ಲೋಕಸಭೆ ಚುನಾವಣೆ 2024: 'ಕೈ' ಮುಖಂಡರ ಸಂಬಂಧಿಗಳಿಗೇ ಮಣೆ ಹಾಕಿದ ಕಾಂಗ್ರೆಸ್‌, ಹೊಸ ತಂತ್ರ ಫಲಿಸುತ್ತಾ?

First Published Mar 22, 2024, 2:00 PM IST

ಬೆಂಗಳೂರು(ಮಾ.22): ಲೋಕಸಭೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್‌ ಕೂಡ ಕೆಲವು ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಆದರೆ, ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಇದು ಎಷ್ಟರ ಮಟ್ಟಿಗೆ ಸಫಲವಾಗುತ್ತೆ ಅನ್ನೋದನ್ನ ಚುನಾವಣೆಯ ಫಲಿತಾಂಶದವರೆಗೂ ಕಾಯಲೇಬೇಕಾಗಿದೆ. ಹಾಗಾದ್ರೆ ರಾಜ್ಯ ಯಾವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೊಸ ಅಭ್ಯರ್ಥಿಗಳ ಕಣಕ್ಕಿಳಿಸಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಬೀದರ್: 
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪುತ್ರನಿಗೆ ಟಿಕೆಟ್ ನೀಡುವ ಮೂಲಕ ಕಮಲ ಪಾಳಯದ ಹಾಲಿ ಸಂಸದ ಭಗವಂತ ಖೂಬಾಗೆ ಭಾರಿ ಟಕ್ಕರ್ ನೀಡಲು ತಂತ್ರ ರೂಪಿಸಿದಂತಿದೆ. ಸಾಗರ ಖಂಡ್ರೆ ಅವರು ಬೀದರ್ ಕಾಂಗ್ರೆಸ್ ಲೋಕಸಭಾ ಟಿಕೆಟ್‌ಗಾಗಿ ಕಳೆದ ಐದಾರು ತಿಂಗಳುಗಳ ಹಿಂದೆಯೇ ತಯಾರಿ ನಡೆಸಿದ್ದರು. ಬಿಜೆಪಿಯಿಂದ ಕೇಂದ್ರ ಸಚಿವ ಭಗವಂತ ಖೂಬಾ ಅವರೇ ಸ್ಪರ್ಧಿಸುತ್ತಿದ್ದಾರೆ. 

ಕೊಪ್ಪಳ: 
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಇದುವರೆಗೂ ನಡೆಯುತ್ತಿದ್ದ ಎಲ್ಲ ಚರ್ಚೆಗಳಿಗೂ ಬ್ರೇಕ್ ಹಾಕಲಾಗಿದೆ. ಎರಡು ಬಾರಿ ಜಿಪಂ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ಮತ್ತು ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಕೇವಲ 30 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ರಾಜಶೇಖರ ಹಿಟ್ನಾಳ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿಯಿಂದ ಡಾ.ಬಸವರಾಜ ಕ್ಯಾವತೋರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ

Latest Videos


ಚಿಕ್ಕೋಡಿ: 
ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನಾವಣೆಗೆ ಚಿಕ್ಕೋಡಿಯಿಂದ ಚಿಕ್ಕೋಡಿಯಿಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಅವರನ್ನ ಕಣಕ್ಕಿಳಿಸಿದೆ. ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರೇ ಸ್ಪರ್ಧಿಸಿದ್ದಾರೆ. 

ದಾವಣಗೆರೆ 
ಟಿಕೆಟ್ ವಿಚಾರಕ್ಕೆ ತೀವ್ರ ಗಮನಸೆಳೆದಿದ್ದ ಮಧ್ಯ ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ಕಡೆಗೂ ಡಾ.ಪ್ರಭಾ ಮಲ್ಲಿಕಾರ್ಜುನ್ ರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದೆ. ಕಾಂಗ್ರೆಸ್ಸಿನ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರ ಕಿರಿಯ ಸೊಸೆ ಹಾಗೂ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್‌ರಿಗೆ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿಯಿಂದ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪುತ್ರಿ ಗಾಯತ್ರಿ ಸಿದ್ದೇಶ್ವರ ಅವರು ಸ್ಪರ್ಧೆ ಮಾಡಿದ್ದಾರೆ. 

ಬಾಗಲಕೋಟೆ: 
ಕಳೆದ ಬಾರಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಮಾಜಿ ಸಚಿವ ಅಜಯಕುಮಾರ ಸರನಾಯಕ ಅವರನ್ನು ಬದಿಗಿರಿಸಿ ವಿಜಯಪುರದ ಸಂಯುಕ್ತಾ ಪಾಟೀಲ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಿದೆ. ಸಂಯುಕ್ತಾ ಪಾಟೀಲ ಅವರು ಹಾಲಿ ಸಚಿವ ಶಿವಾನಂದ ಪಾಟೀಲ್‌ ಅವರ ಪುತ್ರಿಯಾಗಿದ್ದಾರೆ. ಬಿಜೆಪಿಯಿಂದ ಪಿ.ಸಿ. ಗದ್ದಿಗೌಡರ್‌ ಅವರು ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. 

ಬೆಳಗಾವಿ: 
ಬೆಳಗಾವಿಯಲ್ಲೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್‌ಗೆ ಕೈ ಟಿಕೆಟ್ ಅಂತಿಮವಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಸಚಿವರ ಮಕ್ಕಳಿಬ್ಬರು ಚುನಾವಣೆ ಆಖಾಡಕ್ಕಿಳಿಯುತ್ತಿರುವುದು ವಿಶೇಷವಾಗಿದೆ. ಇಲ್ಲಿ ಬಿಜೆಪಿಯಿಂದ ಇನ್ನೂ ಯಾರು ಅಭ್ಯರ್ಥಿ ಎಂದು ಫೈನಲ್‌ ಆಗಿಲ್ಲ. 

ಮಂಡ್ಯ 
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಅವರನ್ನ ಕಣಕ್ಕಿಳಿಸಿದೆ. ಈ ಬಾರಿ ಮಂಡ್ಯ ಕ್ಷೇತ್ರ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಅಂತ ಹೇಳಿದ್ದಾರೆ. ಆದರೆ, ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಮಂಡ್ಯ ಕ್ಷೇತ್ರದಕ್ಕೆ ಬಿಜೆಪಿ ಅಥವಾ ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿಯ ಹೆಸರು ಫೈನಲ್‌ ಆಗಿಲ್ಲ. 

ಬೆಂಗಳೂರು ದಕ್ಷಿಣ: 
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮೊದಲಿನಿಂದಲೂ ಸೌಮ್ಯಾರೆಡ್ಡಿ ಅವರನ್ನು ಕಣಕ್ಕೆ ಇಳಿಸುವ ಇರಾದೆ ಕಾಂಗ್ರೆಸ್ ನಾಯಕತ್ವಕ್ಕೆ ಇತ್ತು. ಆದರೆ, ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪುತ್ರಿಯನ್ನು ಕಣಕ್ಕೆ ಇಳಿಸುವ ಮನಸ್ಸು ಇರಲಿಲ್ಲ. ಆದರೆ, ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಮನವೊಲಿಕೆ ನಂತರ ರಾಮಲಿಂಗಾರೆಡ್ಡಿ ಅವರು ಪುತ್ರಿಯನ್ನು ಕಣಕ್ಕೆ ಇಳಿಸಲು ಒಪ್ಪಿಗೆ ನೀಡಿದ್ದಾರೆ.

ಬೆಂಗಳೂರು ಕೇಂದ್ರ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮನ್ಸೂರ್‌ ಅಲಿಖಾನ್‌, ಎಸ್‌.ಎ.ಹುಸೇನ್‌ ಹಾಗೂ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ ಅವರ ಹೆಸರು ಚರ್ಚೆಯಲ್ಲಿತ್ತು. ಅಂತಿಮವಾಗಿ ಮನ್ಸೂರ್‌ ಅಲಿಖಾನ್‌ ಅವರಿಗೆ ಅವಕಾಶ ದೊರೆತಿದೆ.  ಮನ್ಸೂರ್‌ ಅಲಿಖಾನ್‌ ಅವರು ಮಾಜಿ ಸಚಿವ ರೆಹಮಾನ್‌ ಖಾನ್‌ ಅವರ ಪುತ್ರರಾಗಿದ್ದಾರೆ. 

ಶಿವಮೊಗ್ಗ 
ಶಿವಮೊಗ್ಗ ಕ್ಷೇತ್ರದಲ್ಲಿ ಸ್ಯಾಂಡಲ್‌ವುಡ್‌ ನಟ ಶಿವಾರಾಜ್‌ಕುಮಾರ್ ಅವರ ಪತ್ನಿ ಹಾಗೂ ಹಾಲಿ ಸಚಿವ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನ ಗೀತಾ ಶಿವರಾಜ್‌ ಕುಮಾರ್‌ ಎದುರಿಸಲಿದ್ದಾರೆ. 

ಕಲಬುರಗಿ: 
ಕಾಂಗ್ರೆಸ್‌ ಪಕ್ಷ ಡಾ. ರಾಧಾಕೃಷ್ಣ ದೊಡ್ಡಮನಿ ಅವರನ್ನ ಕಲಬುರಗಿ ಅಖಾಡದ ಹುರಿಯಾಳಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಖರ್ಗೆಯವರೇ ಕಣಕ್ಕಿಳಿಲಿದ್ದಾರೆಂಬ ಜಿಜ್ಞಾಸೆ ಇಲ್ಲಿ ಮೊದಲ ಇತ್ತಾದರೂ ಈಚೆಗಿನ ದಿನಗಳಲ್ಲಿ ಸ್ವತಃ ಖರ್ಗೆಯವರೇ ಚುನಾವಣೆಗೆ ಸ್ಪರ್ಧಿಸುವಲ್ಲಿ ನಿರಾಸಕ್ತಿ ವ್ಯಕ್ತಪಡಿಸಿದ್ದರು. ಇದರಿಂದಾಗಿ ಇಲ್ಲಿನ ಶಾಸಕರು, ಪಕ್ಷದ ಮುಖಂಡರು ಖರ್ಗೆ ಸ್ಪರ್ಧೆಯಲ್ಲಿಲ್ಲದ ಕಣದಲ್ಲಿ ಅವರ ಅಳಿಯ ರಾಧಾಕೃಷ್ಣರನ್ನ ಕಣಕ್ಕಿಳಿಸುವಂತೆ ಹೈಕಮಾಂಡ್‌ಗೆ ಆಗ್ರಹಿಸಿದ್ದರು. ಬಿಜೆಪಿಯಿಂದ ಹಾಲಿ ಸಂಸದ ಡಾ.ಉಮೇಶ್‌ ಜಾಧವ್‌ ಅವರು ನಿಂತಿದ್ದಾರೆ. 

click me!