PayCM: ಬಿಜೆಪಿ ಭ್ರಷ್ಟಾಚಾರ ಬಿಟ್ಹಾಕಿ, ಕ್ರಿಯೇಟಿವಿಟಿಗೆ ಮಾತ್ರ ನೆಟ್ಟಿಗರು ಫುಲ್ ಫಿದಾ

First Published Sep 23, 2022, 10:23 AM IST

ಕರ್ನಾಟಕದೆಲ್ಲೆಡೆ PayCM ಅಭಿಯಾನದ್ದೇ ಸದ್ದು. ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇನೂ ಆ್ಯಕ್ಟಿವ್ ಇಲ್ಲದ ಕಾಂಗ್ರೆಸ್, ಇದೀಗ ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಹೊಸ ಸೋಷಿಯಲ್ ಮೀಡಿಯಾ ಅಭಿಯಾನದೊಂದಿಗೆ ಸದ್ದು ಮಾಡುತ್ತಿದೆ. ಬಿಜೆಪಿ ಸರಕಾರದ ಭ್ರಷ್ಟಾಚಾರ, 40 ಪರ್ಸೆಂಟ್ ಕಮಿಷನ್, ಕೆಲವು ಅಭಿವೃದ್ಧಿಗಳನ್ನು ಕಾರ್ಯಗಳನ್ನು ಜಾರಿಗೊಳಿಸುವಲ್ಲಿ ಸಚಿವರ ವಿಫಲ ಎಲ್ಲವೂ ಒಂದೆಡೆ ಇರಲಿ. ಆದರೆ, ಈ ಆಭಿಯಾನದ ಕ್ರಿಯೇಟಿವಿಟಿಗೆ ಮಾತ್ರ ಸಿಕ್ಕಾಪಟ್ಟೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದರ ಹಿಂದಿರುವ ಶಕ್ತಿಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದು, ಸೋಷಿಯಲ್ (Social Media) ಮೀಡಿಯಾ ಚರ್ಚೆಯಾಗುತ್ತಿದೆ.

ಕಾಂಗ್ರೆಸ್ ಅಭಿಯಾನ

ರಾಜ್ಯ ಸರ್ಕಾರದ ಭ್ರಷ್ಟಆಡಳಿತದ ಬಗ್ಗೆ ಆಕ್ರೋಶಗೊಂಡು ರಾಜ್ಯದ ಜನತೆಯೇ ‘ಪೇ-ಸಿಎಂ’ ಅಭಿಯಾನ ರೂಪಿಸಿದ್ದಾರೆ. ಕಾಂಗ್ರೆಸ್‌ ಜನಪರವಾಗಿದ್ದು ಜನ ಪ್ರೇರಿತ ಅಭಿಯಾನದ ಪರವಾಗಿದೆ ಎಂದು ಅಭಿಯಾನದ ಬಗ್ಗೆ ಕಾಂಗ್ರೆಸ್ ಹೇಳಿ ಕೊಳ್ಳುತ್ತಿದೆ. 

ಆ್ಯಕ್ಟಿವ್ ಆದ ಕಾಂಗ್ರೆಸ್

ನಿರೀಕ್ಷಿಸದ ರೀತಿಯಲ್ಲಿ ಕಾಂಗ್ರೆಸ್ ಅಭಿಯಾನದಿಂದ ಬಿಜೆಪಿ ಎಲ್ಲಿಯೋ ವಿಚಲಿತವಾದಂತೆ ಕಾಣಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇನೂ ಆ್ಯಕ್ಟಿವ್ ಇರದ ಕೈ ಇದೀಗ ಈ ಅಭಿಯಾನದ ಮೂಲಕ ಆಡಳಿತ ಪಕ್ಷವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. 

ಪೇಸಿಎಂ ಜೊತೆ ಬೇರೆ ಬೇರೆ ಪೋಸ್ಟ್

ಪೇಸಿಎಂ ಜೊತೆ ಬಿಜೆಪಿ ಸಚಿವರು, ಸಂಸದರ ಫೋಟೋವನ್ನೂ ಸಹ ಕಾಂಗ್ರೆಸ್ ಕ್ರಿಯೇಟ್ ಮಾಡಿದ್ದು, ಸಂಬಂಧಿಸಿದ ಜನಪ್ರತಿನಿಧಿಗಳ ಹೆಸರಲ್ಲಿ ಕೇಳಿ ಬಂದ ಒಂದು ಹಗರಣವನ್ನು ಹೈಲೈಟ್ ಮಾಡಿ, ಪೋಸ್ಟರ್ ಕ್ರಿಯೇಟ್ ಮಾಡಿದೆ. ಪ್ರತಿಯೊಂದೂ ಪೋಸ್ಟ್ ಜೊತೆಗಿನ ಹಿನ್ನೆಲೆ ಸಂಗೀತದ ಬಗ್ಗೆಯೂ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

ಮತ್ತೆ ಮರಳಿ ಅಧಿಕಾರಕ್ಕೆ ಕಾಂಗ್ರೆಸ್

 ಪೇಸಿಎಂಯೊಂದು ಜನ ಪ್ರೇರಿತ ಅಭಿಯಾನವಾಗಿದ್ದು, ರಾಜ್ಯದ ಪ್ರತಿಯೊಬ್ಬರಿಗೂ ಇದು 40% ಸರ್ಕಾರ ಎಂಬುದು ಗೊತ್ತಿದೆ. ರಾಷ್ಟ್ರದಲ್ಲೇ ಅತಿ ಭ್ರಷ್ಟಸರ್ಕಾರ ರಾಜ್ಯದಲ್ಲಿದೆ. ಹೀಗಾಗಿ ಜನರೇ ಸಾಮಾಜಿಕ ಜಾಲತಾಣಗಳಲ್ಲಿ ಭ್ರಷ್ಟಸರ್ಕಾರದ (Corruption) ವಿರುದ್ಧ ಅಭಿಯಾನ ರೂಪಿಸಿರುವುದಾಗಿ ಕಾಂಗ್ರೆಸ್ ಹೇಳುತ್ತಿದೆ. 

ಇನ್ನಾದರೂ ಬಿಜೆಪಿ ಎಚ್ಚೆತ್ತುಕೊಳ್ಳುತ್ತಾ?

ಭ್ರಷ್ಟಾಚಾರ ಬಿಟ್ಟು ಜನಪರ ಆಡಳಿತ ನೀಡುವ ಬದಲು, ಕಾಂಗ್ರೆಸ್‌ (Congress) ವಿರುದ್ಧ ಆರೋಪದಲ್ಲಿ ಬಿಜೆಪಿ ಸರಕಾರ (BJP Government) ಕಾಲ ಕಳೆಯುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು, ಉತ್ತಮ ಆಡಳಿತ ನೀಡಲು ಬಿಜೆಪಿ ಮುಂದಾಗಬೇಕು. ಭಾವನಾತ್ಮಕ ವಿಚಾರ ಮುಂದಿಟ್ಟು ಜನರನ್ನು ಹೆಚ್ಚು ಕಾಲ ಮರಳು ಮಾಡಲಾಗದು, ಎಂದು ರಾಜ್ಯದ ಜನತೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇಂದು ಪೇಸಿಎಂ ಪೋಸ್ಟರ್‌ ಅಂಟಿಸ್ತೀವಿ: ಡಿಕೆಶಿ, ಸಿದ್ದು ಸವಾಲ್‌

ಈ ಪೋಸ್ಟರ್ಸ್ ಬಗ್ಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪೇಸಿಎಂ ಪೋಸ್ಟರ್‌ ಅಂಟಿಸಿದ್ದಕ್ಕಾಗಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಬಿ.ಆರ್‌. ನಾಯ್ಡು ಸೇರಿ ಕೈ ಕಾರ್ಯಕರ್ತರ ಬಂಧನಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರು ಆಕ್ರೋಶಗೊಂಡಿದ್ದಾರೆ. ‘ಇದಕ್ಕೆ ಪ್ರತಿಯಾಗಿ ಶುಕ್ರವಾರ ಸರ್ಕಾರಿ ಕಟ್ಟಡಗಳ ಮೇಲೆಯೇ ‘ಪೇ-ಸಿಎಂ’ ಪೋಸ್ಟರ್‌ ಅಂಟಿಸುತ್ತೇವೆ. ತಾಕತ್‌ ಇದ್ದರೆ ನಮ್ಮನ್ನು ಬಂಧಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬಂಧನಕ್ಕೆ ಡಿಕೆಶಿ ಅಕ್ರೋಶ

ಪೋಸ್ಟರ್‌ ವಿಚಾರಕ್ಕೆ ಮುಖ್ಯಮಂತ್ರಿಗಳು ಇಷ್ಟು ತಲೆ ಕೆಡಿಸಿಕೊಂಡು ಗಾಬರಿಯಾಗಿರುವುದು ಯಾಕೆ? ರಾಜಕೀಯಲ್ಲಿ ಇರುವವರನ್ನು ಜನ ಟೀಕಿಸುವುದು, ಪ್ರಶ್ನಿಸುವುದು ಸಹಜ. ಇದು ಅಧಿಕಾರ ದುರ್ಬಳಕೆ, ಭಯ ಹಾಗೂ ದ್ವೇಷ ರಾಜಕಾರಣವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪೊಲೀಸರ ಮೂಲಕ ಎಷ್ಟು ಜನರ ಬಾಯಿ ಮುಚ್ಚಚಿಸುತ್ತೀರಿ?

ರಾಜ್ಯದಲ್ಲಿ ಹೊಸ ಕಾನೂನು ಜಾರಿಯಾಗಿದ್ದು, ಲಂಚ ತಿಂದರೆ ಅಪರಾಧವಲ್ಲ. ಲಂಚ ತಿಂದಿದ್ದನ್ನು ಹೇಳಿದರೆ ಅಪರಾಧವಾಗಿದೆ. ಪೊಲೀಸರ ಮೂಲಕ ಎಷ್ಟುಜನರ ಬಾಯಿ ಮುಚ್ಚಿಸುತ್ತೀರಿ? ಎಷ್ಟುಮಂದಿಯನ್ನು ಜೈಲಿಗೆ ಹಾಕ್ತೀರಿ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ. 

ಸಿಎಂ ವಿರುದ್ಧ ವಾಗ್ದಾಳಿ

‘ಏನು ಮುಖ್ಯಮಂತ್ರಿಗಳೇ, ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಈಗ ಯಾರೋ ನಿಮಗೆ ಚುಚ್ಚಿದಕ್ಕೆ ನೋವಾಯ್ತಾ? ನಿಮ್ಮ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರನ್ನು ಬಂಧಿಸಿದ್ದಾರೆ. ನನ್ನ ಮತ್ತು ಡಿ.ಕೆ.ಶಿವಕುಮಾರ್‌ ಬಗ್ಗೆಯೂ ಪೋಸ್ಟರ್‌ (Poster) ಅಂಟಿಸಿದ್ದಾರಲ್ಲಾ? ಅದರ ಬಗ್ಗೆ ಯಾಕೆ ಮೌನವಾಗಿದ್ದೀರಿ? ಪೊಲೀಸರ ಕಣ್ಣು ಈ ವಿಚಾರದಲ್ಲಿ ಯಾಕೆ ಕುರುಡಾಗಿದೆ,’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. 

ತಾರತಮ್ಯವೇಕೆ?

ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿಯೇ ಕಾಂಗ್ರೆಸ್ ವಿರುದ್ಧ ಪ್ರಕಟಿಸಿರುವ ಹೇಳಿಕೆಗಳು, ವಿರೂಪಗೊಳಿಸಿದ ಪೋಟೊಗಳ ವಿವರ ಕೊಡುತ್ತೇನೆ. ಅವರನ್ನೂ ಬಂಧಿಸಿ, ಪ್ರಕರಣ ದಾಖಲಿಸಿ ಎಂದು ಕಾಂಗ್ರೆಸ್ ಬಿಜೆಪಿ ಸರಕಾರಕ್ಕೆ ಆಗ್ರಹಿಸಿದೆ. 

click me!