ವರ್ಷಪೂರ್ತಿ ಹಣ್ಣು ಬಿಡುವ ವಿದೇಶಿ ಮಾವು ಬೆಳೆದ ಬಿಸಿಲನಾಡು ವಿಜಯಪುರದ ಯುವ ರೈತ!

Published : Sep 23, 2025, 09:14 PM IST

vijayapura mango farmer ವಿಜಯಪುರದ ಪದವೀಧರ ಯುವ ರೈತ ನವೀನ ಮಂಗಾನವರ, ಥೈಲ್ಯಾಂಡ್ ಮೂಲದ ಮಾವನ್ನು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ವರ್ಷಪೂರ್ತಿ ಇಳುವರಿ ನೀಡುವ ಈ ಮಾವಿಗೆ ನೇರ ಮಾರುಕಟ್ಟೆ ಸೃಷ್ಟಿಸಿಕೊಂಡು, ಸಚಿವರಿಂದ ಹಾಗೂ ಥಾಯ್ ರೈತರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.

PREV
17
ಪದವೀಧರ ಯುವ ಪ್ರಗತಿಪರ ರೈತ

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ.23) : ಜಿಲ್ಲೆಯ ಪದವೀಧರ ಯುವ ಪ್ರಗತಿಪರ ರೈತರೊಬ್ಬರು ಥೈಲ್ಯಾಂಡ್ ಮೂಲದ ಮಾವು ಬೆಳೆದು ಯಶಸ್ಸು ಸಾಧಿಸಿದ್ದಾರೆ. ಹಣ್ಣಿನ ಸ್ವಾದ ಸವಿದ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಪ್ರಗತಿಪರ ಯುವರೈತ ನವೀನ್ ನನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು. ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ಪದವೀಧರ ಯುವ ಪ್ರಗತಿಪರ ರೈತ ನವೀನ ರಾವುತಪ್ಪ ಮಂಗಾನವರ ಮಂಗಳವಾರ ತಾವು ಬೆಳೆದ ಮಾವಿನೊಂದಿಗೆ ಸಚಿವ ಶಿವಾನಂದ ಪಾಟೀಲ ಅವರ ಭೇಟಿಗೆ ಬಂದಿದ್ದರು.

27
ವಿಷಮುಕ್ತ ಥೈ ಮಾವು ಬೆಳೆ

ನವೀನ್ ಶಿವಣಗಿ ಗ್ರಾಮದ ತಮ್ಮ 8 ರಲ್ಲಿ 7 ಎಕರೆ ಪ್ರದೇಶದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಥೈಲ್ಯಾಂಡ್ ಮೂಲದ ಮಾವು ಬೆಳೆದಿದ್ದಾರೆ. ಈ ಮಾವಿನ ವಿಶೇಷ ಏನೆಂದರೆ ವರ್ಷಪೂರ್ತಿ ಹಣ್ಣು ಬಿಡುತ್ತದೆ ಎಂದು ಸಚಿವರಿಗೆ ವಿವರಿಸಿದರು. 2011 ಡಿಸೆಂಬರ್ ತಿಂಗಳಲ್ಲಿ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದ ನವೀನ ಚಳಿಗಾಲದಲ್ಲಿ ವೈವಿಧ್ಯಮಯ ಗಾತ್ರ, ಬಣ್ಣ, ಸ್ವಾದಗಳ ಮಾವಿನ ಹಣ್ಣುಗಳನ್ನು ಕಂಡು ಅಚ್ಚರಿಗೊಂಡು, ಈ ಹಣ್ಣಿನ ಬಗ್ಗೆ ಕುತೂಹಲ ಬೆಳೆಸಿಕೊಂಡರು.

37
ಸತತ 6 ಬಾರಿ ಥೈಲ್ಯಾಂಡಗೆ ಭೇಟಿ

ಇದಕ್ಕಾಗಿ ಸತತ 6 ವರ್ಷಗಳ ಕಾಲ ಬೇರೆಬೇರೆ ಋತುಮಾನದಲ್ಲಿ ಥ್ಯೈಲೆಂಡಗೆ ಭೇಟಿ ನೀಡಿ, ವರ್ಷಪೂರ್ತಿ ಇಳುವರಿ ಕೊಡುವ ಮಾವಿನ ಅಸಲೀಯತ್ ಏನಿದೆ ಎಂಬ ಮಾಹಿತಿ ಸಂಗ್ರಹಿಸಿದರು. ಅಂತಿಮವಾಗಿ 2021 ರಲ್ಲಿ ವರ್ಷಪೂರ್ತಿ ಇಳುವರಿ ಕೊಡುವ ಥೈಲ್ಯಾಂಡ್ ಮೂಲದ ವಿವಿಧ 20 ತಳಿಯ 5500 ಮಾವಿನ ಸಸಿಗಳನ್ನು ವಿಜಯಪುರದ ಶಿವಣಗಿ ತೋಟಕ್ಕೆ ತಂದು ನಾಟಿ ಮಾಡಿದರು. ಒಂದೂ ವರೆ ವರ್ಷದಲ್ಲಿ ಇಳುವರಿ ಆರಂಭಗೊಂಡರೂ ಸಂತೃಪ್ತನಾಗದ ಪ್ರಯೋಗಶೀಲ ಯುವ ರೈತ, ಪ್ರತಿ ತಳಿಯ ಬಣ್ಣ, ಗಾತ್ರ, ಸ್ವಾದಗಳ ಅವಲೋಕನದಲ್ಲಿ ತೊಡಗಿದರು. ಇದಕ್ಕಾಗಿ 5 ವರ್ಷ ಕಾಲ ಪ್ರತಿ ಗಿಡದ ಹಣ್ಣಿನ ಸ್ವಾದ ಪರೀಕ್ಷಿಸಿದ ಸಾವಯವ ಪ್ರಗತಿಪರ ರೈತ ನವೀನ ಗರಿಷ್ಠ ಗುಣಮಟ್ಟ ಹಾಗೂ ಗ್ರಾಹಕರ ಆಕರ್ಷಣೆಯ ತಳಿಯನ್ನು ಉಳಿಸಿಕೊಂಡು ಬಂದಿದ್ದಾಗಿ ಹಾಗೂ ಸ್ವಾದ ರಹಿತ ಗಿಡಗಳನ್ನು ಕಿತ್ತು ಹಾಕಿ ಗುಣಮಟ್ಟದ ಉತ್ಕೃಷ್ಟತೆಗೆ ಆದ್ಯತೆ ನೀಡಿದ್ದಾಗಿ ವಿವರ ನೀಡಿದರು.

47
ನೇರ ಮಾರುಕಟ್ಟೆ

ವರ್ಷಪೂರ್ತಿ ಫಲ ನೀಡುವ ಥೈಲ್ಯಾಂಡ್ ಮಾವಿನ ಮಾರಾಟಕ್ಕೆ ಮಧ್ಯವರ್ತಿ ಬದಲಾಗಿ ತಾವೇ ನೇರ ಮಾರುಕಟ್ಟೆ ಕಂಡುಕೊಂಡಿದ್ದಾರೆ. ವರ್ಷಪೂರ್ತಿ ಫಲ ನೀಡುವ ಈ ವಿದೇಶಿ ಹಣ್ಣಿಗೆ ವರ್ಷದುದ್ದಕ್ಕೂ 1200 ರೂ. ದರ ಇರಿಸಿದ್ದಾರೆ. ವಿಜಯಪುರ ಮಾತ್ರವಲ್ಲದೆ ಬೆಂಗಳೂರು, ಹೈದರಾಬಾದ್ ನಲ್ಲೂ ವಿಶಿಷ್ಟ ಸ್ವಾದದ ಮಾವಿನ ಹಣ್ಣಿಗೆ ಗ್ರಾಹಕರನ್ನು ಸೃಷ್ಟಿಸಿಕೊಂಡಿದ್ದಾಗಿ ಸಚಿವರಿಗೆ ಮಾಹಿತಿ ನೀಡಿದರು.

57
ಶಿವಣಗಿ ಬರ್ತಾರಂತೆ ಥೈ ರೈತರು!

ಭಾರತದ ವಿಜಯಪುರ ಜಿಲ್ಲೆಯ ಗರಿಷ್ಠ ಉಷ್ಣ ಪ್ರದೇಶದ ಶಿವಣಗಿ ಗ್ರಾಮದಲ್ಲಿ ಬೆಳೆದ ತಮ್ಮ ದೇಶದ ಮಾವಿನ ಹಣ್ಣಿನ ರುಚಿ ಆಸ್ವಾದಿಸಿರುವ ಥೈಲ್ಯಾಂಡ್ ರೈತರಿಗೂ ಮುಟ್ಟಿಸಿದ್ದಾರೆ. ಬಸವನಾಡಿನ ಮಣ್ಣು, ನೀರು, ಹವಾಗುಣದಲ್ಲಿ ಬೆಳೆದಿರುವ ಥೈಲ್ಯಾಂಡ್ ಮಾವು ಮೂಲ ನೆಲದಲ್ಲಿಗಿಂತ ಇಲ್ಲಿ ಅತಿ ಉತ್ಕೃಷ್ಟ ರುಚಿ-ಸ್ವಾದ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶೀಘ್ರವೇ ಶಿವಣಗಿ ಗ್ರಾಮದ ತಮ್ಮ ಮಾವಿನ ತೋಟಕ್ಕೆ ಥೈಲ್ಯಾಂಡ್ ರೈತರು ಭೇಟಿ ನೀಡಲು ಯೋಜಿಸಿದ್ದಾಗಿ ನವೀನ್ ಮಂಗಾನವರ ಅವರು ಸಚಿವ ಶಿವಾನಂದ ಪಾಟೀಲ ಅವರಿಗೆ ವಿವರಿಸಿದರು.

67
ನೋ ಕೆಮಿಕಲ್, ನೈಸರ್ಗಿಕ ಗೊಬ್ಬರ ಬಳಕೆ!

ಮೇಲು ಗೊಬ್ಬರವಾಗಿ ಎರೆಹುಳು ಗೊಬ್ಬರ, ತಾಪಮಾನ ತಡೆಯಲು ಪಾಚಿ ಮುಚ್ಚಿಗೆ, ಚಳಿ ತಡೆಯಲು ಪಾರಿವಾಳದ ಹಿಕ್ಕೆ, ಸಾವಯವ ಬೆಲ್ಲ, ಕಡಲೆ ಹಿಟ್ಟನ್ನು ಗೋಮೂತ್ರದಲ್ಲಿ ಬೆರೆಸಿ ನೀಡುತ್ತಿರುವ ಸಹೋದರ ನವೀನನ ಪ್ರಯೋಗಶೀಲತೆ, ವಿಶಿಷ್ಟ ಸಾವಯವ ಕೃಷಿ ವಿಧಾನದ ಕುರಿತು ಶಿಕ್ಷಕರಾಗಿರುವ ಪ್ರಗತಿಪರ ರೈತ ಶಿವಾನಂದ ಮಂಗಾನವರ ಸಚಿವ ಶಿವಾನಂದ ಪಾಟೀಲ ಅವರ ಎದುರು ಬಿಚ್ಚಿಟ್ಟರು.

77
ಯುವ ರೈತ ವಿನಯ ಕಾರ್ಯಕ್ಕೆ ಸಚಿವರಿಂದ ಶ್ಲಾಘನೆ..!

ಹತ್ತಾರು ಎಕರೆ ಜಮೀನು, ನೀರು ಇದ್ದರೂ ಯುವ ರೈತರು ಹಲವು ಕಾರಣಗಳಿಂದ ಸೋಲು ಎದುರಿಸಲಾಗದೇ ನಗರೀಕರಣದತ್ತ ವಲಸೆ ಹೊರಟಿದ್ದಾರೆ. ಆದರೆ ಬಿ.ಎ. ಪದವಿ ಪಡೆದಿರುವ ಯುವ ರೈತ ನವೀನ ವಿಷಮುಕ್ತ ತೋಟಗಾರಿಕೆಯಲ್ಲಿ ತೊಡಗಿದ್ದಾರೆ. ಕೃಷಿಯಿಂದ ವಿಮುಖರಾಗಿರುವ ರೈತರ ಮಧ್ಯೆ ಸಾಹಸಿ ಯುವಕೃಷಿಕ ನವೀನ ವಿಭಿನ್ನವಾಗಿ ಸಾಧನೆ ಮಾಡಿದ್ದಾರೆ. ಸಾವಯವ ಕೃಷಿಕ ಪ್ರಗತಿಪರ ಯುವ ರೈತ ನವೀನ ಮಾದರಿ ಹಾಗೂ ಅನುಕರಣೀಯ ಎನಿಸಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ಶ್ಲಾಘಿಸಿದರು. ಸ್ವಯಂ ದ್ರಾಕ್ಷಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಾರರಾದ ಸಚಿವ ಶಿವಾನಂದ ಪಾಟೀಲ ಅವರನ್ನು ತಮ್ಮ ತೋಟಕ್ಕೆ ಭೇಟಿ ನೀಡುವಂತೆ ನವೀನ್ ಆಹ್ವಾನಿಸಿದಾಗ ಸಚಿವರು ಸಮ್ಮತಿಸಿದರು

Read more Photos on
click me!

Recommended Stories