ಕೋಚ್ ಕಾಶೀನಾಥ್ ಮನೆಗೆ ಭೇಟಿಕೊಟ್ಟ ಚಿನ್ನದ ಹುಡುಗ ನೀರಜ್‌ ಚೋಪ್ರಾ

First Published | Aug 24, 2021, 5:35 PM IST

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಜಾವಲಿನ್ ಥ್ರೋ ಮಾಡುವ ಮೂಲಕ ಚಿನ್ನದ ಪದಕ ಗೆದ್ದು ಶತಮಾನದ ಸಾಧನೆ ಮಾಡಿದ್ದರು. ಅಥ್ಲೆಟಿಕ್ಸ್‌ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದ ಹೀರೋ ಆಗಿ ನೀರಜ್ ಚೋಪ್ರಾ ಹೊರಹೊಮ್ಮಿದ್ದಾರೆ. ನೀರಜ್‌ ಚೋಪ್ರಾ ಪದಕ ಗೆದ್ದ ಬೆನ್ನಲ್ಲೇ ಅವರಿಗೆ ಆರಂಭದಲ್ಲಿ ಕ್ಯಾಂಪ್‌ನಲ್ಲಿ ಕೋಚ್‌ ಆಗಿ ಮಾರ್ಗದರ್ಶನ ಮಾಡಿದ್ದ ಕಾಶೀನಾಥ್ ನಾಯ್ಕ್‌ ವಿಡಿಯೋ ಮೂಲಕ ಖುಷಿಯನ್ನು ಹಂಚಿಕೊಂಡಿದ್ದರು. ಬಳಿಕ ಕರ್ನಾಟಕ ರಾಜ್ಯ ಸರ್ಕಾರ 10 ಲಕ್ಷ ಬಹುಮಾನವನ್ನು ಘೋಷಿಸಿತ್ತು. ನಂತರ ಅಥ್ಲೆಟಿಕ್ಸ್‌ ಫೆಡರೇಷನ್ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಅವರ ಒಂದು ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೀಗ ನೀರಜ್ ಚೋಪ್ರಾ ಕೋಚ್‌ ಕಾಶೀನಾಥ್ ಅವರ ಮನೆಗೆ ಭೇಟಿ ನೀಡಿ ಹಲವು ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಈ ಫೋಟೋಗಳನ್ನು ನೋಡಿದ ಮೇಲೆ ನೀವೇ ತೀರ್ಮಾನಿಸಿ ನೀರಜ್-ಕಾಶೀನಾಥ್ ಒಡನಾಟ ಹೇಗಿದೆ ಎಂದು...

ಚಿನ್ನದ ಥ್ರೋ

ಟೋಕಿಯೋ ಒಲಿಂಪಿಕ್ಸ್‌ನ ಕೊನೆಯ ದಿನ ನೀರಜ್ ಚೋಪ್ರಾ ಜಾವಲಿನ್‌ನಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಒಲಿಂಪಿಕ್ಸ್‌ ಇತಿಹಾಸದಲ್ಲಿ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಚಾರಿತ್ರ್ಯಕ ಸಾಧನೆ ಮಾಡಿದ್ದರು. ನೀರಜ್ 87.58 ಮೀಟರ್ ದೂರ ಜಾವಲಿನ್ ಎಸೆದು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.
 

ಗುರುವಿನ ಮಾತು ವೈರಲ್

ನೀರಜ್ ಪದಕ ಜಯಿಸಿದ ಬೆನ್ನಲ್ಲೇ 2015ರಿಂದ 2017ರವರೆಗೆ ನೀರಜ್ ಚೋಪ್ರಾ ಸೇರಿದಂತೆ ಹಲವು ಜಾವಲಿನ್‌ ಪಟುಗಳಿಗೆ ಭಾರತ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದ ಕನ್ನಡಿಗ ಕಾಶೀನಾಥ್ ನಾಯ್ಕ್‌ ವಿಡಿಯೋ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

Tap to resize

ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೋಚ್‌ ಕಾಶೀನಾಥ್ ನಾಯ್ಕ್ ಅವರಿಗೆ 10 ಲಕ್ಷ ರುಪಾಯಿ ಬಹುಮಾನವನ್ನು ಘೋಷಿಸಿತ್ತು. ಇದಾದ ಬಳಿಕ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ನೀಡಿದ ಒಂದು ಹೇಳಿಕೆ ಸಾಕಷ್ಟು ವಿವಾದದ ತಿರುವನ್ನು ಪಡೆದುಕೊಂಡಿತ್ತು.
 

ನೀರಜ್ ಚೋಪ್ರಾ ಜತೆ ಮಾತನಾಡಿದವರೆಲ್ಲಾ ಕೋಚ್ ಎನ್ನಲಾಗದು. ಕಾಶೀನಾಥ್ ನಾಯ್ಕ್ ಎನ್ನುವ ಯಾವುದೇ ಕೋಚ್ ಅನ್ನು ನಾವು ನೇಮಕ ಮಾಡಿರಲಿಲ್ಲ. ಬಹುಮಾನ ಘೋಷಿಸಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ಸಲ್ಲಿಸುತ್ತೇವೆ ಎಂದು ಅದಿಲ್ಲೆ ತಿಳಿಸಿದ್ದರು.

ನೀರಜ್ ಚೋಪ್ರಾ ಅವರಿಗೆ ಮೂವರು ವಿದೇಶಿ ಕೋಚ್‌ಗಳಿಂದ ಕಠಿಣ ತರಬೇತಿ ನೀಡಿದ್ದೆವು. ನೀರಜ್‌ಗೆ ವಿದೇಶಿ ಕೋಚ್‌ಗಳಿಂದ ಕಳೆದ 6 ವರ್ಷಗಳಿಂದ ಒಲಿಂಪಿಕ್ಸ್‌ಗಾಗಿ ತರಬೇತಿ ನೀಡಿದ್ದೆವು. ಇದೀಗ ಯಾರೋ ವ್ಯಕ್ತಿ ಬಂದು ಕೋಚ್ ಎಂದರೆ ಹೇಗೆ ಎಂದು ಅದಿಲ್ಲೆ ಪ್ರಶ್ನಿಸಿದ್ದರು.

ಇದು ವಿವಾದದ ರೂಪ ಪಡೆಯುತ್ತಿದ್ದಂತೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದ ಕೋಚ್ ಕಾಶೀನಾಥ್ ನಾಯ್ಕ್, 2015ರಿಂದ 2017ರ ವರೆಗೆ ನಾನೇ ನೀರಜ್‌ಗೆ ಕೋಚ್‌ ಆಗಿದ್ದೆ. ಆ ಬಳಿಕ ವಿದೇಶಿ ಕೋಚ್‌ಗಳ ಬಳಿ ತರಬೇತಿ ಪಡೆದಿರುವುದಾಗಿ ಮೊದಲೇ ತಿಳಿಸಿದ್ದೆ. ಆದರೆ ಅಥ್ಲೆಟಿಕ್ಸ್‌ ಫೆಡರೇಷನ್ ಅಧ್ಯಕ್ಷರ ಮಾತು ಅಚ್ಚರಿ ತಂದಿದೆ ಎಂದಿದ್ದರು.

ಇವೆಲ್ಲ ಬೆಳವಣಿಗಳ ಬಳಿಕ ಚಿನ್ನದ ಹುಡುಗ ನೀರಜ್ ಚೋಪ್ರಾ ಇಂದು(ಆ.24) ಪೂನಾದ ಕೋರೆಗಾಂವ್‌ನಲ್ಲಿರುವ ಕಾಶೀನಾಥ್ ನಾಯ್ಕ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಕಾಶೀನಾಥ್ ಪತ್ನಿ ಚೈತ್ರಾ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಮನಗೆ ಸ್ವಾಗತಿಸಿದ್ದಾರೆ. 

ಸುಮಾರು ಒಂದು ಗಂಟೆಗಳ ಕಾಲ ಗುರು-ಶಿಷ್ಯರಾದ ಕಾಶೀನಾಥ್ ನಾಯ್ಕ್ ಹಾಗೂ ನೀರಜ್ ಚೋಪ್ರಾ ಒಲಿಂಪಿಕ್ಸ್‌ ಕ್ರೀಡಾಕೂಟದ ಬಗ್ಗೆ ಮಾತುಕತೆ ನಡೆಸಿರುವುದಾಗಿ ಸ್ವತಃ ಕಾಶೀನಾಥ್‌ ಏಷ್ಯಾನೆಟ್‌ ಸುವರ್ಣನ್ಯೂಸ್‌.ಕಾಂ ಗೆ ತಿಳಿಸಿದ್ದಾರೆ.

ನೀರಜ್ ಸಾಧನೆಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ತಮ್ಮ ಒತ್ತಡದ ವೇಳಾಪಟ್ಟಿಯ ಹೊರತಾಗಿಯೂ ಇಂದು ನೀರಜ್ ನಮ್ಮ ಭೇಟಿ ನೀಡಿ ಒಳ್ಳೆಯ ಕ್ಷಣಗಳನ್ನು ನಮ್ಮ ಜತೆ ಕಳೆದರು. ನೀರಜ್ ನಮ್ಮ ಮನೆಗೆ ಭೇಟಿ ಕೊಟ್ಟಿರುವುದು ನಮಗೆಲ್ಲರಿಗೂ ಖುಷಿ ತಂದಿದೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಕಾಶೀನಾಥ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ. 

ಯಾರೋ ಏನೋ ಹೇಳಿದರೂ ಎಂದ ತಕ್ಷಣ ಸತ್ಯ ಸುಳ್ಳಾಗುವುದಿಲ್ಲ, ಈ ವಿವಾದದ ಬಗ್ಗೆ ನೀರಜ್‌ಗೂ ಅರಿವಿದೆ. ಸತ್ಯ ಆದಷ್ಟು ಬೇಗ ಜಗತ್ತಿಗೆ ತಿಳಿಯಲಿದೆ ಎಂದು ಕನ್ನಡಿಗ ಕೋಚ್‌ ಕಾಶೀನಾಥ್‌ ನಾಯ್ಕ್ ತಿಳಿಸಿದ್ದಾರೆ. 

ಕಾಶೀನಾಥ್ ಅವರ ಲ್ಯಾಬ್ರೊಡರ್ ನಾಯಿ ಜತೆ ನೀರಜ್ ಆಟ

ಕಾಶೀನಾಥ್ ಅವರ ಮನೆಗೆ ಬರುತ್ತಿದ್ದಂತೆಯೇ ಕೋಚ್ ಮನೆಯಲ್ಲಿದ್ದ ಲ್ಯಾಬ್ರೊಡರ್ ನಾಯಿಯ ಜತೆ ನೀರಜ್ ಆಟವಾಡಿದ್ದಾರೆ. ಅಂದಹಾಗೆ ನೀರಜ್ ಚೋಪ್ರಾಗೆ ಚಿಕ್ಕವರಿದ್ದಾಗಿನಿಂದಲೂ ನಾಯಿಗಳೆಂದರೆ ಪ್ರೀತಿ

ಯಾರೋ ಏನೋ ಹೇಳಿದರೂ ಎಂದ ತಕ್ಷಣ ಸತ್ಯ ಸುಳ್ಳಾಗುವುದಿಲ್ಲ, ಈ ವಿವಾದದ ಬಗ್ಗೆ ನೀರಜ್‌ಗೂ ಅರಿವಿದೆ. ಸತ್ಯ ಆದಷ್ಟು ಬೇಗ ಜಗತ್ತಿಗೆ ತಿಳಿಯಲಿದೆ ಎಂದು ಕನ್ನಡಿಗ ಕೋಚ್‌ ಕಾಶೀನಾಥ್‌ ನಾಯ್ಕ್ ತಿಳಿಸಿದ್ದಾರೆ. 

Latest Videos

click me!