2026ರಿಂದ ಜಾರಿಗೆ ಬರಲಿರುವ ಯುಪಿಐ ಹೊಸ ನಿಯಮದಂತೆ 2,000 ರೂ. ಮೇಲ್ಪಟ್ಟ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕದ ಬಹುಪಾಲು ಲಾಭ ಸರ್ಕಾರಕ್ಕಲ್ಲ, ಬದಲಾಗಿ ಆ ದೈತ್ಯರ ಜೇಬಿಗೆ ಹೋಗಲಿದೆ ಅದರ ಸಂಪೂರ್ಣ ವಿವರ ಇಲ್ಲಿದೆ.
ನವದೆಹಲಿ: ಭಾರತದಲ್ಲಿ ಯುಪಿಐ (UPI) ಎನ್ನುವುದು ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಿದೆ. ಟೀ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಉಚಿತವಾಗಿ ನಡೆಯುತ್ತಿದ್ದ ಈ ಡಿಜಿಟಲ್ ಪಾವತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ಈಗ ಭಾರಿ ಆರ್ಥಿಕ ಸಂಚಲನವೊಂದು ಸೃಷ್ಟಿಯಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇತ್ತೀಚೆಗೆ ಬಿಡುಗಡೆ ಮಾಡಿರುವ ದತ್ತಾಂಶಗಳು, 'ಉಚಿತ ಸೇವೆ'ಯ ಮುಸುಕಿನ ಹಿಂದೆ ನಿಜಕ್ಕೂ ಹಣ ಯಾರ ಜೇಬಿಗೆ ತಲುಪುತ್ತಿದೆ ಎಂಬ ಅಚ್ಚರಿಯ ಸತ್ಯವನ್ನು ಬಟಾಬಯಲು ಮಾಡಿವೆ.
25
ಎಓಡಿಆರ್ ನಿಯಮ ಮತ್ತು ಸಸ್ಪೆನ್ಸ್!
ಅಕ್ಟೋಬರ್ 15, 2026 ರಿಂದ ಜಾರಿಗೆ ಬರಲಿರುವ ಹೊಸ ನಿಯಮದಂತೆ, ಮಧ್ಯಮ ಮತ್ತು ದೊಡ್ಡ ಮಳಿಗೆಗಳಲ್ಲಿ 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಶೇಕಡಾ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸಲಾಗುತ್ತದೆ. ಮೇಲ್ನೋಟಕ್ಕೆ ಈ ಶುಲ್ಕವು ಸರ್ಕಾರ ಅಥವಾ ನಿಯಂತ್ರಣ ಸಂಸ್ಥೆಗಳ ಖಜಾನೆ ತುಂಬುತ್ತದೆ ಎಂದು ಸಾಮಾನ್ಯ ಜನರು ಭಾವಿಸಿದ್ದರು. ಆದರೆ, ಎನ್‌ಪಿಸಿಐ ದತ್ತಾಂಶವನ್ನು ವಿಶ್ಲೇಷಿಸಿದಾಗ ಹೊರಬಿದ್ದ ಸತ್ಯವೇ ಬೇರೆ. ಈ ಶೇಕಡಾವಾರು ಸಂಗ್ರಹದ ಅಸಲಿ ಸಿಂಹಪಾಲು ತಲುಪುತ್ತಿರುವುದು ಸರ್ಕಾರಕ್ಕಲ್ಲ, ಬದಲಾಗಿ ಖಾಸಗಿ ಬ್ಯಾಂಕುಗಳು ಮತ್ತು ವಿದೇಶಿ ತಂತ್ರಜ್ಞಾನ ದೈತ್ಯ ಕಂಪನಿಗಳ ಜೇಬಿಗೆ.
35
ಯಾರಿಗೆ ಸಿಗಲಿದೆ ಕೋಟಿ ಕೋಟಿ ಲಾಭ?
ಒಟ್ಟು ಸಂಗ್ರಹವಾಗುವ ಎಂಡಿಆರ್ ಶುಲ್ಕದಲ್ಲಿ ಅತಿ ಹೆಚ್ಚು ಪಾಲು ತಲುಪುವುದು ಗ್ರಾಹಕರು ಬಳಸುವ ಬ್ಯಾಂಕ್‌ಗೆ (Customer/Payer's Bank). ಎರಡನೇ ಅತಿ ದೊಡ್ಡ ಪಾಲು ಪಾವತಿ ಸ್ವೀಕರಿಸುವ ವ್ಯಾಪಾರಿಯ ಬ್ಯಾಂಕ್‌ಗೆ (Merchant's Bank) ಸಿಕ್ಕರೆ, ಮೂರನೇ ಪಾಲು PhonePe, Google Pay ನಂತಹ ಯುಪಿಐ ಆ್ಯಪ್‌ಗಳಿಗೆ ಹಾಗೂ ಪೇಮೆಂಟ್ ಪ್ರೊಸೆಸರ್‌ಗಳಿಗೆ ತಲುಪುತ್ತದೆ. ಖಾಸಗಿ ಬ್ಯಾಂಕುಗಳ ಪೈಕಿ ಯೆಸ್ ಬ್ಯಾಂಕ್ (Yes Bank) ಈ ವಹಿವಾಟುಗಳ ಪ್ರಕ್ರಿಯೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಸಿಂಹಪಾಲನ್ನು ತನ್ನದಾಗಿಸಿಕೊಳ್ಳಲಿದೆ. ಇದರ ನಂತರ ಐಸಿಐಸಿಐ ಬ್ಯಾಂಕ್ (ICICI Bank), ಆಕ್ಸಿಸ್ ಬ್ಯಾಂಕ್ (Axis Bank) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು (HDFC Bank) ಅತಿ ಹೆಚ್ಚು ಆದಾಯ ಗಳಿಸಲಿವೆ.
ಮತ್ತೊಂದೆಡೆ, ಭಾರತೀಯರು ಬಳಸುವ ಯುಪಿಐ ಆ್ಯಪ್‌ಗಳ ಪೈಕಿ PhonePe ಮತ್ತು Google Pay ಜಂಟಿಯಾಗಿ ಶೇಕಡಾ 80 ರಷ್ಟು ವಹಿವಾಟು ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದರರ್ಥ, MDR ಸಂಗ್ರಹದಿಂದ ಬರುವ ಸಾವಿರಾರು ಕೋಟಿ ರೂಪಾಯಿ ಲಾಭದ ಬೃಹತ್ ಪಾಲು ನೇರವಾಗಿ ಈ ಎರಡು ಪ್ರಮುಖ ಆ್ಯಪ್ ಕಂಪನಿಗಳ ಖಾತೆ ಸೇರಲಿದೆ. ಲೆಕ್ಕಾಚಾರಗಳ ಪ್ರಕಾರ, ಈ ಹೊಸ ವ್ಯವಸ್ಥೆಯಿಂದ ತಿಂಗಳಿಗೆ ಸುಮಾರು 2,400 ಕೋಟಿ ರೂಪಾಯಿಗಳಷ್ಟು ಆದಾಯ ಸೃಷ್ಟಿಯಾಗಲಿದ್ದು, ಅದರಲ್ಲಿ ಬಹುಪಾಲು ಈ ಖಾಸಗಿ ರಂಗದ ದೈತ್ಯ ಸಂಸ್ಥೆಗಳ ಪಾಲಾಗಲಿದೆ.
55
ಸಾಮಾನ್ಯ ಜನರಿಗೆ ತೊಂದರೆಯಿದೆಯೇ?
ಸಾಮಾನ್ಯ ಗ್ರಾಹಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ (ತಿಂಗಳಿಗೆ 1 ಲಕ್ಷ ರೂ. ವರೆಗೆ ವ್ಯಾಪಾರ ಮಾಡುವವರಿಗೆ) ಈ MDR ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಅಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಹಣ ವರ್ಗಾವಣೆಗೆ ಯಾವುದೇ ಶುಲ್ಕವಿರುವುದಿಲ್ಲ. ಆದಾಗ್ಯೂ, "ಉಚಿತ ಡಿಜಿಟಲ್ ಕ್ರಾಂತಿ"ಯ ಹೆಸರಿನಲ್ಲಿ ದೇಶದ ಹಣಕಾಸು ವ್ಯವಸ್ಥೆಯ ಹಿನ್ನೆಲೆಯಲ್ಲಿ ಬೃಹತ್ ಖಾಸಗಿ ಬ್ಯಾಂಕುಗಳು ಹಾಗೂ ವಿದೇಶಿ ಮೂಲದ ಆ್ಯಪ್‌ಗಳು ಹೇಗೆ ಕೋಟ್ಯಂತರ ರೂಪಾಯಿಗಳ ಸೈಲೆಂಟ್ ಲಾಭ ಗಳಿಸುತ್ತಿವೆ ಎಂಬುದನ್ನು ಎನ್‌ಪಿಸಿಐ ದತ್ತಾಂಶ ಸಾಬೀತುಪಡಿಸಿದೆ.