲು ರಸ್ತೆ ದುರಸ್ತಿ ಮಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
 

R Ashok

ಕೇಂದ್ರದಿಂದ ಅನ್ಯಾಯವಾಗಿಲ್ಲ: ಕೇಂದ್ರ ಸರ್ಕಾರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ರ ಅಭಿವೃದ್ಧಿಗೆ ಐದು ಸಾವಿರ ಕೋಟಿ ರು. ದೊರೆತಿದೆ. 2009-14 ರ ಅವಧಿಯಲ್ಲಿ ರೈಲ್ವೆ ಯೋಜನೆಗೆ 835 ಕೋಟಿ ರು. ಲಭಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ 3,424 ಕೋಟಿ ರೂ. ದೊರೆತಿದೆ. ಕರಾವಳಿ ಅಭಿವೃದ್ಧಿಗೆ ಸಾಗರಮಾಲಾ ಯೋಜನೆಯಡಿ 1,441 ಕೋಟಿ ರು. ಸಿಕ್ಕಿದೆ. ಆದ್ದರಿಂದ ಕಾಂಗ್ರೆಸ್ ಹೇಳುವಂತೆ ಕೇಂದ್ರ ಸರ್ಕಾರದಿಂದ ಅನ್ಯಾಯ ಎನ್ನುವುದು ತಪ್ಪು ಎಂದು ಅಶೋಕ್‌ ತಿಳಿಸಿದರು.

click me!