ಯಡಿಯೂರಪ್ಪ ಅಧಿಕಾರದಿಂದ ಇಳಿದರೆ ಮುನಿರತ್ನ ಕಥೆ ಗೋವಿಂದಾ: ಡಿಕೆಶಿ

First Published | Oct 25, 2020, 8:44 AM IST

ಬೆಂಗಳೂರು(ಅ. 25): ಈ ಚುನಾವಣೆಯ ನಂತರ ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರಂತೆ. ಯಡಿಯೂರಪ್ಪ ಅಧಿಕಾರದಿಂದ ಇಳಿದರೆ ಮುನಿರತ್ನ ಕಥೆ ಗೋವಿಂದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಶನಿವಾರ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಪ್ರಚಾರ ನಡೆಸಿದ ಡಿ.ಕೆ ಶಿವಕುಮಾರ್‌
ಮುನಿರತ್ನ ಗೆಲ್ಲುವುದು ಬಿಜೆಪಿಯವರಿಗೇ ಬೇಕಿಲ್ಲ. ಅದಕ್ಕಾಗಿಯೇ ಇದುವರೆಗೂ ಮುಖ್ಯಮಂತ್ರಿ ಯಡಿಯೂರಪ್ಪ, ಸಂತೋಷ್‌ ಸೇರಿದಂತೆ ಯಾರೂ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿಲ್ಲ. ಮುನಿರತ್ನ ಕೂಡ ಯಾಕಾದರೂ ನಾನು ಕಾಂಗ್ರೆಸ್‌ ಬಿಟ್ಟೆನೋ ಎಂದು ಈಗ ಪಶ್ಚತ್ತಾಪ ಪಡುವಂತಾಗಿದೆ ಎಂದ ಡಿಕೆಶಿ
Tap to resize

ಮುನಿರತ್ನ ಕಿರುಕುಳ ನೀಡಿದ, ಸೀರೆ ಎಳೆದ ಎಂದೆಲ್ಲಾ ಗೊಳೋ ಎಂದು ನಮ್ಮ ಮುಂದೆ ಬಂದಿದ್ದ ಕೆಲ ಮಹಿಳಾ ಕಾರ್ಪೊರೇಟರ್‌ಗಳೂ ಇಂದು ಅವರನ್ನೇ ನಂಬಿಕೊಂಡು ಕಾಂಗ್ರೆಸ್‌ ಬಿಟ್ಟಿದ್ದಾರೆ. ಕಾಂಗ್ರೆಸ್‌ ತೊರೆದ ತಪ್ಪಿಗೆ ಕಾರ್ಪೊರೇಟರ್‌ಗಳಾದ ಮಮತಾ, ಆಶಾ ಮತ್ತಿತರ ಕಾರ್ಪೊರೇಟರ್‌ಗಳೂ ಮನೆಯಿಂದ ಹೊರಬಂದು ಜನರಿಗೆ ಮುಖತೋರಿಸಲಾಗದೆ ಅವಿತಿ ಕುಳಿತಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ಕಾಂಗ್ರೆಸ್‌ನಿಂದ ಹೋದವರನ್ನು ಮಂತ್ರಿ ಮಾಡಿದ್ದಕ್ಕೆ ಬಿಜೆಪಿಯಲ್ಲಿ ದುಡಿದ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕರಿಗೆ ನಷ್ಟವಾಗಿದೆ. ಹಾಗಾಗಿ ಬಿಜೆಪಿಯವರೆ ಇದೊಂದು ಬಾರಿ ಮುನಿರತ್ನಗೆ ಅವಕಾಶ ಕೊಡುತ್ತೇವೆ. ಮುಂದಿನ ಬಾರಿ ಅವಕಾಶ ಇರುವುದಿಲ್ಲ ಎಂದಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌, ದಳದ ಕಾರ್ಯಕರ್ತರಿಗೆ ಮುಕ್ತಿ ಸಿಗಬೇಕೆಂದರೆ ಎಂದರೆ ಒಂದೇ ದಾರಿ ಅದು ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರನ್ನು ಗೆಲ್ಲಿಸುವುದು ಎಂದರು.
ಕಳೆದ ಎರಡು ಚುನಾವಣೆಗಳಲ್ಲಿ ಮುನಿರತ್ನ ಗೆಲುವಿಗೆ ನನ್ನನ್ನೂ ಒಳಗೊಂಡು ಕಾಂಗ್ರೆಸ್‌ ಅನೇಕ ನಾಯಕರು, ಕಾರ್ಯಕರ್ತರು ಶ್ರಮಿಸಿದ್ದರು. ಅವರೆಲ್ಲರ ಶ್ರಮವನ್ನು ಮುನಿರತ್ನ 50 ಕೋಟಿಗೆ ಮಾರಿಕೊಂಡಿದ್ದಾರೆ. ಮಾತೃಪಕ್ಷಕ್ಕೆ ದ್ರೋಹ ಮಾಡುವುದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಈ ದ್ರೋಹಕ್ಕೆ ಕ್ಷೇತ್ರದ ಜನ ಅವರಿಗೆ ಸರಿಯಾಗಿ ಬುದ್ಧಿ ಕಲಿಸಲು ಅವಕಾಶ ಸಿಕ್ಕಿದೆ. ಭವಿಷ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.
ಈ ಚುನಾವಣೆಗಾಗಿ ಮುನಿರತ್ನ 25 ಕೋಟಿ ಖರ್ಚು ಮಾಡಿದ್ದಾರಂತೆ. ಅವರು ದುಡ್ಡು ಕೊಟ್ಟರೆ ಯಾರೊಬ್ಬರೂ ಬೇಡ ಅನ್ನ ಬೇಡಿ. ಎಲ್ಲರೂ ಹಣ ತೆಗೆದುಕೊಳ್ಳಿ. ಆದರೆ ಮತವನ್ನು ಮಾತ್ರ ಕಾಂಗ್ರೆಸ್‌ಗೆ ಹಾಕಿ. ‘ಬಿಜೆಪಿ ನೋಟು, ಕಾಂಗ್ರೆಸ್‌ಗೆ ಓಟು, ಕುಸುಮಾಗೆ ಓಟು’ ಇದನ್ನು ಗಮನದಲ್ಲಿಟ್ಟುಕೊಳ್ಳಿ. ನಮ್ಮ ಹೆಣ್ಣು ಮಗಳು ನೊಂದಿದ್ದಾಳೆ. ಎಲ್ಲ ಹೆಣ್ಣು ಮಕ್ಕಳು, ಯುವಕರು, ಎಲ್ಲ ವರ್ಗದವರು ಈ ಹೆಣ್ಣು ಮಗಳಿಗೆ ಆಶೀರ್ವಾದ ಮಾಡಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ಈ ಕ್ಷೇತ್ರದಲ್ಲಿರುವ ಕೆಟ್ಟಹುಳುವನ್ನು ತೆಗಿಯಬೇಕು. ಬಿಜೆಪಿ ಅಭ್ಯರ್ಥಿ ಸೋತರೆ ಪೊಲೀಸರಿಗೂ ಖುಷಿಯಾಗುತ್ತದೆ. ಅವರು ಒಳಗೊಳಗೇ ಕಾಯುತ್ತಿದ್ದಾರೆ ಎಂದರು.

Latest Videos

click me!