ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7 ರಂದು ತಮ್ಮ 14 ನೇ ರಾಜ್ಯ ಬಜೆಟ್ ಅನ್ನು ಮಂಡಿಸಿದರು. 3 ಲಕ್ಷ 27 ಸಾವಿರ ಕೋಟಿ ರೂ. ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅನೇಕ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಕೊಕ್ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 85,818 ಕೋಟಿ ರು. ಸಾಲ ಪಡೆಯಲು ಉದ್ದೇಶಿಸಿದ್ದು, ಆರ್ಥಿಕ ವರ್ಷಾಂತ್ಯಕ್ಕೆ ರಾಜ್ಯದ ಸಾಲದ ಹೊರೆ 5,71,665 ಕೋಟಿ ರು. ತಲುಪುವ ನಿರೀಕ್ಷೆ ಇದೆ. ಮೊದಲ ಬಾರಿಗೆ ಕೊರತೆಯ ಬಜೆಟ್ ಮಂಡಿಸಿರುವುದು ಸಹ ದಾಖಲೆಯಾಗಿದೆ. ಪ್ರಸಕ್ತ ಸಾಲಿನಲ್ಲಿ 2,38,410 ಕೋಟಿ ರು. ರಾಜಸ್ವ ಜಮೆ ಆಗಬಹುದೆಂದು ನಿರೀಕ್ಷಿಸಲಾಗಿದೆ. ಇದರಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು ಜಿಎಸ್‌ಟಿ ಪರಿಹಾರ ಒಳಗೊಂಡಂತೆ 1,75,653 ಕೋಟಿ ರು.ಗಳಾಗಬಹುದೆಂದು ಅಂದಾಜಿಸಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 12,500 ಕೋಟಿ ರು., ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ 37,252 ಕೋಟಿ ರು. ಹಾಗೂ 13,005 ಕೋಟಿ ರುಗಳನ್ನು ಕೇಂದ್ರ ಸರ್ಕಾರದಿಂದ ಸಹಾಯನುದಾನ ರೂಪದಲ್ಲಿ ನಿರೀಕ್ಷಿಸಲಾಗಿದೆ.