ಚಿತ್ರದುರ್ಗ (ಫೆ.20): ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ನೊಬೆಲ್ ಪ್ರಶಸ್ತಿ ಕೊಡಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ವೇಳೆಗೆ ಪರಿಶಿಷ್ಟರಿಗೆ ಆಹ್ವಾನ ನೀಡಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಮಾದಾರ ಚನ್ನಯ್ಯ ಶ್ರೀ, ಕಾಗಿನೆಲೆ ಶ್ರೀ ಸೇರಿ ಅನೇಕರು ಹೋಗಿ ಬಂದಿದ್ದಾರೆ. ಅಯೋಧ್ಯೆಗೆ ತೆರಳಿದ್ದಕ್ಕೆ ಶ್ರೀಗಳು ಆನಂದ ಪಟ್ಟಿದ್ದಾರೆ.
ಇದಕ್ಕೆ ರಾಹುಲ್ ಏನು ಹೇಳುತ್ತಾರೆ ಎಂದರು. ರಾಮಮಂದಿರ ನಿರ್ಮಾಣದಿಂದ ದೇಶದ ಜನರ ಒಗ್ಗೂಡಿಕೆ ಸಾಧ್ಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಲಾಭ ಆಗಲಿದೆ. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಒಂದು ಕಡೆ ಮೋದಿ ಆಡಳಿತ, ಮತ್ತೊಂದು ಕಡೆ ರಾಮ ಬಿಜೆಪಿಯ ಕಾಯಲಿದ್ದಾರೆ ಎಂದರು. ಮುಖ್ಯಮಂತ್ರಿ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾರೆ.
ಒಬ್ಬ ನಿರುದ್ಯೋಗಿಗೂ ಈವರೆಗೆ ಒಂದು ರುಪಾಯಿ ಕೊಟ್ಟಿಲ್ಲ. ಪಾಪರ್ ಆಗಿದ್ದೇವೆಂದು ಹೇಳಲೂ ಸಿಎಂ, ಡಿಸಿಎಂ ಒಂದಾಗಲ್ಲ. ವಿದ್ಯುತ್ ಅಭಾವವಿದ್ದಾಗಲೂ ಅನೇಕ ಸಲ ದರ ಹೆಚ್ಚಿಸಿದ್ದಾರೆ ಎಂದರು.ಮಾದಾರ ಚನ್ನಯ್ಯಶ್ರೀ ಲೋಕಸಭೆಗೆ ಸ್ಪರ್ಧಿಸುವ ವಿಚಾರ ನನಗೆ ಗೊತ್ತಿಲ್ಲ. ಹಾಗೊಂದು ವೇಳೆ ಅವರು ಅಭ್ಯರ್ಥಿಯಾದರೆ ಖುಷಿ ಪಡುವುದಾಗಿ ಈಶ್ವರಪ್ಪ ಹೇಳಿದರು.
ಫಿರೋಜ್ ಗಾಂಧಿ ಜಾತಿ ಯಾವುದು?: ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿ ಮೋದಿಯವರ ಜಾತಿ ಯಾವುದೇಂದು ತಿಳಿದುಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. 1994 ಗುಜರಾತ್ ನಲ್ಲಿ ಕಾಂಗ್ರೆಸ್ ಸರ್ಕಾರ ನರೇಂದ್ರ ಮೋದಿ ಅವರ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿತ್ತು.
ಈ ಮಾಹಿತಿ ಇಲ್ಲದ ಅಜ್ಞಾನಿ ರಾಹುಲ್ ಗಾಂಧಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗಕ್ಕೆ ಸೇರಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ನವರಿಗೆ ಎಷ್ಟು ಬೈದ್ರು ಮಾನ ಮರ್ಯಾದೆ ಇಲ್ಲ. ಇನ್ನೂ ಯಾವ ಯಾವ ಪದದಲ್ಲಿ ಬೈಯಬೇಕೋ ಗೊತ್ತಿಲ್ಲ. ಗೊತ್ತಿಲ್ಲದಿದ್ದರೆ ಗೊತ್ತಿದ್ದವರ ಬಳಿ ಕೇಳಿಕೊಳ್ಳುತ್ತಾರೆ. ಆದರೆ, ರಾಹುಲ್ ಗಾಂಧಿ ಎಲ್ ಕೆಜಿ ವಿದ್ಯಾರ್ಥಿಗೂ ಕಡೆ ಎಂದು ಚಾಟಿ ಬೀಸಿದರು.