'ಜನರ ಕಣ್ಣೀರಿನ ಮೇಲೆ ರಾಜಕೀಯ ಮಾಡುವುದೇ ಕಾಂಗ್ರೆಸ್‌-ಜೆಡಿಎಸ್‌ ಚಾಳಿ'

First Published | Oct 21, 2020, 9:14 AM IST

ಬೆಂಗಳೂರು(ಅ.21): ಸಮಸ್ಯೆಗಳನ್ನು ಜೀವಂತವಾಗಿಟ್ಟು ಜನರ ಕಣ್ಣೀರಿನ ಮೇಲೆ ರಾಜಕೀಯ ಮಾಡುವುದೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಚಾಳಿ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ ಟೀಕಾ ಪ್ರಹಾರ ನಡೆಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನಲ್ಲಿ ನೆಲೆಸಿರುವ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ಸಭೆ ನಡೆಸಿದ ಅವರು, ಇಷ್ಟುವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರಿಗೆ ಸಮಸ್ಯೆಗಳ ಅರಿವೇ ಇರಲಿಲ್ಲ. ಅಭಿವೃದ್ಧಿ, ಜನರ ಕೌಶಲ್ಯ, ಶಿಕ್ಷಣ ಇತ್ಯಾದಿಗಳ ಮಹತ್ವ ಗೊತ್ತಿಲ್ಲದ ನಾಯಕರು ಜನರನ್ನು ಸದಾ ಕತ್ತಲೆಯಲ್ಲೇ ಇಟ್ಟರು. ಈ ಪಕ್ಷಗಳ ನಾಯಕರು ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡುವುದು ಎಲ್ಲಿಂದ ಬಂತು. ಹೀಗಾಗಿ ರಾಜ್ಯ ಸಾಕಷ್ಟು ಬೆಲೆ ತೆತ್ತಿತು ಎಂದು ವಾಗ್ದಾಳಿ ನಡೆಸಿದ ಅಶ್ವತ್ಥ್‌ ನಾರಾಯಣ
ಕೆಲ ನಾಯಕರು ಮತ್ತು ಪಕ್ಷಗಳಿಗೆ ಚುನಾವಣೆ ಎಂದರೆ ಭಾವನಾತ್ಮಕ ವಿಷಯ ಹಾಗೂ ಜಾತಿಯಂತಹ ಸೂಕ್ಷ್ಮ ವಿಚಾರಗಳನ್ನು ಮುನ್ನೆಲೆಗೆ ತಂದು ಬೇಳೆ ಬೇಯಿಸಿಕೊಳ್ಳುವುದು ಅಭ್ಯಾಸವಾಗಿದೆ. ಈ ಚುನಾವಣೆಯಲ್ಲೂ ಅದೇ ಪುನರಾವರ್ತನೆ ಆಗುತ್ತಿದೆ. ಇದು ನಿಜಕ್ಕೂ ಅಸಹ್ಯದ ಪರಮಾವಧಿ. ಅಭಿವೃದ್ಧಿಯ ವಿಷಯ ಬಿಟ್ಟು ಭಾವನಾತ್ಮಕ ವಿಷಯಗಳ ಮೂಲಕ ರಾಜಕೀಯ ಮಾಡುವ ಶಕ್ತಿಗಳಿಗೆ ಪಾಠ ಕಲಿಸಬೇಕು ಎಂದು ಹೇಳಿದರು.
Tap to resize

ಜನರ ಮುಂದೆ ಬಂದಾಗ ಪ್ರಗತಿಯ ಬಗ್ಗೆ ಮಾತನಾಡಬೇಕು. ನಮಗೆ ಹಾಗೆ ಮಾತನಾಡಲು ಧೈರ್ಯವಿದೆ. ಕೈಗಾರಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಸುಧಾರಣೆ ತಿದ್ದುಪಡಿ ಕಾಯ್ದೆ ಇತ್ಯಾದಿಗಳನ್ನು ಜಾರಿಗೆ ತಂದಿದ್ದೇವೆ. ಕೃಷಿಕರ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷಗಳ ನಾಯಕರು ರೈತರಿಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಶಿರಾ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆಯೂ ನನ್ನಲ್ಲಿ ಮಾಹಿತಿ ಇದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಈ ಕ್ಷೇತ್ರದಿಂದ ಗೆಲ್ಲಿಸಲಾಗಿದೆ. ಆದರೆ, ನಿರಂತರವಾಗಿ ಅಲ್ಲಿ ರಾಜಕೀಯ ನಡೆದಿದೆಯೇ ಹೊರತು ಕಿಂಚಿತ್ತೂ ಅಭಿವೃದ್ಧಿಯಾಗಿಲ್ಲ. ಹೆದ್ದಾರಿಗೆ ಹೊಂದಿಕೊಂಡಿರುವ ಆ ಪಟ್ಟಣದಲ್ಲಿ ಒಂದು ಕೈಗಾರಿಕೆ ಇಲ್ಲ. ಕೃಷಿಕರಂತೂ ಕಷ್ಟದ ಜೀವನ ನಡೆಸುತ್ತಿದ್ದಾರೆಂದು ದೂರಿದರು.

Latest Videos

click me!