ಕಂದಾಯ ಸಚಿವ ಕೃಷ್ಣಬೈರೇಗೌಡ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿರುವ ಗಂಭೀರ ಆರೋಪ

Published : Dec 17, 2025, 05:06 PM IST

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೋಲಾರದಲ್ಲಿ 21 ಎಕರೆ ಸ್ಮಶಾನ ಮತ್ತು ಕೆರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂದು ವಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಇದು ತಮ್ಮ ಪಿತ್ರಾರ್ಜಿತ ಆಸ್ತಿ  ಎಂದು ಸ್ಪಷ್ಟನೆ ನೀಡಿದ್ದಾರೆ.

PREV
16
ಕೃಷ್ಣಬೈರೇಗೌಡ ವಿರುದ್ಧ ಜಮೀನು ನುಂಗಿದ ಆರೋಪ

ಬೆಂಗಳೂರು: ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕೋಲಾರ ಜಿಲ್ಲೆಯ ನರಸಾಪುರ ಹೋಬಳಿ ಗರುಡನಪಾಳ್ಯ ದಲ್ಲಿ 21 ಎಕರೆ ಜಮೀನು ನುಂಗಿದ ಆರೋಪವಿದೆ. ನಕಲಿ ದಾಖಲೆ ಸೃಷ್ಟಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಮುಖಂಡ ತಮ್ಮೇಶ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸ್ವತಃ ಸಚಿವರೇ ಸ್ಪಷ್ಟನೆ ಕೂಡ ನೀಡಿದ್ದಾರೆ.

26
ಛಲವಾದಿ ನಾರಾಯಣ ಸ್ವಾಮಿ ಆರೋಪವೇನು?

ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಸರ್ಕಾರದ ಮುಖ್ಯಮಂತ್ರಿಗಳೇ ಕೂಡ ಹಗರಣದಲ್ಲಿ 14 ಸೈಟು ಪಡೆದು ವಾಪಸ್ ಕೊಟ್ಟರು. ಪ್ರಿಯಾಂಕ್ ಖರ್ಗೆ ಐದು ಎಕರೆ ಜಾಗ ಪಡೆದು ವಾಪಸ್ ನೀಡಿದರು. ಈ ಎರಡೂ ಕೇಸ್ ಕೇಸೇ ಅಲ್ಲ. ಕದ್ದ ಮಾಲು ವಾಪಸ್ ಕೊಟ್ಟರೆ ಅದು ಕಳ್ಳತನವೇ ಅಲ್ಲ ಎಂಬಂತೆ ಪ್ರದರ್ಶನ ಮಾಡಿದೆ. ಸರ್ವೆ ನಂ. 47 , 1 ಎಕರೆ ಜಾಗ,ಗರುಡನಪಾಳ್ಯ ಗ್ರಾಮ ಕೋಲಾರ ಜಿಲ್ಲೆ . ಮತ್ತು ಸರ್ವೆ 46, 20.16 ಎಕರೆ ಜಾಗ. ಗರುಡನಪಾಳ್ಯ, ನರಸಾಪುರ ಹೋಬಳಿ ಕೋಲಾರ. ಒಟ್ಟು 21.16 ಎಕರೆ. ಇದು ಕೋಟ್ಯಾಂತರ ಮೌಲ್ಯದ ಜಾಗ, ಇದು ಸ್ಮಶಾನದ ಜಮೀನು. ಯಾರೂ ಕೂಡ ತಮ್ಮ ಹೆಸರಿಗೆ ಮಾಡಿಕೊಳ್ಳಲು ಆಗಲ್ಲ. ಆದರೆ ಅಕ್ರಮ ಎಸಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಕೃಷ್ಣ ಭೈರೇಗೌಡರು ತಮ್ಮ ಹೆಸರಿಗೆ ಸ್ಮಶಾನ ಜಮೀನು ಬರೆಸಿಕೊಂಡಿದ್ದಾರೆ. ದಾಖಲೆ ಪ್ರಕಾರ ಕೆರೆ ಜಮೀನು ಇದು, ಸ್ಮಶಾನಕ್ಕೆ ಬಿಡಲಾಗಿದೆ. ಕೆರೆ ಜಾಗವನ್ನು ಕೃಷ್ಣ ಭೈರೇಗೌಡ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. 21.16 ಎಕರೆ ಜಮೀನು ಇವರ ಹೆಸರಿಗೆ ಮಾಡಿಕೊಂಡಿದ್ದಾರೆ. ಮೂಲ ದಾಖಲೆಗಳ ಪ್ರಕಾರ ಸರ್ಕಾರಿ ಸ್ಮಶಾನ ಖರಾಬು ಅಂತ ಇದೆ.

36
ಇಡೀ ಕುಟುಂಬದ ಹೆಸರುಗಳು ಇಲ್ಲಿವೆ: ಛಲವಾದಿ ನಾರಾಯಣ ಸ್ವಾಮಿ

ಕಂದಾಯ ಸಚಿವರ ಖಾತೆಗೆ ಈ ಜಮೀನು ಹೇಗೆ ಬರುತ್ತದೆ ? ಯಾಕೆ ಕೃಷ್ಣ ಭೈರೇಗೌಡ ಹೆಸರಿಗೆ ಸ್ಮಶಾನ ಖರಾಬು ಜಮೀನು ಬಂದಿದೆ? ಮ್ಯುಟೇಷನ್ ನಲ್ಲಿ ಖರಾಬ್ ಅಂತ ಬ್ರ್ಯಾಕೇಟ್ ನಲ್ಲಿದೆ. ಕೃಷ್ಣ ಭೈರೇಗೌಡ ರಾಜೀನಾಮೆ ಕೊಡಬೇಕು. ಮಿಸ್ಟರ್ ಕ್ಲೀನ್ ಅಂತ ಬಿಂಬಿತವಾಗಿದೆ. ಹೀ ಈಸ್ ನಾಟ್ ಮಿಸ್ಟರ್ ಕ್ಲೀನ್. ಹೀ ಶುಡ್ ರಿಸೈನ್. ಸರ್ಕಾರ ಇದನ್ನು ತನಿಖೆಗೆ ಒಳಪಡಿಸಬೇಕು. ತಕ್ಷಣ ಇದನ್ನು ತನಿಖೆ ಮಾಡಬೇಕು. 6-11- 1978 ರಲ್ಲಿ ಕೆರೆ ಅಂತ ಇದೆ. ಈಗ ಎಲ್ಲ ದಾಖಲೆಗಳನ್ನು ತಿದ್ದುಪಡಿ ಮಾಡಲಾಗಿದೆ. ಎರಡೂ ಕೂಡ 20-4-2024 ರಲ್ಲಿ ಕೃಷ್ಣ ಭೈರೇಗೌಡ ಹೆಸರಲ್ಲಿಯೇ ಇದೆ. ಮಾರುಕಟ್ಟೆ ವ್ಯಾಲ್ಯು ಐದಾರು ಕೋಟಿ ಆಗುತ್ತದೆ. ಕೃಷ್ಣ ಭೈರೇಗೌಡ ಬಿನ್ ಸಿ ಭೈರೇಗೌಡ. ಅವರೇ ಅಲ್ಲ ಅನ್ನೋದಾದರೆ ಹೇಳಿಕೆ ಕೊಡಲಿ. ಅವರ ಇಡೀ ಕುಟುಂಬದ ಹೆಸರುಗಳು ಇಲ್ಲಿವೆ ಎಂದು ಆರೋಪಿಸಿದ್ದಾರೆ.

46
ತನಿಖೆಗೆ ಒಳಪಡಿಸಬೇಕು: ಎನ್ ರವಿಕುಮಾರ್

ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಹೇಳಿಕೆ. 14 ಸೈಟು ವಾಪಸ್ ಕೊಟ್ಟರು, ಹ್ಯುಬ್ಲೊಟ್ ವಾಚ್ ವಾಪಸ್ ಕೊಟ್ಟರು. ಈಗಿನ ಸರದಿ ಕೃಷ್ಣ ಭೈರೇಗೌಡ ಸರದಿ. ಕೆರೆಯ ಜಮೀನನ್ನು ಸ್ಮಶಾನದ ಜಮೀನನ್ನು ಕೃಷ್ಣ ಭೈರೇಗೌಡ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಕೆರೆ ಹಾಗೂ ಸ್ಮಶಾನ ಖಾಸಗಿ ವ್ಯಕ್ತಿ ಗಳ ಹೆಸರಿಗೆ ಮಾಡಿಕೊಳ್ಳಲು ಆಗುವುದಿಲ್ಲ. ಕೆರೆಗೆ ಮಾರ್ಕ್ ಮಾಡಿ ಖರಾಬು ಅಂತ ಹೇಗೆ ಮಾಡಿದ್ರು? ಸಿಲ್ವರ್ ಟೀಕ್ ಬೆಳೆಯುತ್ತಾರಂತೆ ಅಲ್ಲ. ಇದನ್ನು ತನಿಖೆಗೆ ಒಳಪಡಿಸಬೇಕು, ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ.

56
ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾಡಿಕೊಂಡಿದ್ದಾರೆ: ತಮ್ಮೇಶ್ ಗೌಡ

ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಹೇಳಿಕೆ ನೀಡಿ, ವೈಟ್ ಕಾಲರ್ ರಾಜಕಾರಣಿ ಭ್ರಷ್ಟಾಚಾರ ಇಲ್ಲ ಎನ್ನುವ ಮಂತ್ರಿ ಕೃಷ್ಣ ಭೈರೇಗೌಡ. ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬ್ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಫೋರ್ಜರಿ ದಾಖಲೆಗಳನ್ನು ಸೃಷ್ಟಿ ಮಾಡಿ ತಮ್ಮ ಹೆಸರಿಗೆ ಖರಾಬ್ ಜಮೀನು ಮಾಡಿಸಿಕೊಂಡಿದ್ದಾರೆ. ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡ್ತೀವಿ ಅಂತ ಹೇಳುವ ಅವರ ನಿಯತ್ತು ಏನು ಎಂಬುದು ಈಗ ಹೊರಗೆ ಬಂದಿದೆ. ಮೂಲ ದಾಖಲೆಗಳೇ ಫೋರ್ಜರಿ ಮಾಡಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಕಂದಾಯ ಸಚಿವರು ಯಾವ ರೀತಿ ಪ್ರಭಾವ ಬಳಸಿದರು...? ಕಂದಾಯ ಸಚಿವರು ಆ ಸ್ಥಾನದಲ್ಲಿ ಇರಲು ಯೋಗ್ಯತೆ ಅರ್ಹತೆ ಇದೆಯಾ? ಸ್ವಜನಪಕ್ಷಪಾತದಲ್ಲಿ ಇರಬೇಕಾದರೆ ಅವರು ಆ ಸ್ಥಾನದಲ್ಲಿ ಮುಂದುವರಿಯಲು ಅರ್ಹರಾ?ಕೃಷ್ಣ ಭೈರೇಗೌಡ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.

66
ಕೃಷ್ಣಭೈರೇಗೌಡ ಸ್ಪಷ್ಟನೆ

ಸರ್ಕಾರಿ ಸ್ಮಶಾನ, ಕೆರೆ ಜಾಗ ಒತ್ತುವರಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಇಲ್ಲದೇ ಇರೋದನ್ನ ಹುಡುಕಿ ಆರೋಪ ಮಾಡೋದು ಅವರ ಸಂಸ್ಕೃತಿ. ನಮ್ಮ ತಾತನವರಿಂದ ನಮಗೆ ವಿಭಾಗದ ಮೂಲಕ ಬಂದಿರುವ ಆಸ್ತಿ. ಗ್ರ್ಯಾಂಟ್ ಮಾಡಿಸಿಕೊಂಡಿರೋದು ಅಲ್ಲ. ಕ್ರಮದ ಮೂಲಕ ತೆಗೆದುಕೊಂಡು, ಕುಟುಂಬದಲ್ಲಿ ಭಾಗ ಆಗಿ ಬಂದಿದೆ. ಹಿಂದೆ ಏನಾಗಿದೆ ಅಂತಾ ಅವ್ರು ಚೆಕ್ ಮಾಡಲಿ. ನಮ್ಮ ತಾತನವರು ಖರೀದಿ ಮಾಡಿ ಬಂದಿರೋದು ಅಲ್ವಾ ಅಂತಾ ಚೆಕ್ ಮಾಡಲಿ. ಲೋಕಾಯುಕ್ತದಿಂದ ಬೇಕಾದ್ರೆ ದೂರು ಕೊಡಲಿ. ಇಲ್ಲದೇ ಇದ್ರೆ ಬೇರೆ ತನಿಖಾ ಸಂಸ್ಥೆಯಿಂದ ಮಾಡಿಸಲಿ. 78 ರಲ್ಲಿ ನಾನು ಹುಟ್ಟಿ ಐದು ವರ್ಷ. ತಪ್ಪಾಗಿದ್ರೆ ಕಂಪ್ಲೇಂಟ್ ಕೊಡಲಿ, ತನಿಖೆ ಮಾಡಿಸಲಿ. ಯಾವುದೋ ಪಿತ್ರಾರ್ಜಿತ ಆಸ್ತಿ ನಮಗೆ ಬಂದಿರೋದು. ಅದನ್ನ ರಾಜಕೀಯವಾಗಿ ಕೆಸರೆರಚಾಟ ಮಾಡೋದು ಅವ್ರು ವೃತ್ತಿ ಇರಬಹುದು. ಕಾನೂನು ಪ್ರಕಾರ ನಾನು ನಡೆದುಕೊಳ್ಳಬೇಕು, ಅವರೂ ನಡೆದುಕೊಳ್ಳಬೇಕು. ಜಿಲ್ಲಾಧಿಕಾರಿಗಳಿಂದಲೂ ಮಾಡಿಸಲಿ. ಆರೋಪ ಮಾಡೋರು‌ ಮಾಡ್ತಾರೆ. ತನಿಖೆ ಮಾಡುವಾಗ ಕಾನೂನು ಇರುತ್ತೆ, ಸ್ವತಂತ್ರವಾಗಿ ತನಿಖೆ ಮಾಡಲಿ. 2000 ಇಸವಿಗೂ ಮೊದಲು ಕೈ ಬರಹ ಇದಿದ್ದು, ಎಲ್ಲಾ ದಾಖಲೆಗಳನ್ನ ತೆಗೆದು ನೋಡಲಿ ಎಂದು ಹೇಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories