ಮಂಗಳವಾರ ನೈಋುತ್ಯ ರೈಲ್ವೆಯು ಒಂದು ವಿಸ್ಟಾಡೋಮ್ ಬೋಗಿಯನ್ನು ಸ್ವೀಕರಿಸಿದೆ. ಈ ವಿಶಿಷ್ಟ ಬೋಗಿಯನ್ನು ಬೆಂಗಳೂರು-ಮಂಗಳೂರು ಹಗಲು ರೈಲಿಗೆ ಅಳವಡಿಸುವ ಸಾಧ್ಯತೆಯಿದ್ದು, ಶೀಘ್ರದಲ್ಲೇ ಈ ಮಾರ್ಗದ ಪ್ರಯಾಣಿಕರು ಪ್ರಯಾಣದ ವೇಳೆ ಪ್ರಕೃತಿಯ ಸೌಂದರ್ಯ ಸವಿಯಬಹುದಾಗಿದೆ.
ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ ಸುಬ್ರಮಣ್ಯ ರಸ್ತೆ- ಸಕಲೇಶಪುರ ಘಟ್ಟಪ್ರದೇಶ ನಡುವಿನ 55 ಕಿ.ಮೀ. ಉದ್ದದಲ್ಲಿ ದಟ್ಟಾರಣ್ಯ, ಜಲಪಾತಗಳು, ಸೇತುವೆಗಳು ಸೇರಿದಂತೆ ಪ್ರಕೃತಿಯ ವಿಹಂಗಮ ನೋಟ ಕಣ್ತುಂಬಿಕೊಳ್ಳಬಹುದು. ಈ ಬೋಗಿಯಲ್ಲಿ ಪ್ರಯಾಣಿಸಲು ಪ್ರತ್ಯೇಕ ದರ ನಿಗದಿಗೊಳಿಸುವ ಸಾಧ್ಯತೆಯಿದೆ.
ರೈಲ್ವೆ ಸಚಿವಾಲಯ ನೈಋುತ್ಯ ರೈಲ್ವೆಗೆ ನಾಲ್ಕು ವಿಸ್ಟಾಡೋಮ್ ಬೋಗಿ ಮಂಜೂರು ಮಾಡಿದ್ದು, ಸದ್ಯ ಒಂದು ಬೋಗಿ ಸೇರ್ಪಡೆಗೊಂಡಿದೆ. ಉಳಿದ ಮೂರು ಬೋಗಿಗಳು ಮುಂದಿನ ತಿಂಗಳು ನೈಋುತ್ಯ ರೈಲ್ವೆಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಈ ಬೋಗಿಗಳನ್ನು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್, ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ಹಾಗೂ ವಾಸ್ಕೋ ಡಾ ಗಾಮ-ವೇಲಾಂಕಣಿ ಎಕ್ಸ್‌ಪ್ರೆಸ್ ರೈಲುಗಳಿಗೆ ಅಳವಡಿಸುವ ಸಾಧ್ಯತೆಯಿದೆ.
ಈ ವಿಸ್ಟಾಡೋಮ್ ಬೋಗಿಯಲ್ಲಿ 40 ಸುಸಜ್ಜಿತ ಆಸನಗಳು ಇರಲಿವೆ. ಪ್ರತಿ ಆಸನ 360 ಡಿಗ್ರಿ ಕೋನದಲ್ಲಿ ಸುತ್ತುವ ವ್ಯವಸ್ಥೆ ಹೊಂದಿರಲಿವೆ. ಹವಾನಿಯಂತ್ರಿತ ಈ ಬೋಗಿಯಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವನ್, ಪುಟ್ಟರೆಫ್ರಿಜರೇಟರ್‌ಗಳು ಸೇರಿದಂತೆ ಹಲವು ಸೌಲಭ್ಯಗಳಿರಲಿವೆ ಎಂದು ನೈಋುತ್ಯ ರೈಲ್ವೆ ಮೂಲಗಳು ತಿಳಿಸಿವೆ.