ಬೀರೂರು (ಮಾ.16): ಬಿಜೆಪಿ ಟಿಕೆಟ್‌ನಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಡಾ। ಮಂಜುನಾಥ್ ಅವರೇನಾದರೂ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾದರೂ ಆಗಬಹುದೇನೋ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಬೀರೂರಿನ ಮಾಜಿ ಸಚಿವ ದಿವಂಗತ ಕೆ.ಎಸ್.ಮಲ್ಲಿಕಾರ್ಜುನ ಪುತ್ರ ಕೆ.ಎಂ.ವಿನಾಯಕ್ ಮನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಜೆಡಿಎಸ್‌ಗೆ ಮೂರು ಸ್ಥಾನ ದೊರಕಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಒತ್ತಾಸೆ ಮೇರೆಗೆ ಅಳಿಯ ಡಾ.ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ರಾಜ್ಯದ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಸೇವೆ ಗಮನಿಸಿ ಅವರು ಡಾ.ಮಂಜುನಾಥ್ ಅವರಿಗೆ ಈ ಅವಕಾಶ ನೀಡಿದ್ದಾರೆ ಎಂದರು.
ಅಭಿಮಾನಿಯನ್ನು ಮಂತ್ರಿ ಮಾಡಲಿಲ್ಲ: ಸಿದ್ದರಾಮಯ್ಯ ಯಾರ್‍ಯಾರನ್ನೋ ಮಂತ್ರಿ ಮಾಡಿದರು. ಆದರೆ ನನ್ನ ಅಭಿಮಾನಿ ದಿ.ಕೃಷ್ಣಮೂರ್ತಿ ಅವರು ಅಷ್ಟು ಬಾರಿ ಗೆದ್ದರೂ ಮಂತ್ರಿ ಮಾಡಲಿಲ್ಲ. ಸಿದ್ದರಾಮಯ್ಯ ಸ್ವಜಾತಿಯವರನ್ನೇ ಬೆಳೆಯಲು ಬಿಡಲಿಲ್ಲ. ಸಿದ್ದರಾಮಯ್ಯ ಬಗ್ಗೆ ಹೆಗಡೆಯವರು ಹಿಂದೆಯೇ ಹೇಳಿದ್ದರು. ಸಿದ್ದರಾಮಯ್ಯ ವಿಚಾರಕ್ಕೆ ಹೆಗಡೆ ಮತ್ತು ನನಗೂ ಹೋರಾಟವೇ ಆಯ್ತು, ಸಿದ್ದರಾಮಯ್ಯ ಮೋಸ ಮಾಡುತ್ತಾರೆ,
ಅವರನ್ನು ಸಚಿವ ಮಾಡಬೇಡ, ಅವರ ಬದಲು ವಾಲ್ಮೀಕಿ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ಮಂತ್ರಿ ಮಾಡು ಎಂದು ಹೆಗಡೆ ಹೇಳಿದ್ದರು. ನನಗೆ ಮಂಡಿ ನೋವಿದೆ, ಆದರೆ ಜ್ಞಾಪಕ ಶಕ್ತಿ ಹಾಗೆಯೇ ಉಳಿದಿದೆ ಎಂದರು. ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ 23 ರಿಂದ 24ಕ್ಕೂ ಹೆಚ್ಚು ಸ್ಥಾನ ಗಳಿಸಲಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ದೇಶ ಮುನ್ನಡೆಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿ ಸೀಟು ಹಂಚಿಕೆಯಲ್ಲಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಒಂದೇ ಒಂದು ಸ್ಥಾನ ಸಿಗದ ಬಗ್ಗೆ ಪರ್ತಕರ್ತರು ಕೇಳಿದ ಪ್ರಶ್ನೆಗೆ, ಉತ್ತರ ಕರ್ನಾಟಕದಲ್ಲಿ ಕಾರ್ಯಕರ್ತರಿದ್ದಾರೆ. ಆದರೆ ನಾಯಕರ ಕೊರತೆ ಇದೆ. ಮೈಸೂರು ಪ್ರಾಂತ್ಯದಲ್ಲಿ ನಾಯಕರೊಂದಿಗೆ ಕಾರ್ಯಕರ್ತರ ಬಲವೂ ಇದೆ. ಮೈತ್ರಿ ಧರ್ಮದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಮುಖ್ಯ. ಹೀಗಾಗಿ ಉತ್ತರ ಕರ್ನಾಟಕ ಅಥವಾ ಇನ್ನಿತರ ಭಾಗ ಎಂಬ ತಾರತಮ್ಯವಿಲ್ಲ ಎಂದರು.