ದಿಲ್ಲಿ ಅಬಕಾರಿ ಹಗರಣದ 8 ಸಮನ್ಸ್‌ಗಳಿಗೆ ಗೈರಾದ ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ದಿಲ್ಲಿ ಜಲಮಂಡಳಿ ಹಗರಣಕ್ಕೆ ಸಂಬಂಧಿಸಿದಂತೆ 2 ಹೊಸ ಸಮನ್ಸ್ ಜಾರಿ ಮಾಡಿದೆ.
ಈ ವಿಷಯವನ್ನು ಆಪ್ ನಾಯಕಿ ಹಾಗೂ ದಿಲ್ಲಿ ಸಚಿವೆ ಅತಿಷಿ ಬಹಿರಂಗಪಡಿಸಿದ್ದು, ಇದು ಯಾವ ಪ್ರಕರಣ ಎಂದೇ ಗೊತ್ತಿಲ್ಲ. ಒಟ್ಟಿನಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸುವ ಉದ್ದೇಶ ಮಾತ್ರ ಇ.ಡಿ.ಗೆ ಇದೆ. ಅದಕ್ಕೆಂದೇ ಸಮನ್ಸ್ ಜಾರಿ ಮಾಡಲಾಗಿದೆ ಎಂದು ದೂರಿದ್ದಾರೆ. ಆದರೆ ಈ ಸಮನ್ಸ್ ಬಗ್ಗೆ ಇ.ಡಿ. ಆಗಲಿ ಅಥವಾ ಸಿಬಿಐ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಏನಿದು ಜಲಮಂಡಳಿ ಹಗರಣ?
ದೆಹಲಿಯ ಜಲಮಂಡಳಿಯು, ಕೆಲ ಉಪಕರಣ ಅಳವಡಿಕೆ ಗುತ್ತಿಗೆಯನ್ನು ಎನ್‌ಕೆಜಿ ಎಂಬ ಕಂಪನಿಗೆ ವಹಿಸಿತ್ತು. ಈ ಕಂಪನಿಗೆ ಗುತ್ತಿಗೆ ಸಿಗುವ ರೀತಿಯಲ್ಲೇ ನಿಯಮ ರೂಪಿಸಲಾಗಿತ್ತು. ಜೊತೆಗೆ ಗುತ್ತಿಗೆದಾರರಿಂದ ಭಾರೀ ಪ್ರಮಾಣದಲ್ಲಿ ಲಂಚ ಸ್ವೀಕರಿಸುವ ಸಲುವಾಗಿ ಗುತ್ತಿಗೆ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಗುತ್ತಿಗೆದಾರರಿಂದ ಲಂಚ ಸ್ವೀಕರಿಸಿದ್ದ ಜಲಮಂಡಳಿ ಎಂಜಿನಿಯರ್ ಜಗದೀಶ್ ಕುಮಾರ್, ಈ ಹಣವನ್ನು ಆಪ್‌ಆದ್ಮಿಕ್ಕೆ ನೀಡಿದ್ದಾರೆ. ಈ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂದು 2022ರಲ್ಲಿ ಸಿಬಿಐ ಕೇಸು ದಾಖಲಿಸಿತ್ತು. ಅದರ ಆಧಾರದಲ್ಲಿ ಇ.ಡಿ. ಕೂಡಾ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿ ತನಿಖೆ ಕೈಗೊಂಡಿದೆ.
ಹೈದರಾಬಾದ್: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅಂದಿನ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜತೆ ಡೀಲ್ ಕುದುರಿಸಿದ್ದ ಬಿಆರ್‌ಎಸ್ ನಾಯಕಿ ಕವಿತಾ, 100 ಕೋಟಿ ರು. ಲಂಚ ನೀಡಿದ್ದರು ಎಂಬ ಸ್ಫೋಟಕ ಮಾಹಿತಿ ಜಾರಿ ನಿರ್ದೇಶನಾಲಯ(ಇ.ಡಿ.)ದ ರಿಮ್ಯಾಂಡ್ ಡೈರಿಯಲ್ಲಿದೆ. ಇದರಿಂದಾಗಿ ಕೇಜ್ರಿವಾಲ್ ಅವರಿಗೆ ಭಾರಿ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಪುತ್ರಿಯಾಗಿರುವ ಹಾಗೂ ಹಾಲಿ ತೆಲಂಗಾಣದ ವಿಧಾನಪರಿಷತ್ ಸದಸ್ಯೆಯಾಗಿರುವ ಕೆ. ಕವಿತಾ, ಇಡೀ ಹಗರಣದಲ್ಲಿ ಪ್ರಮುಖ ಕಿಂಗ್‌ಪಿನ್ ಹಾಗೂ ಮುಖ್ಯ ಸಂಚುಗಾರರಾಗಿದ್ದಾರೆ. ಅಬಕಾರಿ ಹಗರಣದ ಲಾಭಾರ್ಥಿಯಾಗಿದ್ದಾರೆ ಎಂದು ರಿಮ್ಯಾಂಡ್ ಡೈರಿ ಹೇಳುತ್ತದೆ.
ದೆಹಲಿ ಅಬಕಾರಿ ನೀತಿಯ ನಿಯಮ ರಚನೆ ಹಾಗೂ ಅನುಷ್ಠಾನದ ವೇಳೆ ಪ್ರತಿಫಲಾಪೇಕ್ಷೆ ಬಯಸಿ ‘ಸೌತ್ ಗ್ರೂಪ್’ ಜತೆಗೂಡಿ 100 ಕೋಟಿ ರು. ಲಂಚವನ್ನು ಕವಿತಾ ನೀಡಿದ್ದರು ಎಂದು ಇ.ಡಿ. ದೂರಿದೆ. ಈ ಹಗರಣದಲ್ಲಿ ಸೌತ್ ಗ್ರೂಪ್‌ನ ಭಾಗವಾಗಿದ್ದ ‘ಆರೋಬಿಂದೋ’ ಶರತ್, ಮಾಗುಂಟಾ ರಾಘವರೆಡ್ಡಿ, ಮಾಗುಂಟಾ ಶ್ರೀನಿವಾಸುಲು ರೆಡ್ಡಿ ಹೆಸರು ಕೂಡ ಇದೆ. ದೆಹಲಿ ಅಬಕಾರಿ ಹಗರಣ ಸಂಬಂಧ ಇ.ಡಿ. ಕವಿತಾ ಅವರನ್ನು ಶುಕ್ರವಾರ ಬಂಧಿಸಿ ದೆಹಲಿಗೆ ಕರೆದೊಯ್ದಿದೆ. ದೆಹಲಿ ನ್ಯಾಯಾಲಯ ಕವಿತಾ ಅವರನ್ನು ಏಳು ದಿನ ಇ.ಡಿ. ವಶಕ್ಕೆ ಒಪ್ಪಿಸಿದೆ.
6000 ಕೋಟಿ ರು. ಮೌಲ್ಯದ ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ಸಿಗೆ ಭೂಪೇಶ್ ಬಾಫೇಲ್ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ ಪ್ರಕರಣ ದಾಖಲಿಸಿದೆ. ರಾಜನಂದಗಾಂವ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಫೇಲ್ ಹಾಗೂ ಅವರ ಪಕ್ಷಕ್ಕೆ ಈ ಬೆಳವಣಿಗೆಯಿಂದ ಹೊಸ ಸಂಕಷ್ಟ ಎದುರಾಗಿದೆ." ಕಳೆದ ಒಂದು ವರ್ಷದಿಂದ ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿತ್ತು.
ಆ್ಯಪ್ ಸೃಷ್ಟಿಕರ್ತರು ಛತ್ತೀಸ್‌ಗಢ ಮೂಲದವರಾಗಿದ್ದು, ಇದೇ ರಾಜ್ಯದ ಅತ್ಯುನ್ನತ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿತ್ತು. ಅಲ್ಲದೆ ಈ ಸಂಬಂಧ ಛತ್ತೀಸ್‌ಗಢದ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರದಿಯನ್ನೂ ಕೊಟ್ಟಿತ್ತು. ಅದರ ಆಧಾರದಲ್ಲಿ ಇದೀಗ ಬಫೇಲ್ ಸೇರಿ ಆ್ಯಪ್ ಸೃಷ್ಟಿಕರ್ತರಾದ ರವಿ ಉಪ್ಪಲ್, ಸೌರಭ್ ಚಂದ್ರಕರ್, ಶುಭಂ ಸೋನಿ ಮತ್ತು ಅನಿಲ್ ಕುಮಾರ್ ಅಗರವಾಲ್ ವಿವಿಧ 14 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.
ಬಫೇಲ್ ಕಿಡಿ: ಈ ಬಗ್ಗೆ ಬಫೇಲ್ ಪ್ರತಿಕ್ರಿಯಿಸಿ, 'ಮಾರ್ಚ್ 4ರಂದೇ ಎಫ್ ಐಆರ್ ದಾಖಲಾಗಿದ್ದರೂ ಅದನ್ನು ಬಹಿರಂಗ ಮಾಡದೇ ತನಿಖಾ ಸಂಸ್ಥೆ ಮುಚ್ಚಿಟ್ಟಿದೆ. ಅಲ್ಲದೆ ಎಫ್‌ಐಆರ್‌ನಲ್ಲಿ ನನ್ನ ಹೆಸರನ್ನು 6ನೇ ಆರೋಪಿ ಎಂದು ನಮೂದಿಸಲಾಗಿದೆ. ಮೊದಲ 5ಸ್ಥಾನದಲ್ಲಿ ಆ್ಯಪ್ ಬೆಳವಣಿಗೆಯಲ್ಲಿ ಸಹಾಯ ಮಾಡಿದವರು ಎಂದು ನಮೂದಿಸಲಾಗಿದ್ದರೂ ಹೆಸರು ಪ್ರಸ್ತಾಪಿಸಿಲ್ಲ. ಈ ಮೂಲಕ ಇದು ಪಿತೂರಿ ಎಂಬುದು ಸಾಬೀತಾಗಿದೆ' ಎಂದು ಕಿಡಿ ಕಾರಿದರು.