ಕ್ರಾಸ್‌ ವೋಟಿಂಗ್ ಭಯದಿಂದ ಕಾಂಗ್ರೆಸ್‌ನಿಂದ ರೆಸಾರ್ಟ್‌ ರಾಜಕಾರಣ: ಮಾಜಿ ಸಿಎಂ ಬೊಮ್ಮಾಯಿ

First Published | Feb 27, 2024, 1:30 AM IST

ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್‌ ವೋಟಿಂಗ್ ಭಯದಿಂದ ಕಾಂಗ್ರೆಸ್‌ ರೆಸಾರ್ಟ್‌ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸವಣೂರು (ಫೆ.27): ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್‌ ವೋಟಿಂಗ್ ಭಯದಿಂದ ಕಾಂಗ್ರೆಸ್‌ ರೆಸಾರ್ಟ್‌ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸವಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರ ಸಂಖ್ಯೆ 66 ಹಾಗೂ ಜೆಡಿಎಸ್ ಸಂಖ್ಯೆ 19 ಇದೆ. ನಮ್ಮಲ್ಲಿ 40 ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ಜೆಡಿಎಸ್‌ನ ಕುಪೇಂದ್ರ ರೆಡ್ಡಿಯವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ನಾಲ್ವರು ಪಕ್ಷೇತರರು ಇರುವುದರಿಂದ ಅವರ ಪ್ರಯತ್ನ ಅವರು ಮಾಡುತ್ತಿದ್ದಾರೆ. 

ಕಾಂಗ್ರೆಸ್ಸಿನವರಿಗೆ ಮೂವರು ಆಯ್ಕೆಯಾಗಲು ಏನು ತೊಂದರೆಯಿಲ್ಲ. ಅವರಲ್ಲಿರುವ ಗುಂಪುಗಾರಿಕೆ ಬಹಳ ಸ್ಪಷ್ಟವಾಗುತ್ತಿದೆ. ಕ್ರಾಸ್ ವೋಟಿಂಗ್ ಆಗುವ ಭಯದಿಂದ ಕಾಂಗ್ರೆಸ್ಸಿನವರು ರೆಸಾರ್ಟ್‌ ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್ ಮತ್ತು ಪಕ್ಷೇತರ ಶಾಸಕರ ಮೇಲೆ ಡಿ.ಕೆ. ಶಿವಕುಮಾರ ಪ್ರಭಾವ ಬೀರುವ ಕೆಲಸ ನಡೆಸಿದ್ದಾರೆ. ಕುಪೇಂದ್ರ ರೆಡ್ಡಿ ಆಯ್ಕೆಯಾಗುತ್ತಾರೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Tap to resize

ವಿಚಾರಧಾರೆಗಳು ಎಲ್ಲ ಕಾಲಕ್ಕೂ ಜೀವಂತ: ಬದುಕಿಗೆ ಹತ್ತಿರವಾದ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಜೀವಂತವಾಗಿರುತ್ತವೆ. ಅಂತೆಯೇ ತರಳಬಾಳು ಜಗದ್ಗುರು ಬೃಹನ್ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರ ವಿಚಾರಗಳೂ ಸಹ ಇಂದಿಗೂ ಜೀವಂತವಾಗಿವೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನ ಭಾಗವಹಿಸಿ ಮಾತನಾಡಿದ ಅವರು ೮೦೦ ವರ್ಷಗಳ ನಂತರವೂ ಮರುಳಸಿದ್ಧರ ಚಿಂತನೆಗಳು ಬದುಕಿವೆ ಎಂದರೆ ಅವುಗಳಲ್ಲಿ ಜೀವನದ ವಿಚಾರಧಾರೆ ಅಡಗಿದೆ ಎಂದೇ ಅರ್ಥ ಎಂದರು.

ಸಾಮಾಜಿಕ ನ್ಯಾಯದ ಬಗ್ಗೆ ರಾಜಕಾರಣಿಗಳಾದ ನಾವು ಈಗ ಮಾತನಾಡುತ್ತಿದ್ದೇವೆ. ಆದರೆ ತರಳಬಾಳು ಪರಂಪರೆಯ ಹಿರಿಯ ಗುರುಗಳಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸ್ವಾತಂತ್ರ್ಯಪೂರ್ವದಲ್ಲಿಯೇ ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದರು.ಸಮಾಜದಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಬಸವಣ್ಣ ಮತ್ತು ವಿಶ್ವಬಂಧು ಮರುಳಸಿದ್ಧತ ತತ್ವ ಸಿದ್ಧಾಂತಗಳನ್ನು ತಲೆ ಮೇಲೆ ಇರಿಸಿಕೊಂಡು ಬದುಕಿದರು. ಮುಂದುವರಿದು ಈಗಿನ ಗುರುಗಳ ರೈತರ ಶ್ರೇಯೋಭಿವೃದ್ಧಿ ಮೂಲಕ ಅಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನಾಡಿನಲ್ಲಿ ಭೀಕರ ಬರಗಾಲ ಇರುವ ಸಂದರ್ಭದಲ್ಲಿ ಮಠದ ಸಂಭ್ರಮದ ಆಚರಣೆಯನ್ನು ಸರಳಗೊಳಿಸಿ ಆಚರಿಸುತ್ತಿರುವುದು ತರಳಬಾಳು ಶ್ರೀಗಳ ಸಮಾಜಮುಖಿ ಚಿಂತನೆಯಾಗಿದೆ ಎಂದರು. ರಾಜ್ಯದಲ್ಲಿ ಮಠಗಳಿಂದ ಬಹುದೊಡ್ಡ ಸಾಮಾಜಿಕ ಕ್ರಾಂತಿ ಆಗಿದೆ. ಶಿಕ್ಷಣ ಮತ್ತು ದಾಸೋಹ ಕ್ಷೇತ್ರದಲ್ಲಿ ನಮ್ಮ ರಾಜ್ಯದ ಮಠಗಳು ಮಾಡಿರುವ ಸೇವೆ ದೇಶದ ಮತ್ತಾವ ರಾಜ್ಯದಲ್ಲಿಯೂ ಆಗಿಲ್ಲ ಎಂದರು. ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸದ್ಧರ್ಮ ಸಿಂಹಾಸನಾರೋಹಣ ಮಾಡಿ ಅನುಗ್ರಹಿಸಿದರು. 

Latest Videos

click me!